ದಾವಣಗೆರೆ:
ವಕೀಲಿ ವೃತ್ತಿಯೊಂದಿಗೆ ಮೌಲ್ಯಗಳು ಸೇರಿದರೆ, ಸ್ವಸ್ಥ್ಯ ಸಮಾಜ ನಿರ್ಮಾಣವಾಗಲಿದೆ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಪ್ರತಿಪಾದಿಸಿದರು.ನಗರದ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಶನಿವಾರ ಜಿಲ್ಲಾ ವಕೀಲರ ಸಂಘದಿಂದ ಏರ್ಪಡಿಸಿದ್ದ ವಕೀಲರ ವೃತ್ತಿ ಒಂದು ಚಿಂತನ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಕೀಲಿ ವೃತ್ತಿಯು ಅತ್ಯಂತ ಶ್ರೇಷ್ಠ ಹಾಗೂ ಸೇವಾ ಮನೋಭಾವನೆಯಿಂದ ಕೂಡಿದ್ದು, ಈ ವೃತ್ತಿಯೊಂದಿಗೆ ಮೌಲ್ಯಗಳು ಬೆಸೆದರೆ ಸಮಾಜದ ಪ್ರತಿಯ ಜೊತೆಗೆ ಸ್ವಾಸ್ಥ್ಯ ಸಮಾಜವೂ ನಿರ್ಮಾಣವಾಗಲಿದೆ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೀರ್ತಿ ವಕೀಲರಿಗೆ ಸಲ್ಲಲಿದೆ. ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವದ ವಹಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ, ಮೋತಿಲಾಲ್ ನೆಹರು, ಸರದಾರ್ ವಲ್ಲಭಬಾಯಿ ಪಟೇಲ್, ಜವಾಹರ್‍ಲಾಲ್ ನೆಹರು ಅವರೆಲ್ಲರೂ ವಕೀಲರೇ ಆಗಿದ್ದರು. ಸ್ವಾತಂತ್ರ್ಯದ ನಂತರ ರಚಿಸಲಾದ ಭಾರತ ಸಂವಿಧಾನವೂ ವಕೀಲರಾದ ಅಂಬೇಡ್ಕರ್ ಅವರಿಂದಲೇ ಎಂಬುದು ಗಮನಾರ್ಹ. ಈ ದೇಶಕ್ಕೆ ವಕೀಲರು ನೀಡಿರುವ ಕೊಡುಗೆ ಅತ್ಯಂತ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ವಕೀಲರಾದವರು ಸಮರ್ಥವಾಗಿ ವಾದ ಮಾಡಲು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು. ಕಾನೂನಿನ ಅಭ್ಯಾಸ ಮಾಡಬೇಕು. ಇದರಿಂದ ತನ್ನ ಕಕ್ಷಿದಾರನಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದ ಅವರು, ನ್ಯಾಯಕ್ಕಾಗಿ ಬರುವ ಕಕ್ಷಿದಾರನಿಗೆ ಆದಷ್ಟು ಬೇಗನೆ ನ್ಯಾಯವನ್ನು ಒದಗಿಸಿ ಕೊಡುವುದು ವಕೀಲರ ಕರ್ತವ್ಯವಾಗಬೇಕೆಂದು ಸಲಹೆ ನೀಡಿದರು.
ಇತ್ತೀಚೆಗೆ ವ್ಯಾಜ್ಯಗಳು ಆದಷ್ಟು ಬೇಗ ಇತ್ಯರ್ಥವಾಗದೇ ಬಹಳಷ್ಟು ಪ್ರಕರಣಗಳು ಹಾಗೆಯೇ ಉಳಿದಿವೆ. ಇದಕ್ಕೆ ವಕೀಲರಲ್ಲಿ ವೃತ್ತಿ ಕೌಶಲ್ಯವಿಲ್ಲದಿರುವುದೇ ಕಾರಣವಾಗಿದೆ. ಇದರಿಂದ ವಕೀಲರು ವೃತ್ತಿಯಲ್ಲಿ ಬದಲಾವಣೆ ಮಾಡಿಕೊಂಡು, ಉತ್ಸಾಹದೊಂದಿಗೆ ಪ್ರತಿ ಕೋರ್ಟ್ ಕಲಾಪದಲ್ಲಿ ಭಾಗಿಯಾಗಿ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಕಕ್ಷಿದಾರರು ನ್ಯಾಯಾಲಯ ಹಾಗೂ ವಕೀಲರ ಮೇಲೆ ಅತಿಯಾದ ವಿಶ್ವಾಸವನ್ನು ಹೊಂದಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ, ನೊಂದುಕೊಂಡ ಬಂದವರಿಗೆ ಸಮಾಧಾನ ಹೇಳುವುದರ ಜೊತೆಗೆ ಕಾನೂನಿನ ಚೌಕಟ್ಟಿನಲ್ಲಿಯೇ ಲೋಕ ಅದಾಲತ್, ಮಧ್ಯಸ್ಥಿಕೆಯೊಂದಿಗೆ ಅವರಿಗೆ ನ್ಯಾಯ ಒದಗಿಸಿ, ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಕುಲಕರ್ಣಿ ಅಂಬಾದಾಸ್ ಮಾತನಾಡಿ, ವಕೀಲರ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಅವರಿಗೆ ಮಾಹಿತಿ ಇರುವುದು ಅಗತ್ಯವಾಗಿದ್ದರಿಂದ, ಎಲ್ಲಾ ಕ್ಷೇತ್ರಗಳನ್ನು ಅಧ್ಯಯನ ಮಾಡಬೇಕು. ದೇವರು ವಕೀಲರಿಗೆ ವಿಶೇಷ ಜ್ಞಾನ ನೀಡಿದ್ದು, ಇವರಲ್ಲಿ ಹಣಕ್ಕಿಂತ ಜ್ಞಾನವೇ ಹೆಚ್ಚಾಗಿರುತ್ತದೆ ಎಂದು ಹೇಳಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಎಚ್.ದಿವಾಕರ್ ಸ್ವಾಗತಿಸಿದರು. ಅನುಪಮ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
