ದಾವಣಗೆರೆ :
ವಿಜ್ಞಾನವನ್ನು ಕೇವಲ ಒಂದು ವಿಷಯವೆಂದು ಭಾವಿಸದೇ, ಭವಿಷ್ಯದ ಜಗತ್ತಿನ ಹೆಬ್ಬಾಗಿಲ ಕೀಲಿ ಕೈ ಎಂಬಂತೆ ಅರಿತು, ಅಧ್ಯಯನಕ್ಕೆ ಮುಂದಾಗಬೇಕೆಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ಮುರುಗೇಶ ಕರೆ ನೀಡಿದರು.
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ದಿವಂಗತ ಶ್ರೀಮತಿ ಪಾರ್ವತಮ್ಮ ಸ್ಮರಣಾರ್ಥ ಹಮ್ಮಿಕೊಂಡಿದ್ದ 12ನೇ ವರ್ಷದ ವಿಜ್ಞಾನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನದ ಒಂದೊಂದು ಸಂಶೋಧನೆಯೂ ಜಗತ್ತಿನ ಗತಿಯನ್ನೇ ಶಾಶ್ವತವಾಗಿ ಬದಲಿಸುವಷ್ಟು ಪ್ರಭಾವ ಮತ್ತು ಸಾಮರ್ಥ್ಯ ಹೊಂದಿದ್ದು, ವಿಜ್ಞಾನವನ್ನು ಜಗತ್ತಿನ ಏಳಿಗೆಗೆ, ಮನುಕುಲ ಸೇರಿದಂತೆ ಸಕಲ ಜೀವರಾಶಿಗಳ ಒಳಿತಿಗಾಗಿ ಬಳಸುವ ಪ್ರಯತ್ನ ಆಗಬೇಕು ಎಂದರು.
ವಿದ್ಯಾರ್ಥಿ, ಯುವ ಜನರು ತಾರ್ಕಿಕ ಮನೋಭಾವದೊಂದಿಗೆ ವಿಜ್ಞಾನವನ್ನು ಅಭ್ಯಾಸ ಮಾಡಿದರೆ, ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳ ಅನ್ವಯತೆ ಬಗ್ಗೆಯೂ ಚಿಂತನೆ, ಆಲೋಚನೆ ಮಾಡಬೇಕು. ವೈಜ್ಞಾನಿಕ ಮನೋಭಾವದ ನಾಗರೀಕರಿಗೆ ದೇಶದಲ್ಲಿ ಪ್ರಾಶಸ್ತ್ಯ ನೀಡಬೇಕಿದೆ. ನಮ್ಮ ಆಚರಣೆಗಳ ಹಿಂದಿನ ವೈಚಾರಿಕ ಹಿನ್ನೆಲೆಯನ್ನು ಅರಿಯುವ ಕುತೂಹಲ ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬಾಪೂಜಿ ತಾಂತ್ರಿಕ ಮಹಾ ವಿದ್ಯಾಲಯದ ನಿರ್ದೇಶಕ ವೈ.ವೃಷಭೇಂದ್ರಪ್ಪ ಮಾತನಾಡಿ, ಕಥೆಗಳ ಮುಖಾಂತರ ವಿಜ್ಞಾನ, ಗಣಿತ ಪಾಠವನ್ನು ಮಾಡಿದರೆ ವಿದ್ಯಾರ್ಥಿಗಳಲ್ಲಿ ಇವುಗಳ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತದೆ. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು. ಕುತೂಹಲ, ಆಸಕ್ತಿ, ಶ್ರದ್ಧೆಯಿಂದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬದುಕು ಸರಳವಾಗಿದ್ದಾಗ ವಿಜ್ಞಾನ ಹೆಚ್ಚು ಬೇಕಿರಲಿಲ್ಲ. ಆದರೆ, ಈಗಬದುಕಿನ ವಿಧಾನ ಸಂಕೀರ್ಣಗೊಂಡಿದ್ದು, ವಿಜ್ಞಾನದ ಅವಲಂಬನೆಯೂ ಹೆಚ್ಚುತ್ತಿದೆ. ಪ್ರತಿ ಮನೆಗಳೂ ಪ್ರಯೋಗ ಶಾಲೆಗಳಾಗುವಂತಹ ಕಾಲ ಇನ್ನು ದೂರವಂತೂ ಇಲ್ಲ. ಬೆಂಕಿ ಬಳಸುವುದನ್ನು ಕಲಿತರಷ್ಟೇ ಸಾಲದು, ಬೆಂಕಿ ಆರಿಸುವುದನ್ನೂ ಕಲಿಯಬೇಕು ಎಂದು ಹೇಳಿದರು.
ಬೆಂಗಳೂರಿನ ಭೌತಶಾಸ ಪ್ರಾಧ್ಯಾಪಕ ಚಂದ್ರಕಾಂತ ತುಮಕೂರು ಮಾತನಾಡಿ, ವಿಜ್ಞಾನ ಅಧ್ಯಯನ ಮಾಡಿದವರು ವಿಜ್ಞಾನದ ಪರಿಧಿಯಲ್ಲೇ ವ್ಯವಹರಿಸಬೇಕೆಂದೇನೂ ಇಲ್ಲ. ವಿಜ್ಞಾನೇತರ ಕ್ಷೇತ್ರಗಳಲ್ಲೂ ವಿಶೇಷ ಸೇವೆ, ಸಾಧನೆಯನ್ನು ಮಾಡಬಹುದಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳ ಬಗ್ಗೆ ವಿದ್ಯಾರ್ಥಿ, ಯುವ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಕಾಲೇಜು ಪ್ರಾಚಾರ್ಯ ಎಂ.ಪಿ.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಬಿ.ಎಸ್.ಅಚ್ಯುತ್, ಕುವೆಂಪು ವಿವಿ ಡಾ.ತಿಪ್ಪೇಸ್ವಾಮಿ, ಬಿಐಇಟಿ ಕಾಲೇಜು ಪ್ರಾಧ್ಯಾಪಕ ಡಾ.ಬಿ.ಇ.ರಂಗಸ್ವಾಮಿ, ಲಿಂಗರಾಜು, ಕಾಲೇಜು ಬೋಧಕ ಕೆ.ಸಿ.ವಿಜಯಕುಮಾರ, ಉಮೇಶ, ಡಿ.ಎಂ.ಮರುಳಸಿದ್ದಪ್ಪ, ಬಿ.ಎಂ.ಶಿವಕುಮಾರ ಇತರರು ಇದ್ದರು. ವಿದ್ಯಾರ್ಥಿನಿ ಮೇಘನಾ ಆರಂಭದಲ್ಲಿ ಪ್ರಾರ್ಥಿಸಿದರು. ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
