ಮಧುಗಿರಿ –
ಇತ್ತೀಚೆಗೆ ಕೆಲವರು ರಾಜಕೀಯದಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಉಪನ್ಯಾಸಕ ಜೆ.ಸಿ ರಂಗಧಾಮಯ್ಯ ತಿಳಿಸಿದರು.
ಪಟ್ಟಣದ ಮಂಜುನಾಥ ಕಂಫರ್ಟ್‍ನಲ್ಲಿ ಮಾದಿಗ ಸಮುದಾಯದ ಪದವಿಧರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶದ ಕೀರ್ತಿಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿರುವವರಲ್ಲಿ ಸಮುದಾಯದ ಮಹಾನ್ ವ್ಯಕ್ತಿಗಳ ಪಾತ್ರ ದೊಡ್ಡದು. ಇಂತಹ ಇತಿಹಾಸವಿರುವ ಸಮುದಾಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವರು ಇಬ್ಬಾಗ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಸಮುದಾಯದ ಸಂಸ್ಕøತಿ ಬಗ್ಗೆ ತಿಳಿಯದ ಕೆಲವರು ಸಮುದಾಯಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ಸೃಷ್ಠಿಸಿ ವೈಯಕ್ತಿಕ ಲಾಭಕ್ಕಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವುದು ದುರಂತವೇ ಸರಿ. ಯಾವುದೇ ನಾಯಕರ ಹಿಂದೆ ಸಮುದಾಯವಿಲ್ಲ. ಸಮುದಾಯದಿಂದ ನಾಯಕರು ಸೃಷ್ಠಿಯಾಗುತ್ತಾರೆ.
ಅವರು ಸಮುದಾಯಗಳನ್ನು ಹೊಡೆಯಬಾರದು. ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತ ಮುಂದೆ ಇಂತಹ ಹೇಳಿಕೆಗಳನ್ನು ನೀಡಿದರೆ ಇಂತಹವರ ವಿರುದ್ದ ಇಡೀ ಸಮುದಾಯ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ವಕೀಲ ಎಸ್.ಆರ್ ಶ್ರೀನಿವಾಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾದಿಗ ಸಮುದಾಯದವರಲ್ಲಿ ಒಗ್ಗಟ್ಟು ಮೂಡುತ್ತಿದ್ದು, ಇದನ್ನು ನೋಡಿ ಸಹಿಸಿಕೊಳ್ಳಲಾಗದವರು ನಮ್ಮ ನಮ್ಮಲ್ಲಿಯೇ ವೈಷಮ್ಯವನ್ನು ಮೂಡಿಸಿ ನಮ್ಮನ್ನು ಇಬ್ಬಾಗ ಮಾಡಲು ಹೊರಟಿದ್ದು, ಇದಕ್ಕೆ ನಮ್ಮವರು ತಲೆಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರುಗಳಾದ ವಕೀಲ ದೊಡ್ಡಗಾಳಿಹಳ್ಳಿ ಜಿ.ಸಿ ನರಸಿಂಹಮೂರ್ತಿ, ಕೆ.ಎನ್. ಶಿವಲಿಂಗರಾಜು, ಪಿ.ವಿ.ಹನುಮಂತರಾಯಪ್ಪ, ಅವರಗಲ್ಲು ಗಂಗರಾಜು, ತಿಮ್ಲಾಪುರ ಸಿದ್ದೇಶ್, ಕವಣದಾಲ ರಂಗಸ್ವಾಮಿ, ಜೆ.ಸಿ.ನಾಗರಾಜು, ತಿಪ್ಪಾಪುರ ಅಶೋಕ, ಐ.ಡಿ.ಹಳ್ಳಿ ರವಿಕುಮಾರ್, ಶಿವರಾಜು, ಪುನೀತ್ ಹಾಗೂ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
