ಬೌದ್ಧಿ ಸಾಮರ್ಥ್ಯ ವೃದ್ಧಿಸುವ ಚೆಸ್‍ನ ಆಸಕ್ತಿ ಬೆಳೆಸಿಕೊಳ್ಳು ಸಲಹೆ

ತುಮಕೂರು

    ಬೌದ್ಧಿಕ ಚುರುಕುತನ ಹೆಚ್ಚಿಸಲು, ಆಲೋಚನಾ ಶಕ್ತಿ ಬೆಳಸಲು, ಪರಿಣಾಮಕಾರಿಯಾದ ಏಕಾಗ್ರತೆ ರೂಢಿಸಲು ಚೆಸ್ ಸಹಕಾರಿ. ಪ್ರತಿಷ್ಠಿತ, ಕ್ರಿಯಾಶೀಲ ಒಳಾಂಗಣ ಕ್ರೀಡೆಯಾದ ಚೆಸ್‍ನಲ್ಲಿ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಡಾ. ಸ್ವಾಮಿ ವೀರೇಶಾನಂದ ಸರಸ್ವತಿಯವರು ಹೇಳಿದರು.

    ನಗರದಲ್ಲಿ ಪ್ರಜಾಪ್ರಗತಿ ಪತ್ರಿಕಾ ಕಟ್ಟಡದಲ್ಲಿ ಬುಧವಾರ ಸಂಜೆ ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆಯ ನೂತನ ಕಚೇರಿ ಉದ್ಘಾಟಿಸಿದ ಸ್ವಾಮೀಜಿ, ಮಕ್ಕಳ ಜ್ಞಾನ ಬೆಳವಣಿಗೆಗೆ, ಅಭ್ಯುದಯಕ್ಕೆ ಚೆಸ್ ಉತ್ತಮ ಆಯ್ಕೆ. ಪೋಷಕರು ತಮ್ಮ ಮಕ್ಕಳಲ್ಲಿ ಚೆಸ್ ಬಗ್ಗೆ ಆಸಕ್ತಿ ಬೆಳೆಸಿ ಅವರು ಸೂಕ್ತ ತರಬೇತಿಯೊಂದಿಗೆ ಚೆಸ್‍ನಲ್ಲಿ ಪರಿಣಿತಿ ಸಾಧಿಸಲು ನೆರವಾಗಬೇಕು ಎಂದರು.

    ಚೆಸ್ ಬದ್ಧಿಕ ಶಕ್ತಿ ವೃದ್ಧಿಸುವ ಪ್ರಮುಖ ಕ್ರೀಡಾಚಟುವಟಿಕೆ. ಮಕ್ಕಳಲ್ಲಿ ಅಧ್ಯಯನ ಆಸಕ್ತಿ, ಏಕಾಗ್ರತೆ ಬೆಳೆಸಲು ಪೂರಕವಾಗುತ್ತದೆ. ಚೆಸ್ ಆಸಕ್ತಿ ಬೆಳೆಸಿಕೊಂಡ ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳೆಯುತ್ತದೆ. ಉತ್ತಮ ಆಲೋಚನೆಯಿಂದ ಉತ್ತಮ ಬದುಕು ರೂಪುಗೊಳ್ಳುತ್ತದೆ. ಈ ಮೂಲಕ ಮಕ್ಕಳು ಭವಿಷ್ಯದಲ್ಲಿ ಏನಾದರೂ ಸಾಧಿಸಬಲ್ಲ ಆತ್ಮ ವಿಶ್ವಾಸ ರೂಢಿಸಿಕೊಳ್ಳುತ್ತಾರೆ ಎಂದು ಹೇಳಿದರು.

      ಆರೋಗ್ಯಕರ ಶರೀರ, ಆರೋಗ್ಯಕರ ಮನಸ್ಥಿತಿ ಹೊಂದಿರುವ ವ್ಯಕ್ತಿಯಲ್ಲಿ ಶಿಸ್ತು, ಆತ್ಮವಿಶ್ವಾಸ, ಲವಲವಿಕೆ ಇದ್ದು ಸದಾ ಕ್ರಿಯಾಶೀಲನಾಗಿರುತ್ತಾನೆ. ಈ ಎಲ್ಲಾ ಗುಣ, ಸ್ವಭಾವಗಳು ಚೆಸ್ ಕ್ರೀಡೆಯಿಂದ ಸಾಧ್ಯವಾಗುತ್ತವೆ. ಈಗಿನ ಕಾಲದಲ್ಲಿ ಜ್ಞಾನ, ಬುದ್ದಿಗೆ ಹೆಚ್ಚು ಮಾನ್ಯತೆ. ಸಾವಿರ ಮೈಲಿಯ ಪ್ರಯಾಣ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ. ಮಕ್ಕಳ ಭವಿಷ್ಯದ ಶಿಸ್ತುಬದ್ಧ ಸಾಧಕ ಬದುಕು ಚೆಸ್‍ನಿಂದ ಪ್ರಾರಂಭವಾಗಲಿ ಎಂದು ಸ್ವಾಮೀಜಿ ಪೋಷಕರಿಗೆ ಸಲಹೆ ಮಾಡಿದರು.

