ಹೊಸಪೇಟೆ :
ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬುಧವಾರ ವಿಜಯನಗರ ಕ್ಷೇತ್ರದ ಕಲ್ಲಹಳ್ಳಿ ರಾಜಾಪುರ ರಸ್ತೆಯ ಕಣವಿರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಪ್ರಾರಂಭಿಸಿದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ದೇವೇಂದ್ರಪ್ಪ ಉಸಿರು ನಿಲ್ಲುವ ಮುನ್ನ ಏನಾದರೂ ಹೆಸರು ಮಾಡು ಎನ್ನುವ ಗಾದೆ ಮಾತಿನಂತೆ ನಾನು ಚುನಾವಣೆಯಲ್ಲಿ ಬರೀ ಭರವಸೆಗಳನ್ನು ನೀಡದೇ ಕೆಲಸ ಮಾಡಿ ತೋರಿಸಬೇಕು ಎಂಬ ಛಲವಿದೆ. ಬಿಜೆಪಿಗೆ ಹಳ್ಳಿ ಹಳ್ಳಿ ಮಟ್ಟದಲ್ಲಿ ಕಾರ್ಯಕರ್ತರ ಪಡೆಯಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಹಾಗು ದೇಶದ ಅಭಿವೃದ್ದಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ಸರಳ ಸಜ್ಜನಿಕೆಯುಳ್ಳ ವ್ಯಕ್ತಿಯಾಗಿದ್ದಾರೆ. ಪಕ್ಷ ಅವರ ವ್ಯಕ್ತಿತ್ವ ನೋಡಿ ಟಿಕೆಟ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕು ಎಂದರು.
ಕಾಂಗ್ರೆಸ್ ಸೇರ್ಪಡೆ ಊಹಾಪೋಹ :
ಮಾಜಿ ಶಾಸಕ ಗವಿಯಪ್ಪ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆಯಲ್ಲಾ ? ಎಂಬ ಸುದ್ದಿಗಾರರ ಪ್ರಶ್ನೆಗೆ “ಇದೆಲ್ಲ ಊಹಾಪೋಹ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್, ಹಾಗು ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದ್ದು ನಿಜ. ಆದರೆ ನಾನು ಸ್ಪಷ್ಟವಾಗಿ ಕಾಂಗ್ರೆಸ್ ಸೇರುವುದಿಲ್ಲ ಎಂದು ತಿಳಿಸಿದ್ದೇನೆ ಎಂದರು.
ಬಳಿಕ ಅಭ್ಯರ್ಥಿ ದೇವೇಂದ್ರಪ್ಪ ಕಲ್ಲಹಳ್ಳಿ, ರಾಜಾಪುರ, ಪಾಪಿನಾಯಕನಹಳ್ಳಿ, ಕಾಕುಬಾಳು, ಗಾದಿಗನೂರು, ಕಮಲಾಪುರ, ಮಲಪನಗುಡಿ, ಸೀತಾರಾಮ ತಾಂಡ ಹಾಗು ನಾಗೇನಹಳ್ಳಿಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಿದರು.ಈ ಸಂಧರ್ಭದಲ್ಲಿ ಮಾಜಿ ಎಂಎಲ್ಸಿಮೃತ್ಯುಂಜಯ ಜಿನಗಾ, ಮಂಡಲ ಅಧ್ಯಕ್ಷ ಅನಂತ ಪಧ್ಮನಾಭ, ಮುಖಂಡರಾದ ಕಿಶೋರ ಪತ್ತಿಕೊಂಡ, ಒಬಿಸಿ ರಾಜ್ಯ ಉಪಾಧ್ಯಕ್ಷ ಯಮುನಪ್ಪ, ಬಸವರಾಜ ನಾಲತವಾಡ, ಪ್ರೊ.ಪನ್ನಂಗಧರ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಗುದ್ಲಿ ಪರಶುರಾಮ, ಕಟಿಗಿ ರಾಮಕೃಷ್ಣ, ಗುಂಡಿ ಉಮೇಶ, ಮೇಟಿ ಪಂಪಾಪತಿ, ಚಂದ್ರಶೇಖರ, ಎನ್.ತಿಪ್ಪೇಸ್ವಾಮಿ, ಮಾಧ್ಯಮ ಸಂಚಾಲಕ ಶಂಕರ ಮೇಟಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