ಹೈದರಾಬಾದ್ ಅತ್ಯಾಚಾರದ ಆರೋಪಿಗಳು ಎನ್‍ಕೌಂಟರ್‍ಗೆ ಬಲಿಯಾದ ನಂತರ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಕೆಲವೇ ದಿನಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಯಿತು., ಸಂತ್ರಸ್ಥೆಗೆ ನ್ಯಾಯ ಸಿಕ್ಕಿತು ಎಂದು ಒಂದು ವರ್ಗ ಸಂಭ್ರಮಿಸುತ್ತಿದೆ. ಎನ್‍ಕೌಂಟರ್ ಕ್ರಮ ನಮ್ಮ ಕಾನೂನು ವ್ಯವಸ್ಥೆಗೆ ವಿರುದ್ಧ, ನ್ಯಾಯ ಪಾಲನೆಯ ಮೂಲಕವೇ ಅವರಿಗೆ ಶಿಕ್ಷೆಯಾಗಬೇಕಿತ್ತು ಎಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತಿದೆ. ಭೀಭತ್ಸ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ಮೇಲೆ ಆ ಕ್ಷಣಕ್ಕೆ ಏನೇ ಕ್ರಮ ಕೈಗೊಂಡರೂ ಒಟ್ಟಾರೆ ಸಮುದಾಯದಲ್ಲಿ ಸ್ವಾಗತ ಇದ್ದೇ ಇರುತ್ತದೆ. ಇದು ಸಂದರ್ಭದ ಬಿಸಿ.
ಅತ್ಯಾಚಾರ, ಅಪರಾಧ ಮತ್ತು ಶಿಕ್ಷೆ ಈ ಮೂರು ಅಂಶಗಳನ್ನು ಒಮ್ಮೆ ಗಮನಿಸಿದಾಗ ನಮ್ಮ ಮುಂದೆ ಹಲವು ಪ್ರಶ್ನೆಗಳು ಎದುರಾಗುತ್ತವೆ. ರಾಷ್ಟ್ರಾದ್ಯಂತ ಒಂದಲ್ಲ ಒಂದು ಕಡೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಅಪರಾಧ ಪ್ರಕರಣಗಳಂತೂ ಲೆಕ್ಕಕ್ಕಿಲ್ಲ. ಇಂತಹ ಕೃತ್ಯಗಳು ಸಂಭವಿಸಿದಾಗ ಕಾನೂನು ತನ್ನದೆ ಆದ ಕ್ರಮ ಕೈಗೊಳ್ಳುತ್ತದೆ. ಕೈಗೊಳ್ಳಬೇಕು. ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ವಿಚಾರಣೆ ನಡೆದು ಸಾಬೀತಾದರೆ ನ್ಯಾಯಾಲಯ ಶಿಕ್ಷೆ ಪ್ರಕಟಿಸುತ್ತದೆ. ಇದು ನಾವು ಒಪ್ಪಿಕೊಂಡಿರುವ ಕಾನೂನಿನ ನ್ಯಾಯ ವ್ಯವಸ್ಥೆ.
ಯಾರೇ ತಪ್ಪು ಮಾಡಲಿ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕಿರುವುದು ಪೊಲೀಸ್ ಇಲಾಖೆ. ಶಿಕ್ಷೆ ನೀಡಬೇಕಿರುವುದು ನ್ಯಾಯಾಂಗ ವ್ಯವಸ್ಥೆ. ಇಂತಹ ವ್ಯವಸ್ಥೆಗಳು ಇರಲೇಬೇಕೆಂದು ಬಹಳ ವರ್ಷಗಳ ಕಾಲ ಅಧ್ಯಯನ ಮಾಡಿ ನಮ್ಮ ಪೂರ್ವಿಕರು ಚಿಂತನೆ ನಡೆಸಿದ ಫಲವೇ ನಮ್ಮ ಈಗಿರುವ ಪ್ರಜಾಪ್ರಭುತ್ವ, ಸಂವಿಧಾನ ಇವೆಲ್ಲವೂ ರಚನೆಯಾಗಿರುವುದು. ಇದರ ಅಡಿಯಲ್ಲಿಯೇ ಕಾನೂನು ಕಟ್ಟಳೆಗಳು ರೂಪುಗೊಂಡಿ ರುವುದು.
