ದಿಬ್ಬೂರು ವಸತಿ ಸಂಕೀರ್ಣ: ಕೊಳಗೇರಿಯ ಹೊಸ ರೂಪ

ತುಮಕೂರು

ವಿಶೇಷ ವರದಿ :ಆರ್.ಎಸ್.ಅಯ್ಯರ್

     ತುಮಕೂರು ನಗರದ ದಿಬ್ಬೂರಿನ ಹೊರವಲಯದಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ನಿರ್ಮಾಣಗೊಂಡು ನಳನಳಿಸುತ್ತಿದ್ದ 1200 ಮನೆಗಳ ವಸತಿ ಸಮುಚ್ಛಯ, ಇದೀಗ ಸರ್ಕಾರದÀ ಅವಜ್ಞೆಗೊಳಗಾಗಿ ಕೊಳಗೇರಿಯ ಹೊಸ ರೂಪವಾಗಿ ಮಾರ್ಪಟ್ಟು ಕಳೆಗುಂದಿದೆ.
      ತುಮಕೂರು ನಗರದ ಕೊಳಗೇರಿಗಳ ನಿವಾಸಿಗಳಿಗೆ, ನಗರದ ವಸತಿರಹಿತ ಬಡವರಿಗೆ ಪುನರ್ವಸತಿ ಕಲ್ಪಿಸುವ ಸದುದ್ದೇಶದಿಂದ ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ಬಂದಿತಾದರೂ, ಅತ್ಯಲ್ಪ ಅವಧಿಯಲ್ಲೇ ಕಾಂಕ್ರಿಟ್ ಮನೆಗಳುಳ್ಳ ಕೊಳಗೇರಿಯಾಗಿ ರೂಪಾಂತರಗೊಂಡು ಅವನತಿಯತ್ತ ಹೆಜ್ಜೆ ಹಾಕತೊಡಗಿದೆ.
ಕೊಳಕು..ಕೊಳಕು..ಕೊಳಕು
    ದಿಬ್ಬೂರು ಮುಖ್ಯರಸ್ತೆ ಮೂಲಕ ಶನಿವಾರ (ಡಿ.14) ಬೆಳಗ್ಗೆ ಈ ವಸತಿ ಸಂಕೀರ್ಣಕ್ಕೆ (ಇದಕ್ಕೆ ಡಿ.ದೇವರಾಜ ಅರಸು ಬಡಾವಣೆ ಎಂದು ಹೆಸರಿಸಲಾಗಿದೆ) ಕಾಲಿಟ್ಟೊಡನೆ ನಮ್ಮನ್ನು ಸ್ವಾಗತಿಸಿದ್ದು, ಒಳಚರಂಡಿ ಚೇಂಬರ್‍ನಿಂದ ಉಕ್ಕಿ ಪಕ್ಕದ ಮಳೆನೀರಿನ ಚರಂಡಿಗೆ ಹರಿಯುತ್ತಿದ್ದ ದುರ್ನಾತದಿಂದ ಕೂಡಿದ್ದ ತ್ಯಾಜ್ಯ ನೀರು! ಮೂಗು ಮುಚ್ಚಿಕೊಂಡೇ ಒಳಕ್ಕೆ ನಡೆದಾಗ ಎರಡೂ ಬದಿಯ ಮಳೆನೀರಿನ ಚರಂಡಿಗಳು ಕೊಳಚೆ ನೀರಿನಿಂದ ತುಂಬಿತುಳುಕುತ್ತಿತ್ತು. ಕೆಟ್ಟ ವಾಸನೆ ಹರಡಿತ್ತು. ಅಲ್ಲೇ ಎಡಬದಿಯಲ್ಲಿ ಕೆಲವು ಮಹಿಳೆಯರು ಬಟ್ಟೆ ಒಗೆಯುತ್ತ ಕುಳಿತಿದ್ದರು. ಹಿಂಬದಿ ಉರ್ದುಶಾಲೆ ನಡೆಯುತ್ತಿತ್ತು. ಪಕ್ಕದ ಮಾರುಕಟ್ಟೆ ಪ್ರಾಂಗಣ ಕೊಳಕಿನಿಂದ ತುಂಬಿತ್ತು. ಆ ಕೊಳಕಿನ ರಾಶಿಯ ನಡುವೆ ಹಲವರು ಸುಮ್ಮನೆ ಕುಳಿತುಕೊಂಡಿದ್ದರು.  ಬಲಬದಿ ಬೀಳುಬಿದ್ದ ಖಾಲಿ ಜಾಗದಲ್ಲಿ ಉದ್ದಕ್ಕೂ ಹಂದಿ ಸಾಕಾಣಿಕೆ ಗೂಡುಗಳು, ಹಂದಿಗಳು ಹಾಗೂ ಗಲೀಜು ತುಂಬಿಕೊಂಡಿದ್ದುದು ಕಾಣಿಸಿತು.