     ಚೆಸ್‍ನಿಂದ ಆತ್ಮವಿಶ್ವಾಸ, ಬೌದ್ಧಿಕ ಸಾಮಥ್ರ್ಯ ಹೆಚ್ಚುತ್ತದೆ. ಸಾಮಥ್ರ್ಯ ಬೆಳೆದರೆ ಅವಕಾಶಗಳು ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಆತ್ಮವಿಶ್ವಾಸವಿದ್ದವರಿಗೆ ಎಂದೂ ಸೋಲಿಲ್ಲ ಎಂದು ಹೇಳಿದರು.

     ವಿಶ್ವ ಅಂಡರ್ 18 ಚಾಂಪಿಯನ್ ಮತ್ತು ಮಹಿಳಾ ಗ್ರಾಂಡ್ ಮಾಸ್ಟರ್ ಆಗಿದ್ದ ತಮಿಳುನಾಡಿನ ಆರತಿ ರಾಮಸ್ವಾಮಿ ಅವರು ಈ ವೇಳೆ ಗ್ರಾಂಡ್ ಚೆಸ್ ಅಕಾಡೆಮಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚೆಸ್ ಹೆಚ್ಚು ಜನರಿಗೆ ತಲುಪಬೇಕು, ತರಬೇತಿ ಪಡೆದು ಹೆಚ್ಚಿನ ಚಾಂಪಿಯನ್‍ಗಳು ಈ ಕೇಂದ್ರದಿಂದ ಮೂಡಿಬರಲಿ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿ, ಚೆಸ್ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಶುಭ ಹಾರೈಸಿದರು. ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆವತಿಯಿಂದ ಆರತಿ ರಾಮಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣನವರು ಮಾತನಾಡಿ, ರಾಜ, ರಾಣಿ, ಮಂತ್ರಿ, ಸೈನಿಕರಿರುವ ಚೆಸ್ ಆಟ ಒಂದು ಯುದ್ಧ ಭೂಮಿಯ ಹೋರಾಟದಂತೆ, ಇದೊಂದು ರೀತಿಯ ಮೌನ ಯುದ್ಧ. ಇಲ್ಲಿ ಬೌದಿಕ ಸಾಮಥ್ರ್ಯವೇ ಯುದ್ಧ ಗೆಲ್ಲುವ ಶಕ್ತಿ, ಇದೊಂದು ಮಾನಸಿಕ ಸವಾಲು. ಇಲ್ಲಿ ಗೆಲ್ಲುವವರು ಬದುಕನ್ನು ಸುಲಭವಾಗಿ ಗೆಲ್ಲುತ್ತಾರೆ. ಚೆಸ್‍ನ ಸೋಲು-ಗೆಲುವು ಬದುಕಿನ ಪಾಠವಾಗುತ್ತದೆ ಎಂದು ಹೇಳಿದರು.

    ಈ ಕ್ರೀಡೆ ಸಂಸ್ಕಾರ ಬೆಳೆಸುತ್ತದೆ, ಹೊಸ ಆಲೋಚನೆಗೆ ಪ್ರೇರಣೆಯಾಗುತ್ತದೆ, ಕಲ್ಪನಾ ಶಕ್ತಿ ಬೆಳೆದು ಏನನ್ನಾದರೂ ಸಾಧಿಸಲು ನೆರವಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಚೆಸ್ ಮಕ್ಕಳಲ್ಲಿ ಬೆಳೆಸುತ್ತದೆ ಎಂದರು.

    ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷರಾದ ಟಿ.ಎನ್.ಮಧುಕರ್ ಮಾತನಾಡಿ, ವಿಶ್ವ ಪ್ರಸಿದ್ಧವಾಗಿರುವ ಚೆಸ್‍ನ ಎರಡು ಟೂರ್ನಿಗಳು ತುಮಕೂರಿನಲ್ಲಿ ಯಶಸ್ವಿಯಾಗಿ ನಡೆದವು. ಅದಾದ ನಂತರ ಇಲ್ಲಿನ ಮಕ್ಕಳಲ್ಲಿ ಈ ಕ್ರೀಡೆ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ. ಮಕ್ಕಳು ಚೆಸ್‍ನಲ್ಲಿ ತರಬೇತಿ ಪಡೆದು ತಮ್ಮ ಪ್ರತಿಭಾ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ಮುಖಂಡರಾದ ಧನಿಯಾಕುಮಾರ್, ನರಸೇಗೌಡ, ನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ಅಭಿವೃದ್ಧಿ ರೆವ್ಯೂಲೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಸಂಸ್ಥೆಯ ತರಬೇತುದಾರರಾದ ಮಂಜುನಾಥ್ ಜೈನ್, ಮಾಧುರಿ ಜೈನ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap