ತಂತ್ರಜ್ಞಾನದ ಜೊತೆಗೆ ಪುಸ್ತಕ ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ : ಸುನೀಲ್‍ಕುಮಾರ

ಬೆಂಗಳೂರು

       ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ. ದಿನನಿತ್ಯ ಪುಸ್ತಕಗಳನ್ನು ಹಿಡಿಯುವ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‍ಗಳು ತಾಂಡವವಾಡುತ್ತಿವೆ. ಇದರಿಂದ ಕ್ಷಣಿಕಮಾತ್ರದ ವಿಷಯಗಳು ದೊರೆಯುತ್ತವೆಯೆ ಹೊರತು, ನಿರಂತರವಲ್ಲ ಎನ್ನುವುದನ್ನು ಯುವಜನತೆ ಮನಗಾಣಬೇಕು ಎಂದು ಪೊಲೀಸ್ ಆಯುಕ್ತ ಸುನೀಲ್‍ಕುಮಾರ ತಿಳಿಸಿದರು.

        ಹಿಂದೆ ಸಮಾಜದ ಆಗುಹೋಗುಗಳ ಬಗ್ಗೆ ವೃತ್ತ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವುದರಿಂದ ತಿಳಿಯುತ್ತಿದ್ದೆವು. ಆದರೆ ಈಗ ಯಾವುದೇ ಶ್ರಮವಿಲ್ಲದೆ ಟಿ.ವಿ, ಇಂಟರ್ನೆಟ್ ಹಾಗೂ ಮೊಬೈಲ್‍ಗಳಲ್ಲಿ ಎಲ್ಲವನ್ನೂ ತಿಳಿಯುತ್ತೇವೆ. ಆದರೆ ಯಾವುದೇ ರೀತಿಯ ಜ್ಞಾನ ವೃದ್ಧಿಯಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

        ನಗರದ ಪತ್ರಕರ್ತರ ಭವನದಲ್ಲಿ ನಡೆದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಬರೆದಿರುವ `ದೇಶದ ಚಿತ್ತ ಯುವಜನರತ್ತ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ತಂತ್ರಜ್ಞಾನದ ಜೊತೆಗೆ ಪುಸ್ತಕ ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ. ಇದರಿಂದ ಸುಪ್ತವಾಗಿ ಅಡಗಿರುವ ಜ್ಞಾನ ವೃದ್ಧಿಯಾಗು ವುದಲ್ಲದೆ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

       ಕಷ್ಟಪಟ್ಟು ಓದಿದ ವಿದ್ಯೆ ಶಾಶ್ವತವಾಗಿ ಮನದಾಳದಲ್ಲಿ ಇರುತ್ತದೆ. ವಿದ್ಯೆಯೆಂಬ ಸಂಪತ್ತಿನ ಮುಂದೆ ಯಾವ ಸಂಪತ್ತು ಶಾಶ್ವತವಲ್ಲ. ಈ ಸಂಪತ್ತನ್ನು ಖರ್ಚು ಮಾಡಿದಷ್ಟು ಹೆಚ್ಚುತ್ತಲೇ ಇರಲಿದ್ದು ಪುಸ್ತಕ ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.

        ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಎಲ್ಲವೂ ಕ್ಷಣಾರ್ದದಲ್ಲಿ ಲಭ್ಯವಾಗುತ್ತದೆ. ತಂತ್ರಜ್ಞಾನ ಅಭಿವೃದ್ಧಿಯ ಸಂಕೇತವಾದರೆ, ಪುಸ್ತಕಗಳು ಜ್ಞಾನಾಭಿವೃದ್ಧಿಯ ಸಂಕೇತ. ನಿರಂತರ ಅಧ್ಯಯನದಿಂದ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಜ್ಞಾನ ಹೆಚ್ಚಾಗಿ ಅಭಿವೃದ್ಧಿ ಪಥದತ್ತ ಸಾಗುವ ಚಿಂತನೆಗಳು ಸಾಕಾರವಾಗುತ್ತದೆ ಎಂದರು.

         ದೇಶದ ಅಭಿವೃದ್ಧಿ ಹಾಗೂ ಜೀವನದ ಸಾಕ್ಷಾತ್ಕಾರಕ್ಕಾಗಿ ಕನಸು ಕಾಣಿರಿ. ಈ ಕನಸು ನನಸಾಗಲು ಕಠಿಣ ಶ್ರಮ, ಶ್ರದ್ಧೆ, ತಾಳ್ಮೆ ಅತ್ಯವಶ್ಯಕ. ಇದಕ್ಕೆ ಗಾಂಧಿಜಿ, ಸುಭಾಸ್‍ಚಂದ್ರ ಭೋಸ್, ವಿವೇಕಾನಂದರು ಸೇರಿದಂತೆ ಹಲವು ಗಣ್ಯರು ಆದರ್ಶನೀಯರು. ಹಾಗಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣ ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

          ಇತ್ತೀಚಿನ ದಿನಗಳಲ್ಲಿ ಭೃಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಭೃಷ್ಠ ರಾಜಕಾರಣಿಗಳು ಅಮಾಯಕರಿಗೆ ಆಮಿಷ ಒಡ್ಡಿ ಮತ ಪಡೆದು, ಗೆಲುವು ಸಾಧಿಸಿ, ನಮ್ಮ ಸಂವಿಧಾನದ ಆಶಯಗಳನ್ನೇ ಮರೆತು ಭೃಷ್ಟಾಚಾರದಲ್ಲಿ ತೊಡಗುತ್ತಾರೆ. ಆದರೆ ಇವರಲ್ಲಿಯೂ ಸಹ ಒಳ್ಳೆಯ ರಾಜಕಾರಣಿಗಳು ಇದ್ದಾರೆ. ಅವರ ಮಾತನ್ನು ಯಾರೂ ಕೇಳುವುದಿಲ್ಲ. ಇದೊಂದು ವಿಪರ್ಯಾಸ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಕಿವಿಮಾತು ಹೇಳಿದರು.

          ಲೋಕಸಭೆ, ರಾಜ್ಯಸಭೆ, ಸ್ಥಳಿಯ ಪಂಚಾಯತಿಗಳಲ್ಲಿ ಸಮರ್ಥ, ಪ್ರಾಮಾಣಿಕ ವ್ಯಕ್ತಿಗಳನ್ನು ಚುನಾಯಿಸಿ ಕಳಿಸಿದರೆ ದೇಶ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ಯುವ ಜನತೆ ಜಾಗೃತರಾದರೆ ಭೃಷ್ಟಾಚಾರವನ್ನು ತೊಲಗಿಸಿ ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಅವರಿಗೆ ಜೀವನದ ಮೌಲ್ಯಗಳನ್ನು ತಿಳಿಸಿ. ಇದೇ ಅವರಿಗೆ ಶ್ರೀಮಂತರಾಗಲು ಪೂರಕವಾಗುತ್ತದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link