ಬೆಂಗಳೂರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಲ್ಲೇ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ವಿವಿಧ ಯೋಜನೆಗಳಿಗೆ ತಡೆ ನೀಡಿದ್ದಾರೆ.ಅನುಮೋದನೆಗೊಂಡ ಅಭಿವೃದ್ಧಿ ಕಾಮಗಾರಿಗಳಿಗೂ ತಡೆಯೊಡ್ಡಿರುವುದು ಸಮರ್ಥನೀಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಜಮೀರ್ ಅಹ್ಮದ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ದಿನೇಶ್ ಗುಂಡೂರಾವ್ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಿದ್ದಂತೆಯೇ ಬಿಬಿಎಂಪಿಯ ಬಜೆಟ್ ಗೆ ಅನುಮೋದನೆಯನ್ನು ತಡೆಹಿಡಿದಿದೆ.
ಅಲ್ಲದೆ ಬೆಂಗಳೂರು ನಗರೋತ್ಥಾನ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನಗೊಳಿಸಿ ಕಸದ ಸಮಸ್ಯೆ,ಕುಡಿಯುವ ನೀರು ,ರಸ್ತೆ, ಟೆಂಡರ್ ಶ್ಯೂರ್ ಕಾಮಗಾರಿಗೆ ಚಾಲನೆ ನೀಡಿ, 8 ಸಾವಿರ ಕೋಟಿರೂ ಅನುದಾನವನ್ನು ನೀಡಿದ್ದರು.ಮೈತ್ರಿ ಸರ್ಕಾರ 11500 ಕೋಟಿ ರೂಗಳ ಕಾಮಗಾರಿಗೆ ಅನುಮೋದನೆ ನೀಡಿತ್ತು.
ಕಾಮಗಾರಿಗಳ ಕೆಲಸ ನಡೆಯುತ್ತಿರುವುದಾಗ ದಿಡೀರ್ ಯಡಿಯೂರಪ್ಪ ಅವರು ಯೋಜನೆಗಳಿಗೆ ತಡೆ ನೀಡಿದ್ದಾರೆ ಇದು ಸರಿಯಾದ ಕ್ರಮವಲ್ಲ.ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಬೆಂಗಳೂರು ನಗರ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದರು.
ಹಿಂದಿನ ಎರಡೂ ಸರ್ಕಾರಗಳ ಅವಧಿಯಲ್ಲಿ ಅನುಮೋದನೆಗೊಂಡ ಕೆಲಸಗಳನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು .ಬೆಂಗಳೂರು ನಗರ ನಾಗರೀಕರ ಹಿತದೃಷ್ಠಿಯಿಂದ ಇದು ಉತ್ತಮವಾದ ಬೆಳವಣಿಗೆಯಲ್ಲ.ಅಲ್ಲದೆ ಇದರಲ್ಲಿ ಶಾಸಕ ಸ್ಥಾನವನ್ನು ತೊರೆದ ಕ್ಷೇತ್ರಗಳು ಸೇರಿವೆ.ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಬಿಜೆಪಿ ಸರ್ಕಾರದ ಯೋಜನೆಗಳಿಗೆ ನಾವು ಅಡ್ಡಿಯುಂಟು ಮಾಡಿರಲಿಲ್ಲ.ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಕಠಿಣ ನಿಲುವ ತಳೆಯಬಾರದು.ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ .ಹೀಗಾಗಿ ತಡೆ ಹಿಡಿದಿರುವ ಕಾಮಗಾರಿಗಳಿಗೆ ಅನುವು ಮಾಡಿಕೊಡಬೇಕು. ಬಿಎಸ್ ಯಡಿಯೂರಪ್ಪ ನಿಲುವು ಬದಲಿಸಿಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಬಿಎಂಪಿಯಲ್ಲಿ 8,500 ಕೋಟಿ ರೂ ಕಾಮಗಾರಿಗಳು ಪ್ರಾರಂಭವಾಗಿವೆ.ರಸ್ತೆ ,ಮೇಲ್ಸೇತುವೆ ,ಒಳ ಚರಂಡಿ, ಸಿಸಿ ಚರಂಡಿ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿ ಆರಂಭವಾಗಿವೆ.150 ಕೋಟಿರೂ ಅಧಿಕ ಅನುದಾನವನ್ನು ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ.28 ವಿಧಾನ ಸಭಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಹೀಗಾಗಿ ನವ ಬೆಂಗಳೂರು ಯೋಜನೆಗೆ ತಡೆ ನೀಡುವುದು ಬೇಡ. ಕಾಮಗಾರಿ ಗುಣಮಟ್ಟ ಕಳೆಪೆಯಾಗಿದ್ದರೆ ಗುಣಮಟ್ಟ ಪರಿಶೀಲನೆಗೆ ನಮ್ಮ ಅಭ್ಯಂತರವಿಲ್ಲ ಆದರೆ ಇದರ ನೆಪದಲ್ಲಿಯೇ ಉಳಿಕೆ ಕಾಮಗಾರಿಗಳನ್ನು ತಡೆಹಿಡಿಯುವುದು ಸರಿಯಲ್ಲ ಎಂದರು.