ಇಂತಹ ವ್ಯವಸ್ಥೆ ಜಾರಿಯ ಹಿಂದೆ ಅನೇಕ ತುಲನಾತ್ಮಕ ಅಂಶಗಳು ಹಾದುಹೋಗಿವೆ. ಯಾವ ವ್ಯವಸ್ಥೆ ನಮ್ಮ ದೇಶಕ್ಕೆ ಸೂಕ್ತ ಎಂಬುದನ್ನು ಒಂದಲ್ಲ ಹಲವು ಬಾರಿ ಚಿಂತಿಸಿ ಚರ್ಚಿಸಲಾಗಿದೆ. ಹಿಂದೆ ಪೊಲೀಸ್ ರಾಜ್ಯವಿತ್ತು. ಅದು ನಮಗೆ ಸೂಕ್ತವಲ್ಲ ಎಂದು ಕಲ್ಯಾಣ ರಾಜ್ಯದ ಚಿಂತನೆ ಎದುರಾಯಿತು. ಇದರ ಪರಿಣಾಮವಾಗಿಯೇ ಕಾನೂನಿನಲ್ಲಿ ಹಲವು ಮಹತ್ತರ ಬದಲಾವಣೆಗಳಾದವು. ಅಪರಾಧಿ ಮನೋಭಾವದಿಂದ ಮನುಷ್ಯನನ್ನು ಪರಿವರ್ತಿಸುವ ಮಟ್ಟಕ್ಕೆ ನಮ್ಮ ಕಾನೂನುಗಳು ಬದಲಾದವು. ಇದೇ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ರೂಪುಗೊಂಡವು. ಆದರೆ ಈ ಎಲ್ಲ ಯೋಜನೆಗಳು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವಲ್ಲಿ ವಿಫಲವಾದವು. ಅದೇ ಇಂದಿನ ದುರಂತ.
ಒಬ್ಬ ತಪ್ಪು ಮಾಡಿದಾಗ ಆತನಿಗೆ ಕೂಡಲೇ ಶಿಕ್ಷೆ ವಿಧಿಸುವ ಕಾನೂನು ಕೆಲವು ದೇಶದಲ್ಲಿದೆ. ನಾವದನ್ನು ಒಪ್ಪಿಕೊಂಡಿಲ್ಲ. ಸುಧಾರಣಾ ಕ್ರಮಗಳಿಂದಲೇ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬ ಸಿದ್ಧಾಂತ ನಮ್ಮದು. ಆವೇಶದಲ್ಲಿ ಕಂಡದ್ದೆಲ್ಲ ಸತ್ಯವಾಗಲಾರದು. ತನಿಖೆಯ ಸಂದರ್ಭದಲ್ಲಿ ಲೋಪಗಳು ಕಂಡುಬರಬಹುದು. ಈ ಕಾರಣಕ್ಕಾಗಿಯೇ ನೂರು ಅಪರಾಧಿಗಳು ಬಿಡುಗಡೆಯಾದರೂ ಪರವಾಗಿಲ್ಲ, ಒಬ್ಬ ಅಪರಾಧಿಗೆ ಶಿಕ್ಷೆಯಾಗಬಾರದು ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ಕಾನೂನಿನ ಪ್ರಕ್ರಿಯೆಗಳು ಸಾಗಿ ಅಂತಿಮವಾಗಿ ಶಿಕ್ಷೆ ಜಾರಿಯಾಗುತ್ತದೆ.
ಇನ್ನು ನೇರವಾಗಿ ಹೈದರಾಬಾದ್ ಎನ್‍ಕೌಂಟರ್ ವಿಷಯಕ್ಕೆ ಬಂದರೆ ಅಲ್ಲಿ ಯುವತಿಯನ್ನು ಧಾರುಣವಾಗಿ ಅತ್ಯಾಚಾರ ಮಾಡಿ ಕೊಲೆಗೈಯ್ಯಲಾಗಿತ್ತು. ಇಂತಹವರನ್ನು ಎನ್‍ಕೌಂಟರ್ ಮಾಡಿದ್ದು ಸರಿ ಎಂದು ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಹೊಳೆಯುತ್ತದೆ. ಇದು ಒಂದು ಪ್ರಕರಣ. ಇದರಾಚೆ ನಾವು ನೋಡಿದಾಗ ಎಲ್ಲ ಪ್ರಕರಣಗಳಲ್ಲಿಯೂ ಪೊಲೀಸರು ಹೀಗೆ ಮಾಡಲು ಸಾಧ್ಯವೆ ಎಂಬ ಪ್ರಶ್ನೆಗಳು ಮೂಡಿದಾಗ ಹಲವು ಜಿಜ್ಞಾಸೆಗಳು ಎದುರಾಗುತ್ತವೆ. ಸ್ವಯಂ ರಕ್ಷಣೆಗಾಗಿ ಯಾರೇ ಆಗಲಿ ಎದುರಾಳಿಗಳನ್ನು ಮಣಿಸಲು ಕೆಲವೊಂದು ಪ್ರಕ್ರಿಯೆಗಳನ್ನು ಕೈಗೊಳ್ಳಲು ಅವಕಾಶವಿದೆ.
