ಹಾವೇರಿ
ಬುದ್ಧಿವಂತಿಕೆ, ಸಕಾರಾತ್ಮಕ ಚಿಂತನೆಯೊಂದಿಗೆ ಕೃಷಿಯನ್ನು ಅತ್ಯಂತ ಲಾಭದಾಯಕ ಉದ್ಯೋಗವಾಗಿ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಶಿಗ್ಗಾಂವ ತಾಲೂಕು ಹುಲಗೂರಿನ ರೈತ ಚೆನ್ನಪ್ಪ ಶೆಟ್ಟರ ಅವರ ಡಿಜೆ ತೆಂಗಿನ ತಳಿ ಬೆಳೆ ತೋಟದಲ್ಲಿ ರೈತ ಕ್ಷೇತ್ರ ಅಧ್ಯಯನ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಈ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಅವರು ಕೃಷಿಯಲ್ಲಿ ಆಧುನಿಕತೆ, ಬಹು ಬೆಳೆ ಪದ್ಧತಿ ಹಾಗೂ ಸಂಘಟಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ ದೇಶ ಭಾರತ ದೇಶವಾಗಿದೆ. ರೈತರೇ ನಮ್ಮ ದೇಶದ ಭವಿಷ್ಯದ ನಿಜವಾದ ವಾರಸುದಾರರು. ಕೃಷಿಯಲ್ಲಿ ಬುದ್ಧಿವಂತಿಕೆ, ಶ್ರಮವಹಿಸಿದರೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆಸುವ ಸಾಮಥ್ರ್ಯ ನಮ್ಮ ದೇಶದ ರೈತರಿಗೆ ಇದೆ ಎಂದು ಅವರು ಹೇಳಿದರು.
ಕೃಷಿಯ ಬಗ್ಗೆ ನಕಾರಾತ್ಮಕವಾದ ಚಿಂತನೆಯನ್ನು ದೂರಮಾಡಿ, ಆಧುನಿಕ ತಂತ್ರಜ್ಞಾನ, ನಬಾರ್ಡ್‍ನಂತಹ ಸಂಸ್ಥೆಗಳ ನೆರವು, ನರೇಗಾ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ಯೋಜನೆಗಳ ಮಾಹಿತಿಯನ್ನು ಪಡೆಯಿರಿ. ಸಂಘಟಿತವಾದ ಕೃಷಿಯ ಮೂಲಕ ಅತ್ಯಂತ ಲಾಭದಾಯಕ ಉದ್ಯೋಗವಾಗಿ ಕೃಷಿಯನ್ನು ಬೆಳೆಸಿ ಎಂದು ರೈತರಿಗೆ ಸಲಹೆ ನೀಡಿದರು.
ಸಣ್ಣಪುಟ್ಟ ಉದ್ಯೋಗಕ್ಕಾಗಿ ನಗರವನ್ನು ಆಶ್ರಯಿಸುವ ಯುವಕರು ಕೃಷಿಯ ಬಗ್ಗೆ ಆಸಕ್ತಿಯನ್ನು ತೋರಬೇಕು. ಉತ್ಪಾದಕ ಸಂಘ-ಸಂಸ್ಥೆಗಳನ್ನು ಹಳ್ಳಿಗಳಲ್ಲಿ ಸ್ಥಾಪನೆ ಮಾಡಬೇಕು. ಬ್ಯಾಂಕಿನಿಂದ ನೆರವು ಪಡೆಯಬೇಕು. ಕೃಷಿಯಲ್ಲಿ ಹೊಸ ಬೇಸಾಯ ಕ್ರಮ, ಹೊಸ ತಳಿಗಳ ಬೆಳೆಯಲು ಆಸಕ್ತಿ ತೋರಬೇಕು. ಆಹಾರ ಸಂಸ್ಕರಣೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಸಾಧಿಸಿ ವೈಜ್ಞಾನಿಕವಾಗಿ ಕೃಷಿಯನ್ನು ಕೈಗೊಂಡರೆ ತನ್ನ ಹುಟ್ಟೂರಲ್ಲೇ ಸಿರಿತನದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಬೆಳೆ ಕುರಿತಂತೆ ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು. ಬೆಳೆಸಾಲ ಕುರಿತಂತೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ ಮಾಹಿತಿ ನೀಡಿದರು.
ಗಮನ ಸೆಳೆದ ತೆಂಗಿನ ತೋಟ: ಡಿಜೆ ಸಂಪೂರ್ಣ ಎಂಬ ನೂತನ ತೆಂಗಿನ ತಳಿಯ ಫಸಲು ಎಲ್ಲರ ಗಮನ ಸೆಳೆಯಿತು. ಗಿಡ ನೆಟ್ಟ ಎರಡು ವರ್ಷದಲ್ಲೇ ಫಲ ನೀಡುವ ಡಿಜೆ ತಳಿಯ ತೆಂಗಿನ ಮರ ಐದನೂರಕ್ಕೂ ಅಧಿಕ ತೆಂಗಿನ ಫಸಲವನ್ನು ನೀಡುತ್ತದೆ. ಪ್ರತಿ ತೆಂಗಿನ ಕಾಯಿಯಲ್ಲಿ ಮುಕ್ಕಾಲು ರಿಂದ ಒಂದು ಲೀಟರ್ ವರೆಗೆ ಎಳೆ ನೀರು ಇರುವ ಈ ಅಪರೂಪದ ತೆಂಗಿನ ತಳಿಯನ್ನು ಹುಲಗೂರಿನ ಚೆನ್ನಪ್ಪ ಶೆಟ್ಟರ ಬೆಳೆಸಿದ್ದಾರೆ. ಈ ತಳಿ ಅತ್ಯಂತ ಲಾಭದಾಯಕವಾಗಿದ್ದು, ಮಿಶ್ರ ಬೆಳೆಯಾಗಿ ಅತ್ಯಂತ ಲಾಭ ತರುವ ಬೆಳೆಯಾಗಿ ಬೆಳೆಯಬಹುದು ಎಂದು ತೋಟಗಾರಿಕೆ ಇಲಾಖೆಯ ತಜ್ಞರು ಪ್ರಾತ್ಯಕ್ಷೀತೆ ಮೂಲಕ ರೈತರ ಗಮನ ಸೆಳೆದರು.
ಈ ತಳಿಗೆ ಮಾರುಹೋದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರೊಂದಿಗೆ ತೆಂಗಿನ ಗಿಡದೆದರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.ಸಮಾರಂಭದಲ್ಲಿ ಹಿರೇಮಣಕಟ್ಟಿ ಶ್ರೀಗಳಾದ ವಿಶ್ವರಾಧ್ಯ ಶಿವಾಚಾರ್ಯರು, ಸವಣೂರು ಉಪವಿಭಾಗಾಧಿಕಾರಿ ಹರ್ಷಲ್, ತಹಶೀಲ್ದಾರ ಶಿವಾನಂದ ರಾಣೆ, ನಬಾರ್ಡ್ ವ್ಯವಸ್ಥಾಪಕ ಮಹದೇವ ಕೀರ್ತಿ, ಪ್ರಗತಿಪರ ರೈತ ಚೆನ್ನಪ್ಪ ಗುದ್ದಿಶೆಟ್ಟರ ಹಾಗೂ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