ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಕಂದಿಕೆರೆ ಗ್ರಾಮದೇವತೆ ರೇಣುಕಯಲ್ಲಮ್ಮ ದೇವಿಯ ಅಗ್ನಿಕೊಂಡೋತ್ಸವ ಸಂದರ್ಭದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.
ಕಂದಿಕೆರೆ ಜಾತ್ರೆಯಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಗ್ರಾಮದ ಕೆಲ ಯುವಕರು ದೂರು ನೀಡಿದ್ದ ಹಿನ್ನಲೆಯಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಸುರೇಶ್, ಸಬ್‍ಇನ್ಸ್‍ಪೆಕ್ಟರ್ ಶಿವರಾಜು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ ಅಗ್ನಿಕುಂಡೋತ್ಸವ ಮುಗಿಯವವರೆವಿಗೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಜಾತ್ರೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು 40ಕ್ಕೂ ಹೆಚ್ಚು ಪೋಲಿಸ್ ಪೇದೆಗಳನ್ನು ನಿಯೋಜಿಸಲಾಗಿತ್ತು, ಅಧಿಕಾರಿಗಳ ನೇತೃತ್ವದಲ್ಲಿ ಅಸ್ಪøಶ್ಯತ ಆಚರಣೆ ವಿರೋಧ ಕಾಯ್ದೆಯ ಫಲಕವನ್ನು ದೇವಸ್ಥಾನದ ದ್ವಾರದಲ್ಲಿ ಹಾಕುವ ಮೂಲಕ ಎಚ್ಚರಿಕೆ ನೀಡಲಾಯಿತು.
ರೇಣುಕಾದೇವಿಯ ಜಾತ್ರೆ : ತಾಲ್ಲೂಕಿನ ಕಂದಿಕೆರೆಯ ಶ್ರೀರೇಣುಕಯಲ್ಲಮ್ಮ ದೇವಿಯ ಜಾತ್ರಾಯು ಏ.30ರಿಂದ ಆರಂಭವಾಗಿದ್ದು ಮೇ 7ರವರೆಗೆ ನಡೆಯಲಿದೆ.
30ರಂದು ಧ್ವಜಾರೋಹಣ ಹಾಗೂ ಆರತಿ ಬಾನ, ಹತ್ತಿಅಲಂಕಾರ ಹಾಗೂ ಗಣಪತಿ ಪೂಜೆ, ಶ್ರೀರೇಣುಕಯಲ್ಲಮ್ಮದೇವಿಗೆ ಅಭಿಷೇಕ ಕುಂಕುಮಾರ್ಚಾನೆ, ಮಹಾಮಂಗಳಾರತಿ ನಡೆದಿದೆ. ಮೇ.1ರಂದು ಭಕ್ತರಿಂದ ಅಗ್ನಿಕುಂಡ, ಹೂವಿನ ಅಲಂಕಾರಸೇವೆ ಮತ್ತು ರಾತ್ರಿ 8.30ಕ್ಕೆ ರಾಜಾಸತ್ಯವ್ರತ ಹಾಗೂ ಶನಿಪ್ರಭಾವ ನಾಟಕ ಏರ್ಪಡಿಸಲಾಗಿತ್ತು.
ಮೇ 2ರಂದು ಬೆಳಗ್ಗೆ 5.30ಕ್ಕೆ ಗ್ರಾಮದಲ್ಲಿ ಮಂಗಳಸ್ನಾನ, ಗಂಗಾಪೂಜೆ, ಪ್ರಸನ್ನೋತ್ಸವ, ನಂತರ ಯಲ್ಲಮ್ಮದೇವಿಯ ಉತ್ಸವ, 3ರಂದು ರೇಣುಕಯಲ್ಲಮ್ಮದೇವಿಯ ರಥೋತ್ಸವ ನಡೆಯಲಿದೆ. 4ರಂದು ಶನೇಶ್ವರ ಸ್ವಾಮಿಯ ಉತ್ಸವ, ಆರತಿಬಾನ, ಸಿಡಿಸೇವೆ ಕಾರ್ಯಕ್ರಮ ನಡೆಯಲಿದೆ.