ಬಿಜೆಪಿ ಸರ್ಕಾರದ ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಲಾಗಿತ್ತು. ಕಾಮಗಾರಿಗಳಲ್ಲಿ ನ್ಯೂನತೆ, ಕಳಪೆ ಕಾಮಗಾರಿ ಇದ್ದರೆ ಕ್ರಮ ತೆಗೆದುಕೊಳ್ಳಲಿ ಅದನ್ನು ಬಿಟ್ಟು ಅನುಮೋದಿತ ಕಾಮಗಾರಿಗೆ ತಡೆ ನೀಡುವುದು ಸರಿಯಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಲವಾರು ಆಸ್ತಿಗಳನ್ನು ಅಡವಿಟ್ಟಿದ್ದರು .ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಡವಿಟ್ಟ ಆಸ್ತಿಗಳನ್ನು ಬಿಡಿಸಿಕೊಂಡಿದ್ದೇವೆ. ಕೆರೆಗಳಿಗೆ ಹರಿಯುತ್ತಿದ್ದ ಕೊಳಚೆಯನ್ನು ತಡೆಯಲಾಗಿದೆ. ಕೊಳಚೆ ನೀರನ್ನು ಶುದ್ಧೀಕರಿಸಲಾಗುತ್ತಿದೆ.110 ಹಳ್ಳಿಗೆ ಕುಡಿಯುವ ನೀರು ಪೂರೈಸಲಾಗಿದೆ. ಮಳೆ ನೀರಿನಿಂದ ರಸ್ತೆ ಗುಂಡಿ ಬೀಳುತ್ತಿದ್ದವುಈಗ ವೈಟ್ ಟಾಪಿಂಗ್ ಮಾಡುತ್ತಿದ್ದೇವೆ ಇದರಿಂದ 30 ವರ್ಷ ರಸ್ತೆ ಗುಣಮಟ್ಟದಿಂದ ಕೂಡಿರುತ್ತದೆ.
ಪ್ರತೀ ವಾರ್ಡ್ ಗಳಿಗೂ ನಾವು ಹಣ ಬಿಡುಗಡೆ ಮಾಡಿದ್ದೇವೆ ಬೆಂಗಳೂರು ಹೊರವಲಯದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಉತ್ತಮ ಕೆಲಸಗಳು ನಡೆಯುತ್ತಿದ್ದು ಏಕಾಏಕಿ ಕಾಮಗಾರಿಗಳಿಗೆ ತಡೆ ನೀಡಿದರೆ ಹೇಗೆ.ಬೆಂಗಳೂರು ಅಭಿವೃದ್ದಿಗೆ ಅಡ್ಡಿಯಾಗಿ ನಗರ ಕೆಟ್ಟ ಹೆಸರು ಪಡೆದುಕೊಂಡು ಆರೇಳು ತಿಂಗಳಲ್ಲಿಯೇ ನಗರ ಅದ್ವಾನವಾಗುತ್ತದೆ. ಹೀಗಾಗಿ ಕಾಮಗಾರಿಗಳನ್ನ ತಡೆಹಿಡಿಯುವುದು ಸರಿಯಲ್ಲ ಅನುದಾನವನ್ನ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೆಜೆ ಜಾರ್ಜ್ ಮನವಿ ಮಾಡಿದ್ದಾರೆ.
