ಆಯುರ್ವೇದ ಬಗ್ಗೆ ವಿಶ್ವಾಸರ್ಹತೆ ಮೂಡಿಸಿ

ದಾವಣಗೆರೆ :

       ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ, ವಿಶ್ವಾಸರ್ಹತೆ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.

      ನಗರದ ಸದ್ಯೋಜಾತ ಮಠದಲ್ಲಿ ಸೋಮವಾರ ಆಯುಷ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಅಶ್ವಿನಿ ಆಯುರ್ವೇದಿಕ್ ಕಾಲೇಜ್ ಮತ್ತು ತಪೋವನ ಆಯುರ್ವೇದಿಕ್ ಕಾಲೇಜ್, ಕೆಜಿಎಎಂಓಎ, ಎಎಫ್‍ಐ, ಎನ್‍ಐಎಂಎ ಜಿಲ್ಲಾ ಘಟಕ, ಆಯುರ್ವೇದ ಔಷಧಿ ಪ್ರತಿನಿಧಿಗಳು, ವಿತರಕರು ಮತ್ತು ಮಾರಾಟಗಾರರು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಯೋಗ ಒಕ್ಕೂಟ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಆಶ್ವಾಸನೆ ನೀಡಬೇಕು. ಜನರು ನಮಗೆ ಬೇರೆ ಯಾವುದೇ ಔಷಧಿ ಬೇಡ, ಇದೇ ಔಷಧಿಬೇಕೆಂದು ಕೇಳುವಂತೆ ಆಯುರ್ವೇದ ಕ್ಷೇತ್ರದಲ್ಲಿ ನೀವು ಕೆಲಸ ಮಾಡಬೇಕಾಗಿದೆ. ಕೊಳಚೆ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಅರಿವು ಮೂಡಿಸಿ ಅಲ್ಲಿನ 10 ಜನಕ್ಕಾದರೂ ಉತ್ತಮ ಚಿಕಿತ್ಸೆ ನೀಡಿ ವಿಶ್ವಾಸರ್ಹತೆ ಬೆಳೆಸಬೇಕೆಂದು ಕಿವಿಮಾತು ಹೇಳಿದರು.

     ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ, ಆಧುನಿಕ ನಾಗಾಲೋಟದ ಈ ಯುಗದಲ್ಲಿ ಜನರು ಯಾವುದೇ ದೈಹಿಕ ತೊಂದರೆಗಳಿಗೆ ತತ್‍ಕ್ಷಣದ ನಿವಾರಣೆ ಬಯಸುತ್ತಾರೆ. ಆಯುರ್ವೇದ ಪದ್ದತಿಯಲ್ಲಿ ತಕ್ಷಣ ಉಪಶಮನವಾಗದಿದ್ದರೂ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸಮಸ್ಯೆಗೆ ನಿಧಾನ ಪರಿಹಾರ ದೊರೆಯಲಿದೆ. ತಮ್ಮ ತೆಲಗಿ ಕ್ಷೇತ್ರದ ರಾಗಿಮಸಲವಾಡ ಗ್ರಾಮದಲ್ಲಿ ಸುಮಾರು 250ರಿಂದ 280 ಜನರು ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಾವು ಸಹ ಆಯುಷ್ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಜನರೂ ಈ ಪದ್ಧತಿಯ ಬಗ್ಗೆ ಒಲವು ತೋರಬೇಕು ಎಂದರು.

        ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ಆಯುಷ್ ವಿಭಾಗಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಸವಲತ್ತುಗಳನ್ನು ನೀಡುತ್ತಿವೆ. ಈ ವೈದ್ಯಕೀಯ ಪದ್ದತಿಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಇದನ್ನು ಅನುಸರಿಸಿದಲ್ಲಿ ಉತ್ತಮ ಆರೋಗ್ಯ ಪಡೆಯುವಲ್ಲಿ ಸಂಶಯವಿಲ್ಲ. ಇಂತಹ ವೈದ್ಯ ಪದ್ದತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಒಂದೊಂದು ಆಯುರ್ವೇದ ಶಾಖೆ ತೆರೆಯಬೇಕು ಎಂದರು.

        ಜಿ.ಪಂ.ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಾವು ಏನನ್ನು ತಿನ್ನುತ್ತೇವೆ, ಎಂತಹ ಅಭ್ಯಾಸಗಳನ್ನು ಇಟ್ಟುಕೊಂಡಿದ್ದೇವೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ಹಿಂದೆಲ್ಲ ರೈತರು ಸಾವಯವ ಕೃಷಿ ಮಾಡುತ್ತಿದ್ದರು. ಇಂದು ಕ್ರಿಮಿ-ಕೀಟನಾಶಕ, ರಾಸಾಯನಿಕಗಳನ್ನು ಬಳಸಿ ಬೆಳೆ ಬೆಳೆಯುವುದರಿಂದ ವಿಷಪೂರಿತ ಆಹಾರ ಸೇವಿಸುತ್ತಿದ್ದೇವೆ. ಆದ್ದರಿಂದ ಮೊದಲು ಎಲ್ಲರೂ ಸಾವಯವ ಕೃಷಿಯಿಂದ ಬೆಳೆ ಬೆಳೆಯುವುದನ್ನು ಅಳವಡಿಸಿಕೊಳ್ಳಬೇಕು ಎಂದರು.

      ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಮನುಷ್ಯನ ಆಯುಷ್ಯ ವೃದ್ಧಿಯಲ್ಲಿ ಆಯುಷ್ ಪಾತ್ರ ದೊಡ್ಡದಾಗಿದೆ. ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲವೆಂಬಂತೆ ಆಯುಷ್ ಪದ್ದತಿ ಇದೆ. ಈಗ ಎಲ್ಲೆಡೆ ಆಯುರ್ವೇದ ಸೌಲಭ್ಯಗಳು ಲಭ್ಯವಿದ್ದು, ಜನರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

        ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಲೀಲಕ್ಕ ಮಾತನಾಡಿ, ಆರೋಗ್ಯ ಶರೀರಕ್ಕೆ ಅರಮನೆ ಇದ್ದಂತೆ. ಕಲುಷಿತ ವಾತಾವರಣ, ಕಲುಷಿತ ಮಾನಸಿಕ ಸ್ಥಿತಿಯಿಂದಾಗಿ ಇಂದು ನಾವೆಲ್ಲಾ ಒಂದಿಲೊಂದು ರೋಗಕ್ಕೆ ತುತ್ತಾಗಿದ್ದೇವೆ. ಈ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಪದ್ದತಿಯಲ್ಲಿ ಪರಿಹಾರವಿದೆ. ಅದನ್ನು ನಾವು ಕಟ್ಟುನಿಟ್ಟಿನಿಂದ ಕಂಡುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಅಶ್ವಿನಿ ಆಯುರ್ವೇದ ಕಾಲೇಜಿನ ಆರ್‍ಎಂಓ ಡಾ ಜ್ಞಾನೇಶ್ವರ್, ತಪೋವನ ಕಾಲೇಜಿನ ಪ್ರಾಂಶುಪಾಲ ಡಾ. ರವೀಂದ್ರ, ಡಾ.ಹಿರೇಮಠ್ ಮಾತನಾಡಿದರು. ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಶಂಕರ್‍ಗೌಡ ಸ್ವಾಗತಿಸಿದರು. ಡಾ. ಪ್ರಭು ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link