ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಕಲಚೇತನರ ಬೈಕ್ ರ್ಯಾಲಿ ಗಮನಸೆಳೆಯಿತು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ವಿಕಲಚೇತನರ ಬೈಕ್ ರ್ಯಾಲಿಗೆ ಚುನಾವಣಾ ರಾಯಭಾರಿ(ಜಿಲ್ಲಾ ಐಕಾನ್)ಗಳಾದ ಹಿರಿಯ ಸಂಗೀತ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಭದ್ರಮ್ಮ ಮನ್ಸೂರ್ ಅವರು ವಿಶೇಷಚೇತನರು ಮತದಾನದಿಂದ ಯಾರು ಹೊರಗೆ ಉಳಿಯದಂತೆ ಪ್ರತಿಯೊಬ್ಬ ವಿಶೇಷಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ರ್ಯಾಂಪ್ ವ್ಯವಸ್ಥೆ, ವಾಹನದ ವ್ಯವಸ್ಥೆ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಂಡಿದ್ದು, ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದರು.
ಪ್ರತಿಯೊಬ್ಬ ವಿಶೇಷಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯೋಗ್ಯ ವ್ಯಕ್ತಿಗೆ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಸದೃಢಗೊಳಿಸಿ ಎಂದರು.
ವಿಕಲಚೇತನರ ಬೈಕ್‍ರ್ಯಾಲಿ (ಜಾಥಾ)ಯು ಕನಕದುರ್ಗಾ ದೇವಸ್ಥಾನದಿಂದ ಆರಂಭವಾಗಿ ಎಸ್.ಪಿ.ವೃತ್ತ, ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗವಾಗಿ ಗಾಂಧಿಭವನದ ಮೂಲಕ ದುರ್ಗಮ್ಮ ದೇವಸ್ಥಾನದವರೆಗೆ ಸಂಚರಿಸಿತು.
ಈ ರ್ಯಾಲಿಯಲ್ಲಿ ಭಾಗವಹಿಸಿದ್ದ 350ಕ್ಕೂ ಹೆಚ್ಚು ವಿಕಲಚೇತನರು ಮತದಾನದ ಮಹತ್ವಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುವುದರ ಮೂಲಕ ಮತದಾನದ ಮಹತ್ವ ಸಾರಿದರು. ವಿಕಲಚೇತನರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮತ್ತು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ್ ಸೇರಿದಂತೆ ಅನೇಕರು ಇದ್ದರು.