     ಸುಡು ಬಿಸಿಲಲ್ಲೇ ಮುಂದಕ್ಕೆ ಹೆಜ್ಜೆ ಹಾಕಿದಾಗ 1200 ಮನೆಗಳುಳ್ಳ ಈ ವಸತಿ ಸಂಕೀರ್ಣದುದ್ದಕ್ಕೂ 12 ಮನೆಗಳುಳ್ಳ (ಜಿ ಪ್ಲಸ್ ಟೂ) ಪ್ರತಿ ಬ್ಲಾಕ್‍ನಲ್ಲೂ ಕಾಣಿಸಿದ್ದು ಬರೀ ಕೊಳಕು..ಕೊಳಕು.. ಮತ್ತು ಕೊಳಕು ಮಾತ್ರ! ಯಾವುದೇ ರಸ್ತೆಗೆ ಕಾಲಿಟ್ಟರೂ, ರಸ್ತೆಯ ಇಕ್ಕೆಲಗಳ ಮಳೆನೀರಿನ ಚರಂಡಿಯಲ್ಲಿ ಒಳಚರಂಡಿಯ ತ್ಯಾಜ್ಯ ತುಂಬಿಕೊಂಡಿತ್ತು. ತಲೆಸುತ್ತಿಬರುವಷ್ಟು ದುರ್ನಾತ ಅಸಹನೀಯವಾಗಿತ್ತು. ಮನೆಗಳ ಹಿಂಬದಿಯ ಖಾಲಿ ಜಾಗದಲ್ಲಿ (ಪ್ಯಾಸೇಜ್) ಗಲೀಜು ತುಂಬಿಕೊಂಡಿತ್ತು. ಪ್ಲಾಸ್ಟಿಕ್ ತ್ಯಾಜ್ಯಗಳೂ ಹೇರಳವಾಗಿದ್ದವು. ಕೆಲವು ಬ್ಲಾಕ್‍ಗಳಲ್ಲಿ ಮನೆಮುಂದಿನ ಒಳಚರಂಡಿ ಪಿಟ್ ತುಂಬಿ ಅಲ್ಲೇ ಚರಂಡಿಗೆ ಹರಿಯುತ್ತ ಗಲೀಜು ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಗಳ ನೈರ್ಮಲ್ಯವೂ ಅಷ್ಟಕ್ಕಷ್ಟೇ ಅನಿಸುತ್ತಿತ್ತು. ಹಂದಿ-ಬೀದಿ ನಾಯಿಗಳೂ ಅಲ್ಲಲ್ಲಿ ತಿರುಗಾಡುತ್ತಿದ್ದವು. ಇಡೀ ಬಡಾವಣೆ ಹಾಗೂ ಸುತ್ತಲಿನ ಪರಿಸರ ಅನೈರ್ಮಲ್ಯದ ಗೂಡಿನಂತೆ ಗೋಚರಿಸಿತು.
ಕಟ್ಟಡದಲ್ಲಿ ನೀರಿನ ಸೋರಿಕೆ
       ಮಧ್ಯಾಹ್ನದ ಸಮಯವಾದ್ದರಿಂದ ಇಲ್ಲಿನ ಬಹುತೇಕ ನಿವಾಸಿಗಳು ಕೆಲಸಕ್ಕೆ ಹೋಗಿದ್ದ ಕಾರಣ, ಇಡೀ ಬಡಾವಣೆಯಲ್ಲಿ ಜನದಟ್ಟಣಿ ಕಾಣಿಸಲಿಲ್ಲ. ಆದರೆ ಮನೆಯಲ್ಲೇ ಇದ್ದ ಮಹಿಳೆಯರು ಮನೆ ಕೆಲಸದಲ್ಲಿ ನಿರತರಾಗಿದ್ದರು. ಒಂದೆಡೆ ಕೆಲವರು ಚೀಟಿಗೆ ಸಂಬಂಧಿಸಿದಂತೆ ತಲ್ಲೀನರಾಗಿದ್ದರು. ಅಲ್ಲಿ ಯಾರನ್ನು ವಿಚಾರಿಸಿದರೂ, ಎಲ್ಲರೂ ಹೇಳಿದ್ದು ಒಂದೇ ರೀತಿಯ ಸಾಮಾನ್ಯ ದೂರು. ಅದೇನೆಂದರೆ, ಜಿ ಪ್ಲಸ್ ಟೂ ಮಾದರಿ 12 ಮನೆಗಳುಳ್ಳ ಪ್ರತಿಯೊಂದು ಬ್ಲಾಕ್‍ನಲ್ಲೂ ನೀರಿನ ಪೈಪ್‍ಗೆ ಸಂಬಂಧಿಸಿದ ಪ್ಲಂಬಿಂಗ್ ಕಾಮಗಾರಿ ಕಳಪೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಪೈಪ್‍ನಿಂದ ಹಾಗೂ ಸ್ನಾನದ ಕೋಣೆ ಮತ್ತು ಶೌಚಾಲಯದ ನೀರು ಪೈಪ್‍ಗಳಿಂದ ಸೋರಿಕೆ ಆಗುತ್ತಿದೆ ಎಂಬುದು. 
      ಈ ರೀತಿಯ ನೀರಿನ ಸೋರಿಕೆ ಬಹುದೊಡ್ಡ ತಲೆನೋವು ಹಾಗೂ ಆತಂಕವನ್ನು ನಿವಾಸಿಗರಲ್ಲಿ ಮೂಡಿಸಿದೆ. ಕೆಲವು ಮನೆಗಳಲ್ಲಿ ಈ ನೀರು ವಿದ್ಯುದೀಕರಣದ ಪೈಪ್‍ನಲ್ಲೂ ಹರಿದುಬಂದಿದ್ದು, ಆ ಮನೆಯವರು ವಿದ್ಯುತ್ ಅವಘಢದ ಭೀತಿಯಿಂದ ತತ್ತರಿಸಿದ ಉದಾಹರಣೆಗಳೂ ಇವೆ. ಮನೆಯವರೊಬ್ಬರು ಈ ರೀತಿಯ ಭೀತಿಯಿಂದ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿಕೊಂಡಿದ್ದಾರೆಂದರೆ, ಇಲ್ಲಿನ ಆತಂಕದ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು. ಗೋಡೆಯಲ್ಲೇ ಹೀಗೆ ನೀರಿನ ಸೋರಿಕೆ ಆಗುತ್ತಿರುವುದರಿಂದ ಕಟ್ಟಡ ಶಿಥಿಲಗೊಂಡು, ಕುಸಿದು ಬೀಳಬಹುದೆಂಬ ಕಳವಳದ ಮಾತುಗಳೂ ಕೇಳಿಬಂದವು. 
      ನಾವು ಇನ್ನೂ ಇಪ್ಪತ್ತು-ಇಪ್ಪತ್ತೈದು ವರ್ಷ ಇಲ್ಲಿರಬಹುದೆಂಬ ಆಸೆಯಿಂದ ಬಂದೆವು. ಆದರೆ ಈ ಸೋರಿಕೆ ನೋಡಿದರೆ ಐದು-ಹತ್ತು ವರ್ಷಕ್ಕೇ ಉರುಳಿಬಿದ್ದು ಸಾಯಬೇಕಾದೀತೇನೋ ಎಂಬ ಆತಂಕ ಉಂಟಾಗುತ್ತದೆ ಎಂದು ನಸ್ರಿನ್ ತಾಜ್ ಎಂಬುವವರು ಉದ್ಗರಿಸಿದರು.
 ನೀರಿನ ಸಮಸ್ಯೆ
     1200 ಮನೆಗಳ ಈ ವಸತಿ ಸಂಕೀರ್ಣದ ಮತ್ತೊಂದು ಸಮಸ್ಯೆ ನೀರಿನದು. ಇಲ್ಲಿ ಜಿ ಪ್ಲಸ್ ಟೂ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಅಂದರೆ ನೆಲ ಅಂತಸ್ತಿನಲ್ಲಿ (ಗ್ರೌಂಡ್ ಫ್ಲೋರ್) ನಾಲ್ಕು ಮನೆಗಳಿದ್ದು, ಮೊದಲನೇ ಅಂತಸ್ತು ಮತ್ತು ಎರಡನೇ ಅಂತಸ್ತಿನಲ್ಲಿ ತಲಾ ನಾಲ್ಕು ಮನೆಗಳಿವೆ. ಈ ರೀತಿ ಒಟ್ಟು 12 ಮನೆಗಳ ಸಮುಚ್ಛಯವನ್ನು ಒಂದು ಬ್ಲಾಕ್ ಎಂದು ಗುರುತಿಸಲಾಗುತ್ತದೆ. ಇಂತಹ 100 ಬ್ಲಾಕ್‍ಗಳಿವೆ. ಪ್ರತಿ ಬ್ಲಾಕ್‍ನಲ್ಲಿ ನೆಲಅಂತಸ್ತಿನಲ್ಲಿ ಒಂದು ಸಂಪ್ ಇದೆ. ಈ ಸಮುಚ್ಚಯದ ಒಂದೆಡೆ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್‍ನಿಂದ ಈ ಸಂಪ್‍ಗೆ ನೀರು ಬರುತ್ತದೆ. ಆ ನೀರನ್ನು ಎರಡನೇ ಅಂತಸ್ತಿನ ಮೇಲಿರುವ ಸಿಂಟೆಕ್ಸ್ ಟ್ಯಾಂಕ್‍ಗಳಿಗೆ ಪಂಪ್ ಮಾಡಿಕೊಳ್ಳಲಾಗುತ್ತದೆ. ಅಲ್ಲಿಂದ ಈ 12 ಮನೆಗಳಿಗೆ ನೀರು ಪೂರೈಕೆಗೊಳ್ಳುತ್ತದೆ. ಆದರೆ ಸಂಪ್‍ಗೆ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತಿದೆಯೆಂಬ ಹಾಗೂ ಈ ನೀರು ಸಾಕಾಗುತ್ತಿಲ್ಲವೆಂಬ ದೂರುಗಳಿದ್ದು, ಇದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ. 