ಮಾಜಿ ಸಚಿವ ಕೃಷ್ಣಭೈರೇಗೌಡ, ರಾಜಕೀಯ ಕಾರಣಕ್ಕಾಗಿ ಬಿಜೆಪಿ ಇಂತಹ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಬಿಬಿಎಂಪಿ ಅನುದಾನಕ್ಕೆ ತಡೆಯೊಡ್ಡುವುದು ಅನೀತಿಯ ಕೆಲಸವಾಗಿದೆ. ನೀವು ಮಾಡುತ್ತಿರುವ ಕೆಲಸದಿಂದಾಗಿ ಬೆಂಗಳೂರು ನಗರದ ಅಂದವೇ ಹಾಳಾಗಲಿದೆ.ಯೋಜನೆಗೆ ತಡೆ ನೀಡಿದರೆ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತವೆ.ಆಗ ಜನ ನಿಮಗೆ ಬಾಯಿಗೆ ಬಂದಂತೆ ಮೂದಲಿಸುತ್ತಾರೆ ಆದ್ದರಿಂದ ಅನುದಾನ ತಡೆಹಿಡಿಯುವುದು ಮಾರಕ ತೀರ್ಮಾನ ಬೇಡ.ಹೊಸದಾಗಿ ಕ್ರಿಯಾಯೋಜನೆ ರೂಪಿಸಿದರೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ನಷ್ಟವೇ ಹೊರತು ಲಾಭವಾಗುವುದಿಲ್ಲ. ಹೊಸದಾಗಿ ಕಾಮಗಾರಿ ಆಗಬೇಕಾದರೆ ಕನಿಷ್ಟ 8 ತಿಂಗಳು ಕಾಲಾವಕಾಶ ಬೇಕಾಗುತ್ತದೆ.ಆಗ ಬೆಂಗಳೂರಿನ ಅಭಿವೃದ್ಧಿಗೆ ಮತ್ತಷ್ಟು ಪೆಟ್ಟು ಬೀಳಲಿದೆ ಎಂದು ಬಿಜೆಪಿ ಸರ್ಕಾರಕ್ಕೆ ಕೃಷ್ಣಭೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಮುಚ್ಚುವ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅದು ಸರ್ಕಾರ ಚರ್ಚೆ ಮಾಡಿದೆಯೋ ಇಲ್ಲವೋ ಎಂಬುದು ನಮಗೆ ಮಾಹಿತಿ ಇಲ್ಲ.ಕೆಲವು ಬಿಜೆಪಿ ನಾಯಕರು ಈ ರೀತಿಯ ಹೇಳಿಕೆ ನೀಡಿರಬಹುದು ಆದರೆ ಮುಖ್ಯಮಂತ್ರಿ ಅವರು ಏಕಾಏಕಿ ಜನಪ್ರಿಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ. ಒಂದು ವೇಳೆ ಅಂತಹ ಕೆಲಸ ಮಾಡಿದರೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿ ಬಳಿಕ ಕಾಂಗ್ರೆಸ್ ನಾಯಕರು ಕೆ ಆರ್.ಪುರಂ, ಯಶವಂತಪುರ, ಆರ್.ಆರ್.ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಹೊಸಕೋಟೆ ಕ್ಷೇತ್ರಗಳ ಚುನಾವಣೆ,ಅಭ್ಯರ್ಥಿ ಆಯ್ಕೆ ಹಾಗೂ ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಭೆ ನಡೆಸಿದರು.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ಸಭೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್ ,ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
