ತುಮಕೂರು
ದೇಶದಲ್ಲಿ ಅತಿಸಾರ ಭೇದಿಯಿಂದ ಶೇ. 8ರಷ್ಟು 5 ವರ್ಷದೊಳಗಿನ ಮಕ್ಕಳು ಮರಣವನ್ನಪ್ಪುತ್ತಿದ್ದಾರೆ. ಈ ಮರಣ ಪ್ರಮಾಣವನ್ನು ನಿಯಂತ್ರಿಸಲು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಅತ್ಯಾವಶ್ಯ ಎಂದು ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವರಾಜು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಆರ್ಯಬಾಲಿಕ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿಂದು ಹಮ್ಮಿಕೊಂಡಿದ್ದ “ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಇಂದಿನಿಂದ ಜೂನ್ 17ರವರೆಗೆ 15 ದಿನಗಳ ಕಾಲ ಈ ಪಾಕ್ಷಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಸಾರವನ್ನು ತಡೆಗಟ್ಟುವಲ್ಲಿ ಓಆರ್‍ಎಸ್ ಮತ್ತು ಜಿಂಕ್ ಮಾತ್ರೆಗಳ ಬಳಕೆ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಮಕ್ಕಳ ತಜ್ಞೆ ಡಾ: ಮುಕ್ತಾಂಭ ಅವರು ಶಾಲಾ ಮಕ್ಕಳಿಗೆ ಓಆರ್‍ಎಸ್ ಸಿದ್ಧಪಡಿಸುವುದು, ಕೈತೊಳೆಯುವ ಪದ್ಧತಿ ಕುರಿತು ಪ್ರಾತ್ಯಕ್ಷಿಕೆ ನೀಡಿದರಲ್ಲದೆ, ಶುಚಿತ್ವ, ಶೌಚಾಲಯ ಬಳಕೆ, ಶುದ್ಧ ಕುಡಿಯುವ ನೀರಿನ ಬಳಕೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಸಿಡಿಪಿಓ ಶ್ರೀಧರ್, ಇಸಿಓ ನವೀನ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಶರತ್‍ಚಂದ್ರ, ಡಾ: ಸನತ್‍ಕುಮಾರ್, ಡಾ: ಮೋಹನ್‍ದಾಸ್, ವೆಂಕಟಲಕ್ಷ್ಮಮ್ಮ, ಶಾರದಮ್ಮ, ಎನ್.ಹನುಮಂತರಾಯ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