ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳಿ : ಮಹಾದೇವ ಪ್ರಕಾಶ್

ದಾವಣಗೆರೆ:

    ಸಮಾಜದ ಹಿತ ಕಾಪಾಡುವ ಪತ್ರಕರ್ತರು ಮೊದಲು ಬೌದ್ಧಿಕ ಸಾಮಥ್ರ್ಯ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಗಳ ಮಾಧ್ಯಮ ಕಾರ್ಯದರ್ಶಿ ಮಹಾದೇವ ಪ್ರಕಾಶ್ ಕರೆ ನೀಡಿದರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಪತ್ರಕರ್ತರು ಲಕ್ಷ್ಮಿಯ ಆಶೀರ್ವಾದ ಪಡೆಯುವುದಕ್ಕಿಂತ, ಸರಸ್ವತಿಯ ಆಶೀರ್ವಾದ ಪಡೆಯುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಏಕೆಂದರೆ, ಪತ್ರಕರ್ತರಿಗೆ ಹಣ ಗಳಿಕೆಗಿಂತ ಜ್ಞಾನ ಗಳಿಸಿಕೊಳ್ಳುವುದೇ ದೊಡ್ಡ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ವರದಿಗಾರರ ಕೂಟ ಪತ್ರಕರ್ತರ ಬೌದ್ಧಿಕ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.

     ನಾಮಕಾವಸ್ಥೆಯ ಸಂವಾದ, ಚರ್ಚಾಗೋಷ್ಠಿಗಳು ನಡೆಯಬಾರದು. ಬದಲಿಗೆ ಅವು ಪತ್ರಕರ್ತರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವಂತೆ ಇರಬೇಕು. ಅಲ್ಲದೆ, ದೈಹಿಕ ಶಕ್ತಿ ನೀಡಲು ಅನ್ನ, ಅಕ್ಷರ, ಅರಿವು ಹಾಗೂ ಚಾರಿತ್ರ್ಯ ಎಂಬ ನಾಲ್ಕು ಆಧಾರ ಸ್ತಂಭಗಳನ್ನು ಪತ್ರಕರ್ತ ಹೊಂದಿದ್ದರೆ, ಅದರ ಮೇಲೆ ಸುಂದರ ಸೌಧ ಕಟ್ಟಲು ಸಾಧ್ಯವಾಗಲಿದೆ ಎಂದರು.

    ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯ ಇಲ್ಲದ ಶಿಕ್ಷಣ, ನೈತಿಕತೆ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗವಿಲ್ಲದ ಪೂಜೆ ಹಾಗೂ ಸಿದ್ಧಾಂತ ಇಲ್ಲದ ರಾಜಕಾರಣ ಎಂಬ ಗಾಂಧೀಜಿಯವರ ಸಪ್ತ ಮಹಾಘಾತುಕಗಳನ್ನು ಪತ್ರಕರ್ತರು ಜೀವನದಲ್ಲಿ ಅಳವಡಿಸಿಕೊಂಡು, ರಾಜಕಾರಣ ಮಾರಾಟದ ಸರಕಾಗಿರುವ ಇಂದಿನ ವಿಷಮ ಸ್ಥಿತಿಯಲ್ಲಿ ಬಹುದೊಡ್ಡ ಜವಾಬ್ದಾರಿ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

    ಸಾಮಾನ್ಯವಾಗಿ ಪತ್ರಕರ್ತರ ಸಂಘಗಳೆಂದರೆ, ಕಾರ್ಮಿಕ ಸಂಘಟನೆಗಳಂತೆ ಬೇಡಿಕೆ ಹಾಗೂ ಹಕ್ಕು ಮಂಡಿಸುವ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತವೆ ಎಂಬ ಅಪವಾದಗಳಿವೆ. ಆದರೆ, ದಾವಣಗೆರೆ ವರದಿಗಾರರ ಕೂಟವು ಬೇರೆಲ್ಲಾ ಪತ್ರಕರ್ತರ ಸಂಘಟನೆಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     ಶಾಸಕ ಶಾಮನೂರು ಶಿವಶಂಕರಪ್ಪನವರು 8 ಕೋಟಿ ರೂ.ಗಳನ್ನು ಠೇವಣಿ ಇಟ್ಟು, ಅದರಲ್ಲಿ ಬರುವ ಬಡ್ಡಿಯಿಂದ ಪತ್ರಕರ್ತರು ಸೇರಿದಂತೆ ಜನಸಾಮಾನ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ದಾವಣಗೆರೆಯ ಎರಡೂ ಕ್ಷೇತ್ರಗಳ ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎ.ರವೀಂದ್ರನಾಥ್ ಈ ವರೆಗೂ ನಿವೇಶನ ಪಡೆಯದ ಪತ್ರಕರ್ತರಿಗೆ ಕಡಿಮೆ ದರದಲ್ಲಿ ದೂಡಾದಿಂದ ನಿವೇಶನ ಕೊಡಿಸಲು ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

     ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಪತ್ರಕರ್ತರು ಯಾವುದೇ ದುರಾಸೆಗಳಿಗೆ ಒಳಗಾಗದೆ, ಸತ್ಯ ಸಂಗತಿಗಳನ್ನೇ ವರದಿ ಮಾಡಬೇಕು. ಸುಳ್ಳು ಬರೆಯುವುದರಿಂದ ದೂರ ಉಳಿದು ವಿಶ್ವಾಸರ್ಹತೆ ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಗಲೀಜಾಗಿರುವ ಪಾತ್ರೆ, ಪಗಡವನ್ನು ತಿಕ್ಕಿ ತೊಳೆಯುವಂತೆ ಪತ್ರಕರ್ತರು ಸಹ ಸಮಾಜವನ್ನು ತಿಕ್ಕಿ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಬೇರೆ ಕಡೆಗೆ ಹೋಲಿಸಿದರೆ, ದಾವಣಗೆರೆಯಲ್ಲಿ ಒಳ್ಳೆಯ ಪತ್ರಕರ್ತರಿದ್ದಾರೆ ಎಂದರು.

     ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ವರದಿಗಾರರ ಕೂಟದ ನಿಕಟ ಪೂರ್ವ ಅಧ್ಯಕ್ಷ ಬಿ.ಎನ್.ಮಲ್ಲೇಶ್, ನನ್ನ ಅವಧಿಯಲ್ಲಿ ಕೂಟದ 22 ಜನ ಸದಸ್ಯರಿಗೆ ನಿವೇಶನ ದೊರೆತಿರುವುದು ಸಮಾಧಾನ ತಂದಿದೆ. ವರದಿಗಾರರ ಕೂಟದಿಂದ ನಿರ್ಮಿಸಲುದ್ದೇಶಿಸಿರುವ ಪತ್ರಿಕಾ ಭವನಕ್ಕೂ ನಿವೇಶನ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಚುನಾವಣಾ ನೀತಿ ಸಂಹಿತೆ ಮುಂತಾದ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಮುಂದೆ ಇದು ಕೈಗೂಡಲಿ ಎಂದು ಹೇಳಿದರು.

    ಅಧ್ಯಕ್ಷೀಯ ನುಡಿಗಳನ್ನಾಡಿದ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಈ ವರೆಗೂ ನಿವೇಶನ ಪಡೆಯದ ಪತ್ರಕರ್ತರಿಗೆ ಹಾಗೂ ವರದಿಗಾರರ ಕೂಟಕ್ಕೆ ನಿವೇಶನ ಕೊಡುವ ಬೇಡಿಕೆ ಇರುವ ಮನವಿಪತ್ರವನ್ನು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಮಹಾದೇವ್ ಪ್ರಕಾಶ್ ಅವರಿಗೆ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ.ಏಕಾಂತಪ್ಪ, ಖಜಾಂಚಿ ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಕೂಟದ ಪ್ರಧಾನ ಕಾರ್ಯದರ್ಶಿ ಕಾಡಜ್ಜಿ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಕಟ ಪೂರ್ವ ಕಾರ್ಯದರ್ಶಿ ನಾಗರಾಜ್ ಬಡದಾಳ್ ಸ್ವಾಗತಿಸಿದರು. ಸಾಂಸ್ಕøತಿಕಾ ಕಾರ್ಯದರ್ಶಿ ದೇವಿಕಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರವಿ ಆರುಂಡಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap