ಬೆಂಗಳೂರು
ನವಜಾತ ಶಿಶುಗಳನ್ನು ನಿರ್ಜನ ಪ್ರದೇಶಗಳಲ್ಲಿ ಬಿಟ್ಟುಹೋಗುತ್ತಿರುವ ಪ್ರಕರಣಗಳ ಪ್ರಮಾಣವು ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಆತಂಕ ಸೃಷ್ಠಿಸಿದೆ.
ನಿರ್ಜನ ಪ್ರದೇಶಗಳಲ್ಲಿ ಬಿಟ್ಟುಹೋಗಿರುವ ನವಜಾತ ಶಿಶುಗಳಲ್ಲಿ ಹೆಣ್ಣುಶಿಶುಗಳ ಸಂಖ್ಯೆಯೇ ಹೆಚ್ಚಾಗಿದೆ ಕಳೆದ 2017 ರಲ್ಲಿ 258 ನವಜಾತ ಶಿಶುಗಳನ್ನು ಪೋಷಕರು ಬಿಟ್ಟುಹೋಗಿರುವ ಆತಂಕಕಾರಿ ಸಂಗತಿಯು ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಇಲಾಖೆ ಜಂಟಿಯಾಗಿ ಕಲೆಹಾಕಿದ ಮಾಹಿತಿಯಿಂದ ಪತ್ತೆಯಾಗಿದೆ.
ಕಳೆದ 2016 – 17ರ ನಡುವೆ ಬೀದಿಗೆ ಎಸೆಯಲಾಗಿರುವ ನವಜಾತ ಒಟ್ಟು ಶಿಶುಗಳಲ್ಲಿ ಹೆಣ್ಣುಶಿಶುಗಳ ಸಂಖ್ಯೆಯೇ ಹೆಚ್ಚಾಗಿದೆ. ಆದರೆ 2018 ರಲ್ಲಿ ಪತ್ತೆಯಾದ ನವಜಾತ ಶಿಶುಗಳಲ್ಲಿ ಗಂಡುಶಿಶುಗಳ ಪ್ರಮಾಣ ಹೆಚ್ಚಾಗಿದೆ.
ನವಿಲುಗಳಿಂದ ಗಾಯ
2017ರ ಜೂನ್ 13 ರಂದು ಹಾಸನದ ಹೊಳೆನರಸಿಪುರದ ಶ್ರೀರಾಮದೇವರ ಕಟ್ಟೆ ಬಳಿ 9 ದಿನದ ನವಜಾತ ಶಿಶುವನ್ನು ಬೀದಿಗೆ ಎಸೆಯಲಾಗಿತ್ತು. ಆದರೆ ಈ ಶಿಶುವನ್ನು ರಕ್ಷಿಸಲಾದರೂ, ಅದಕ್ಕೂ ಮೊದಲೇ ನವಿಲುಗಳು, ಹೆಣ್ಣುಶಿಶುವಿನ ದೇಹದ ಮೇಲೆ ದಾಳಿ ನಡೆಸಿದ ಕಾರಣ, ದೇಹದಲ್ಲಿ 15ಕ್ಕೂ ಹೆಚ್ಚು ಗಾಯಗಳಾಗಿದ್ದವು. ನಂತರ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳ ತುರ್ತು ಚಿಕಿತ್ಸಾ ವಿಭಾವದಲ್ಲಿ ಚಿಕಿತ್ಸೆ ನೀಡಿ ಶಿಶುವಿನ ಆರೋಗ್ಯ ಸ್ಥಿರತೆಯನ್ನು ಕಾಪಾಡಿಕೊಳ್ಳಲಾಯಿತು.
ನಂತರ ಮಗುವನ್ನು ರಾಜ್ಯ ಮಕ್ಕಳ ರಕ್ಷಣಾ ಕೇಂದ್ರಕ್ಕೆ ವಹಿಸಿಕೊಡಲಾಯಿತು.2019ರ ಜನವರಿ 16 ರಂದು ಬೆಂಗಳೂರಿನ ಯಲಹಂಕದ ಜಿಕೆವಿಕೆ ಕ್ಯಾಂಪಸ್‍ನಲ್ಲಿ ನಾಗರೀಕ ರಕ್ಷಣಾ ಮೇಲ್ವಿಚಾರಕರು, ಮಗುವೊಂದನ್ನು ರಕ್ಷಿಸಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮಗುವಿಗೆ, ಮಹಿಳಾ ಪೊಲೀಸ್ ಪೇದೆ ಸಂಗೀತ ಎಸ್. ಅಲಿಮ ತಮ್ಮ ಎದೆಯ ಹಾಲುಣಿಸಿ ಮಾನವೀಯತೆ ಮೆರೆದಿದ್ದರು.
2019ರ ಮಾರ್ಚ್ 25 ರಂದು ನಗರದ ಜಾಲಹಳ್ಳಿ ಪೊಲೀಸರು ತಮ್ಮ ಕಾಂಪೌಂಡ್ ವ್ಯಾಪ್ತಿಯಲ್ಲೇ ನವಜಾತ ಶಿಶುವೊಂದನ್ನು ಪತ್ತೆಹಚ್ಚಿದ್ದರು. ಅದಾಗಲೇ ಮಗುವಿನ ಬೆರಳುಗಳನ್ನು ಇಲಿಗಳು ಹಾಗೂ ಇನ್ನಿತರ ಪ್ರಾಣಿಗಳು ತಿಂದುಹಾಕಿದ್ದವು. ನಂತರ ಶವ ಪರೀಕ್ಷೆ ನಡೆಸಿ, ಪೊಲೀಸರೇ ಶವ ಸಂಸ್ಕಾರವನ್ನು ನೆರವೇರಿಸಿದ್ದರು.
ಈ ವೇಳೆ ಪೊಲೀಸರು, ಮಗುವನ್ನು ನಾಲ್ಕು ಅಡಿ ಎತ್ತರದ ಕಾಂಪೌಂಡ್‍ನಿಂದ ಮಾರ್ಚ್ 24ರ ರಾತ್ರಿ ಪೋಷಕರು, ಶಿಶುವನ್ನು ಬಿಸಾಡಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದರು.
ಹತ್ತು ಹಲವು ಕಾರಣ
2016 ರಲ್ಲಿ ದೊರೆತ ಒಟ್ಟು 160 ನವಜಾತ ಶಿಶುಗಳಲ್ಲಿ 72 ಗಂಡುಶಿಶುಗಳನ್ನು ರಕ್ಷಿಸಲಾಗಿತ್ತು. 2017 ರಲ್ಲಿ 156 ಹೆಣ್ಣುಶಿಶುಗಳು ಹಾಗೂ 102 ಗಂಡುಶಿಶುಗಳನ್ನು ಬೀದಿಗೆಸೆಯಲಾಗಿತ್ತು. ಆದರೆ 2018 ರಲ್ಲಿ ದೊರೆತ ಒಟ್ಟು 197 ನವಜಾತ ಶಿಶುಗಳಲ್ಲಿ 94 ಹೆಣ್ಣುಶಿಶುಗಳು ಪತ್ತೆಯಾಗಿದ್ದವು. ನವಜಾತ ಶಿಶುಗಳನ್ನು ಬೀದಿಗೆಸೆಯುವಲ್ಲಿ ಹಲವಾರು ಕಾರಣಗಳಿದ್ದು, ಪ್ರಮುಖವಾಗಿ ಲೈಂಗಿಕ ಶಿಕ್ಷಣ ಕೊರತೆ, ಸಂಸ್ಕಾರದ ಭಯ, ವಿವಾಹಕ್ಕೂ ಮೊದಲೇ ಜನಿಸಿದ್ದಕ್ಕಾಗಿ ನವಜಾತ ಶಿಶುಗಳನ್ನು ಬೀದಿಗೆಸೆಯಲಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.
