ಶನೇಶ್ವರನ ದರ್ಶನಕ್ಕೆ ಶುಕ್ರವಾರವೇ ಸಾಲುಗಟ್ಟಿ ನಿಂತ ಭಕ್ತ ಸಮೂಹ..!

ಪಾವಗಡ

   ಶ್ರಾವಣ ಮಾಸದ ಮೂರನೇ ಶನಿವಾರ 500 ವರ್ಷಗಳ ಇತಿಹಾಸ ಪ್ರಸಿದ್ದ ಶ್ರೀಶನೈಶ್ವರ ಮತ್ತು ಸೀತಲಾಂಬ ದೇವಿಯ ದರ್ಶನಕ್ಕಾಗಿ 80 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದಿರುತ್ತಾರೆ.

    ಪಾವಗಡ ಪಟ್ಟಣದ ಹೃದಯ ಭಾಗದಲ್ಲಿ ನೆಲೆಸಿರುವ ಶ್ರೀಶನೈಶ್ವರ ಮತ್ತು ಸೀತಲಾಂಬ ದೇವಿಯ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರಾವಣ ಮಾಸದ ಪ್ರತಿ ಶನಿವಾರ ಅತ್ಯಂತ ವೈಭವಯುತವಾಗಿ ನಡೆಯುತ್ತವೆ. ಕರ್ನಾಟಕ, ಆಂಧ್ರ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳ ಭಕ್ತರು ಅಂದು ಕೊಂಡಿದ್ದನ್ನು ಭಕ್ತರಿಗೆ ಕರುಣಿಸುವ ಶ್ರೀಶನೈಶ್ವರನ ದರ್ಶನ ಪಡೆಯುವುದು ಸೌಭಾಗ್ಯವೆನ್ನುತ್ತಾರೆ ಭಕ್ತಾದಿಗಳು.

     ವಿಶೇಷವಾಗಿ ಶ್ರಾವಣ ಮಾಸದಲ್ಲಿ ಶನೈಶ್ವರ ದರ್ಶನ ಪಡೆದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ. ಅಂದುಕೊಂಡ ಕೆಲಸ ಕಾರ್ಯಗಳು ನಡೆಯುತ್ತವೆ ಎಂಬುದು ದೇವಾಲಯಕ್ಕೆ ಆಗಮಿಸುವ ಭಕ್ತರ ನಂಬಿಕೆಯಾಗಿದೆ.

      ದಕ್ಷಿಣ ಭಾರತದಲ್ಲಿ ಆತೀ ಹೆಚ್ಚು ಹೆಣ್ಣುಮಕ್ಕಳು ಕೇಶ ಮುಂಡನೆ ಮಾಡಿಸುವ ಏಕೈಕ ಕ್ಷೇತ್ರ ಪಾವಗಡ ಶನಿದೇವರ ಕ್ಷೇತ್ರವಾಗಿದೆ. ಮದುವೆ, ಸಂತಾನ ಭಾಗ್ಯ, ಕೌಟುಂಬಿಕ ಕಲಹಗಳು, ಉದ್ಯೋಗ, ವ್ಯಾಪಾರಕ್ಕಾಗಿ ಹಲವು ಮಹಿಳೆಯರು ಕೇಶ ಮುಂಡನ ಮಾಡಿಸುವ ಪ್ರತೀತಿ ಇದೆ.

      ಮೂರನೆ ಶ್ರಾವಣ ಶನಿವಾರವಾದ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಹೊಸ ಬಸ್ ನಿಲ್ದಾಣದ ತಿರುವಿನಿಂದ ಹಾಗೂ ಶಿರಾ ರಸ್ತೆಯ ನಾಗಲಕಟ್ಟೆವರೆಗೂ ಶನಿವಾರ ಸಂಜೆ ನಾಲ್ಕು ಗಂಟೆಯಾದರೂ ಭಕ್ತರು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ ಸಂಜೆಯಾದರೂ ಭಕ್ತರ ಸಂಖ್ಯೆ ಏರಿಕೆಯಾಗುತ್ತಲೆ ಇದ್ದುದು ವಿಶೇಷವಾಗಿತ್ತು.

     ದೇವಾಲಯಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಪಟ್ಟಣದ ಹಲವು ಸಂಘ ಸಂಸ್ಥೆಗಳು, ಮುಖಂಡರು, ಯುವಕರು ಸ್ವಯಂ ಪ್ರೇರಿತವಾಗಿ ತಿಂಡಿ ಹಾಗೂ ಶುದ್ದ ಕುಡಿಯುವ ನೀರನ್ನು ವಿತರಣೆ ಮಾಡಿದರು.ಶ್ರಾವಣ ಮಾಸದ ಮೂರನೆ ಶನಿವಾರ ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ತುಮಕೂರು ರಸ್ತೆಯಲ್ಲಿನ ಕಣಿವೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ಪಳವಳ್ಳಿ ಅಂಜನೇಯ ಸ್ವಾಮಿ ದೇವಾಲಯ, ದೊಡ್ಡಹಳ್ಳಿ, ಅಲಕೂರು ಆಂಜನೇಯ ಸ್ವಾಮಿ ದೇವಾಲಯಗಳಿಗೆ ಶನಿವಾರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಈ ದೇವಾಲಯಗಳಲ್ಲಿ ಶ್ರಾವಣ ಶನಿವಾರದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link