ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ಮುಖಭಂಗ

ತುಮಕೂರು

    ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರು, ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು 12,887 ಮತಗಳ ಅಂತರದಲ್ಲಿ ಪರಾಭವಗೊಳಿಸಿ ಐದನೇ ಬಾರಿಗೆ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.

      ಸ್ವಕ್ಷೇತ್ರ ಹಾಸನ ಬಿಟ್ಟು ತುಮಕೂರಿನಲ್ಲಿ ತಮ್ಮ ರಾಜಕೀಯ ಶಕ್ತಿ ಮುಂದುವರೆಸಲು ಬಂದಿದ್ದ ದೇವೇಗೌಡರು ಸೋತು ಮುಖಭಂಗ ಅನುಭವಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿ ಸಂಬಂಧಕ್ಕೂ ಪೆಟ್ಟುಬಿದ್ದಿದೆ. ಅಂತಿಮವಾಗಿ ಜಿ ಎಸ್ ಬಸವರಾಜು 5,94,011 ಮತ ಪಡೆದರೆ, ದೇವೇಗೌಡರು 5,81,624 ಮತ ಗಳಿಸಿದರು.

      ಜಿ ಎಸ್ ಬಸವರಾಜು ಅವರು ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆ ಮೀರಿದ ಮುನ್ನಡೆ ಸಾಧಿಸಿದ್ದು ಅವರ ಗೆಲುವಿಗೆ ಅನುಕೂಲವಾಯಿತು. ತುಮಕೂರು ನಗರ 10, 386, ತುಮಕೂರು ಗ್ರಾಮಾಂತರ 8,000, ಗುಬ್ಬಿ 3800, ಮಧುಗಿರಿ 9270, ತಿಪಟೂರು 12, 054 ಮತಗಳು ಸಮೀಪ ಸ್ಪರ್ಧಿ ದೇವೇಗೌಡರಿಗಿಂತಾ ಅಧಿಕವಾಗಿ ಜಿಎಸ್‍ಬಿಗೆ ದೊರೆತವು.ದೇವೇಗೌಡರಿಗೆ ಚಿಕ್ಕನಾಯಕನಹಳ್ಳಿ 6,500, ತುರುವೇಕೆರೆ 15,000, ಕೊರಟಗೆರೆ 4, 600 ಮತಗಳು ಬಿಜೆಪಿ ವಿರುದ್ಧ ಮುನ್ನಡೆ ತಂದುಕೊಟ್ಟವು.

      ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಕೊಂಚ ಮುನ್ನಡೆ ಸಿಕ್ಕಿದೆ. ಆದರೆ, ಸಚಿವ ಜೆಡಿಎಸ್‍ನ ಎಸ್ ಆರ್ ಶ್ರೀನಿವಾಸ್ ಅವರ ಕ್ಷೇತ್ರ ಗುಬ್ಬಿಯಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಹಿನ್ನಡೆಯಾಗಿದೆ. ಇದು ಸಚಿವ ಶ್ರೀನಿವಾಸ್ ಅವರ ಮುಖಭಂಗಕ್ಕೂ ಕಾರಣವಾಗಿದೆ. ಜೆಡಿಎಸ್ ಶಾಸಕ ಗೌರಿಶಂಕರ್ ಪ್ರತಿನಿಧಿಸುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ದೇವೇಗೌಡರಿಗೆ ಹಿನ್ನಡೆಯಾಗಿ ಬಿಜೆಪಿ ಪ್ರಾಬಲ್ಯ ಕಂಡುಬಂದಿದೆ.

       ಮಧುಗಿರಿಯಲ್ಲೂ ದೇವೇಗೌಡರಿಗೆ ನಿರಾಶೆಯಾಗಿದೆ. ಇಲ್ಲಿ ಜೆಡಿಎಸ್ ಶಾಸಕ ಎಂ ವಿರಭದ್ರಯ್ಯ ತಮ್ಮ ಪಕ್ಷದ ಅಭ್ಯರ್ಥಿಗೆ ಅಧಿಕ ಮತ ಕೊಡಿಸಲಾಗಿಲ್ಲ. ಬಿಜೆಪಿಗೆ ನೆಲೆಯೇ ಇಲ್ಲ ಎನ್ನುವ ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜು ಜೆಡಿಎಸ್‍ಗಿಂತಾ 9,270 ಹೆಚ್ಚು ಮತ ಪಡೆದಿದ್ದಾರೆ.

        ಆದರೆ, ಬಿಜೆಪಿ ಶಾಸಕರಿರುವ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 12,34,563 ಮತಗಳು ಚಲಾವಣೆಯಾಗಿದ್ದವು.ಕೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಸಿಪಿಐನ ಎನ್.ಶಿವಣ್ಣ 17,222 ಮತ ಪಡೆದು ಮೂರನೇ ಸ್ಥಾನದಲ್ಲಿ ಗಮನ ಸೆಳೆದಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಕೆ.ಸಿ.ಹನುಮಂತರಾಯ-6013 , ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಛಾಯಾ ರಾಜಶಂಕರ್- 4398 , ಅಂಬೇಡ್ಕರ್ ಸಮಾಜ್ ಪಾರ್ಟಿ ಅಭ್ಯರ್ಥಿ ಮಹಾಲಕ್ಷ್ಮೀ ಸಿ.ಪಿ-4211, ಪಕ್ಷೇತರರಾದ ಕಪನಿಗೌಡ-1136, ಟಿ.ಎನ್. ಕುಮಾರಸ್ವಾಮಿ  -2566, ಜಿ.ನಾಗೇಂದ್ರ-3050, ಪ್ರಕಾಶ್ ಆರ್.ಎ ಜೈನ್ – 1277, ಬಿ.ಎಸ್.ಮಲ್ಲಿಕಾರ್ಜುನಯ್ಯ-1269, ಡಿ.ಶರದಿಶಯನ-1452, ಕೆ.ವಿ.ಶ್ರೀನಿವಾಸ್ ಕಲ್ಕೆರೆ-1959, ಜೆ.ಕೆ.ಸಮಿ-3453, ಸಿದ್ದರಾಮೇಗೌಡ ಟಿ.ಬಿ.-7637 ಮತಗಳನ್ನು ಗಳಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ನೋಟಾ

       ಕಣದಲ್ಲಿರುವ ಯಾವ ಅಭ್ಯರ್ಥಿಯ ಬಗ್ಗೆ ಒಲವಿಲ್ಲ ಎಂದು ಆ ಅಭ್ಯರ್ಥಿ ವಿರುದ್ಧ ಮತಾಭಿಪ್ರಾಯ ದಾಖಲಿಸುವ ನೋಟಾವನ್ನು 10,285 ಮತದಾರರು ಬೆಂಬಲಿಸಿ ಮತಚಲಾಯಿಸಿದ್ದಾರೆ. ಪಡೆದಿರುವ ಅಭ್ಯರ್ಥಿಗಳ ಮತಗಳ ಪೈಕಿ ನೋಟಾಕ್ಕೆ ನಾಲ್ಕನೇ ಸ್ಥಾನ ದೊರಕಿದೆ. 611 ಮತಗಳು ತಿರಸ್ಕøತಗೊಂಡಿವೆ. ಒಟ್ಟು 321 ಅಂಚೆ ಮತಗಳ ಪೈಕಿ 13 ಮತಗಳನ್ನು ತಿರಸ್ಕರಿಸಲಾಯಿತು. 64 ಮತಗಳು ಅಪಮೌಲ್ಯಗೊಂಡಿವೆ. 244 ಮತಗಳು ಅರ್ಹಗೊಂಡಿದ್ದು, ಅವುಗಳ ಪೈಕಿ ದೇವೇಗೌಡರಿಗೆ 67, ಜಿ.ಎಸ್.ಬಸವರಾಜು -164, ಎನ್.ಶಿವಣ್ಣ-03, ಛಾಯಾ ರಾಜಶಂಕರ್-04, ಮಹಾಲಕ್ಷ್ಮೀ-02, ಟಿ.ಎನ್.ಕುಮಾರಸ್ವಾಮಿ, ಪ್ರಕಾಶ್ ಆರ್.ಎ. ಜೈನ್ ಹಾಗೂ ಬಿ.ಎಸ್.ಮಲ್ಲಿಕಾರ್ಜುನಯ್ಯ ತಲಾ 01 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 01 ಮತ ಲಭ್ಯವಾಗಿದೆ.

     ಆರಂಭದ ಒಂದೆರಡು ಸುತ್ತುಗಳಲ್ಲಿ ದೇವೇಗೌಡರು ಮುನ್ನಡೆ ಪಡೆದರಾದರೂ ನಂತರದ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದರು. ಬದಲಿಗೆ ಜಿ.ಎಸ್.ಬಸವರಾಜು ಮುನ್ನಡೆ ಕಾಯ್ದುಕೊಳ್ಳುತ್ತಾ ಹೋದರು. ಜಿ.ಎಸ್.ಬಸವರಾಜು ಅವರ ಗೆಲುವಿನೊಂದಿಗೆ ತುಮಕೂರು ಲೋಕಸಭಾ ಕ್ಷೇತ್ರವು ಮತ್ತೆ ಬಿಜೆಪಿಗೆ ಒಲಿದಿದ್ದು, ಇಲ್ಲಿಂದ ಮತ್ತೊಂದು ಅವಧಿಗೆ ಅಧಿಕಾರ ಬಯಸಿ ಬಂದಿದ್ದ ದೇವೇಗೌಡರನ್ನು ಮತದಾರರು ತಿರಸ್ಕರಿಸಿದ್ದಾರೆ.

      ಸುಮಾರು 10 ವರ್ಷಗಳ ಕಾಲ ಬಿಜೆಪಿ ತೆಕ್ಕೆಯಲ್ಲಿದ್ದ ತುಮಕೂರು ಲೋಕಸಭಾ ಕ್ಷೇತ್ರವನ್ನು 2014ರ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರು ಕೈವಶ ಮಾಡಿಕೊಂಡಿದ್ದರು. ಆಗ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜು ಎರಡನೇ ಸ್ಥಾನದಲ್ಲಿದ್ದರು. ಈ ಬಾರಿಯೂ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ನಿರೀಕ್ಷೆ ಇದ್ದಿತ್ತಾದರೂ ಮೈತ್ರಿ ಧರ್ಮ ಪಾಲನೆಯಲ್ಲಿ ಆ ಅವಕಾಶ ತಪ್ಪಿ ಹೋಗಿ ವಿಜಯದ ಸರಮಾಲೆ ಜಿ.ಎಸ್.ಬಸವರಾಜು ಅವರ ಕೊರಳಿಗೆ ಬಿದ್ದಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link