     ಮತ್ತೊಂದು ಸಮಸ್ಯೆ ಎಂದರೆ, ಪ್ರತಿ ಬ್ಲಾಕ್‍ನ ಮೇಲ್ಭಾಗದಲ್ಲಿ ಅಳವಡಿಸಿರುವ ಸಿಂಟೆಕ್ಸ್ ಟ್ಯಾಂಕ್ ಅನ್ನು ಈವರೆಗೆ ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ ಎಂಬುದು. ಮೇಲಕ್ಕೇರಲು ಮೆಟ್ಟಿಲುಗಳಿಲ್ಲ. ಆ ಟ್ಯಾಂಕ್‍ಗಳ ಸ್ಥಿತಿ ಹೇಗಿದೆಯೆಂಬುದು ಗೊತ್ತಾಗುತ್ತಿಲ್ಲ. ಅದಕ್ಕೆ ನೀರನ್ನು ಪಂಪ್ ಮಾಡುವುದು ಹಾಗೂ ಆ ನೀರನ್ನು ಬಳಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗರು. 
     ಈ ನೀರೇನಿದ್ದರೂ ಇತರೆ ಉಪಯೋಗಗಳಿಗೆ ಮಾತ್ರ. ಆದರೆ ಕುಡಿಯುವ ನೀರಿಗಾಗಿ ಇವರೆಲ್ಲ ದಿಬ್ಬೂರಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವಲಂಬಿಸಿದ್ದಾರೆ. ಕ್ಯಾನ್‍ನಲ್ಲಿ ನೀರು ತುಂಬಿಸಿಕೊಂಡು ತರುವುದು ದೈನಂದಿನ ಕಾಯಕವಾಗಿದೆ. ಆದರೆ ಒಂದೇ ಸ್ಥಳದಲ್ಲಿ 1200 ಮನೆಗಳಿರುವುದರಿಂದ ಇಲ್ಲೊಂದು ಪ್ರತ್ಯೇಕ ಶುದ್ಧ ನೀರಿನ ಘಟಕ ಸ್ಥಾಪಿಸಬೇಕೆಂಬುದು ನಿವಾಸಿಗರ ಬೇಡಿಕೆಯಾಗಿದೆ. 
ಬೆಳಗದ ಬೀದಿದೀಪಗಳು
      ಇಡೀ ಬಡಾವಣೆಯಲ್ಲಿ ವಿದ್ಯುದೀಕರಣವಾಗಿದೆ. ಬೀದಿಬದಿ ವಿದ್ಯುತ್ ಕಂಬಗಳಿವೆ. ಬೀದಿದೀಪಗಳನ್ನೂ ಅಳವಡಿಸಲಾಗಿವೆ. ಆದರೆ ಬಹುತೇಕ ಬೀದಿದೀಪಗಳು ಹಾಳಾಗಿರುವುದರಿಂದ, ರಾತ್ರಿವೇಳೆ ಎಲ್ಲ ರಸ್ತೆಗಳೂ ಕಗ್ಗತ್ತಲಿನಿಂದ ಕೂಡಿರುತ್ತವೆ. ರಾತ್ರಿ ವೇಳೆ ಭಯದ ವಾತಾವರಣ ಉಂಟಾಗುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಬಾಬಾ.ಇಲ್ಲಿನ ವಿದ್ಯುತ್ ಕಂಬಗಳಲ್ಲಿ ಕೈಗೆಟುಕುವಂತೆ ಇರುವ ಅಪಾಯಕಾರಿ ವಿದ್ಯುತ್ ಕೊಂಡಿಗಳು ಹಾಗೂ ಕಿತ್ತುಹೋಗಿರುವ ಬೀದಿದೀಪದ ಸ್ವಿಚ್ ಬೋರ್ಡ್‍ಗಳನ್ನು ತೋರಿಸುತ್ತ, ಈ ಬಗ್ಗೆ ಯಾರೊಬ್ಬರೂ ಗಮನಿಸುತ್ತಿಲ್ಲ ಎಂದು ವಿಷಾದದಿಂದ ಹೇಳಿದರು. (ಮುಂದುವರೆಯುವುದು)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link