ಉಳಿದಂತೆ, ನಗರ ಪ್ರದೇಶಗಳಲ್ಲಿ ವಿವಾಹವಾಗದೆ, ಸಹಜೀವನ ನಡೆಸುವ ವ್ಯವಸ್ಥೆ, ಉಳಿದಂತೆ, ಗ್ರಾಮೀಣ ಪ್ರದೇಶಗಳಲ್ಲಿ ಪರಸ್ಪರ ಪ್ರೀತಿಯಿಂದ ಜನಿಸುವ ನವಜಾತ ಶಿಶುಗಳೇ ಹೆಚ್ಚು ಬೀದಿಪಾಲಾಗುವುದಕ್ಕೆ ಕಾರಣವಾಗಿದೆ ಬಹುತೇಕ ತಾಯಂದಿರು, ತಮ್ಮ ಮಕ್ಕಳನ್ನು ಸಂರಕ್ಷಿಸಲು ಹಾಗೂ ಸಾಕಲು ಇಷ್ಟಪಡದಿದ್ದರೆ, ಮಕ್ಕಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಶಿಶುಗಳನ್ನು ಒಪ್ಪಿಸಲು ನಾಗಲಕ್ಷ್ಮಿ ಬಾಯಿ ಸಲಹೆ ನೀಡಿದ್ದಾರೆ. ಆದರೆ ಮಹಿಳಾ ಕ್ಷೇಮಾಭಿವೃದ್ಧಿ ಅಧಿಕಾರಿಗಳನ್ನು ಭೇಟಿಮಾಡಲು ಇಂತಹ ಮಹಿಳೆಯರು ಇಷ್ಟಪಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಬದುಕುವುದು ಕಷ್ಟ
ಬೀದಿಯಲ್ಲಿ ದೊರೆತ ಎಲ್ಲಾ ಮಕ್ಕಳನ್ನು ಬದುಕಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ದೊರೆತ 224 ನವಜಾತ ಶಿಶುಗಳಲ್ಲಿ 119 ಹೆಣ್ಣುಶಿಶುಗಳು ರಕ್ಷಿಸುವ ಮೊದಲೇ ಮೃತಪಟ್ಟಿವೆ. 2016 ರಲ್ಲಿ ದೊರೆತ 60 ಶಿಶುಗಳಲ್ಲಿ 28 ಗಂಡುಶಿಶುಗಳು ಹಾಗೂ 38 ಹೆಣ್ಣುಶಿಶುಗಳು ಮೃತಪಟ್ಟ ಸ್ಥಿತಿಯಲ್ಲಿಯೇ ದೊರಕಿದ್ದವು.
2017 ರಲ್ಲಿ 39 ಗಂಡುಶಿಶುಗಳು ಹಾಗೂ 50 ಹೆಣ್ಣುಶಿಶುಗಳು ಹಾಗೂ ಕಳೆದ ವರ್ಷ 40 ಗಂಡುಶಿಶುಗಳು ಹಾಗೂ 27 ಹೆಣ್ಣುಶಿಶುಗಳು ಮೃತಪಟ್ಟ ಸ್ಥಿತಿಯಲ್ಲಿ ದೊರಕಿದ್ದವು.ಕಳೆದ ಮಾರ್ಚ್‍ನಲ್ಲಿ 8 ಹೆಣ್ಣುಶಿಶುಗಳು ಸೇರಿ, 18 ನವಜಾತ ಶಿಶುಗಳು ಮೃತಪಟ್ಟ ಸ್ಥಿತಿಯಲ್ಲಿ ದೊರಕಿದ್ದವು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ಈ ಸಂಬಂಧ ಐಪಿಸಿ 317ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ಪ್ರಕರಣದಲ್ಲಿ ಪೋಷಕರನ್ನು ಪತ್ತೆಹಚ್ಚಲಾಗಿತ್ತು. ಅವರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಸಹ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