ಪೊಲೀಸರಿಗೂ ಕಾನೂನಿನಲ್ಲಿ ರಕ್ಷಣೆ ಇದೆ. ಆದರೆ ಎನ್ ಕೌಂಟರ್ ವಿಷಯ ಬಂದಾಗ ಹಲವು ಅನುಮಾನಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಹುಟ್ಟಿಕೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಮಾನವ ಹಕ್ಕುಗಳ ಆಯೋಗ, ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ಈ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮಲ್ಲಿ ಶಿಕ್ಷೆ ವಿಧಿಸಲು ಕಾನೂನಿನ ಮಾರ್ಗಗಳು ಇರುವಾಗ ಬೇರೊಂದು ರೂಪದಲ್ಲಿ ಜೀವ ತೆಗೆಯುವ ಪ್ರಕ್ರಿಯೆ ಎಷ್ಟು ಸೂಕ್ತ ಎಂಬುದು ನ್ಯಾಯಾಂಗ ವ್ಯವಸ್ಥೆಯ ಮುಂದೆ ಎದುರಾಗುವ ಬಹುದೊಡ್ಡ ಪ್ರಶ್ನೆ.
ಘಟನೆ ನಡೆದು ಇಷ್ಟು ವರ್ಷಗಳಾದರೂ ಆರೋಪಿಗಳಿಗೆ ಶಿಕ್ಷೆ ನೀಡಿಲ್ಲ, ಎಷ್ಟೋ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ ಎಂಬ ಸಾರ್ವಜನಿಕರ ಅಸಹನೆ ಸರಿಯಾಗಿಯೇ ಇದೆ. ಆದರೆ ನಮ್ಮ ಕಾನೂನಿನ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಪುರಾವೆಗಳು ಬೇಕು. ನ್ಯಾಯಾಂಗದಿಂದ ನ್ಯಾಯ ಸಿಗದೆ ಹೋದಾಗ ಜನತೆ ಭ್ರಮನಿರಸನಗೊಳ್ಳುವುದು ಸಹಜ. ಹೈದರಾಬಾದ್ ಎನ್‍ಕೌಂಟರ್ ಪ್ರಕರಣದಲ್ಲಿ ಬಹುಪಾಲು ಜನ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದು ಇದೇ ಕಾರಣಕ್ಕಾಗಿ.
ಆದರೆ ಪೊಲೀಸರು ಮುಂದಿನ ದಿನಗಳಲ್ಲಿ ಈ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಹೇಗೆ? ಅಮಾಯಕರನ್ನು ಬಲಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವುದು ಹೇಗೆ? ಪೊಲೀಸರ ಕೈಯಲ್ಲಿ ಆಯುದ ಕೊಟ್ಟು ಸಂಪೂರ್ಣ ಅಧಿಕಾರ ನೀಡಿದರೆ ಎನೆಲ್ಲಾ ಅನಾಹುತಗಳು ಸಂಭವಿಸಲಿವೆ ತಿಳಿಯದೆ ಎಂಬ ತರ್ಕಬದ್ಧ ಪ್ರಶ್ನೆಗಳನ್ನು ಮತ್ತೊಂದು ವರ್ಗ ಮುಂದಿಡುತ್ತದೆ.
ಪೊಲೀಸರ ಈ ಕ್ರಮ ಸರಿಯೋ ತಪ್ಪೋ ಅದನ್ನು ಬದಿಗಿಟ್ಟು ನೋಡೋಣ. ನಮ್ಮಲ್ಲಿ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಇವೆಲ್ಲವೂ ನಿರಂತರವಾಗಿ ಜರುಗುತ್ತಲೇ ಇವೆ. ಇಂತಹ ಪ್ರಕರಣಗಳು ಕಂಡುಬಂದಾಗ ಕೂಡಲೇ ಕ್ರಮ ಜರುಗಬೇಕು. ನ್ಯಾಯದಾನದಲ್ಲಿಯೂ ವಿಳಂಬವಾಗಬಾರದು. ಕಾನೂನಿನ ಈ ಮುಖ ಬಿಟ್ಟು ಮತ್ತೊಂದು ಮುಖ ನೋಡುವುದಾದರೆ ವೈಫಲ್ಯ ಇರುವುದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ.
ಎಲ್ಲರಿಗೂ ಶಿಕ್ಷಣ ಕೊಡಿಸಿ ಮಕ್ಕಳನ್ನು ಮಾನವೀಯ ನೆಲೆಗಟ್ಟಿನಲ್ಲಿ ರೂಪಿಸುವ ವ್ಯವಸ್ಥೆ ನಮ್ಮಲ್ಲಿ ಇದೆಯೇ? ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದುಡಿಮೆಗೆ ಇಳಿದಿದ್ದಾರೆ. ಇಂತಹವರಿಗೆಲ್ಲ ನೈತಿಕ ಶಿಕ್ಷಣ ಹೇಗೆ ಅರ್ಥವಾಗಬೇಕು? ಶಿಕ್ಷಣಮತ್ತು ಉದ್ಯೋಗದ ಭರವಸೆ ಇಲ್ಲದೆ ಹೋದರೆ ಯುವ ಜನತೆ ಎಂತಹ ಹಾದಿಯನ್ನಾದರೂ ಹಿಡಿಯಬಲ್ಲರು. ನಮ್ಮ ಕುಟುಂಬಗಳಿಂದ ಆರಂಭವಾಗಿ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳನ್ನು ಉತ್ತಮ ಹಾದಿಯಲ್ಲಿ ಸಾಗುವಂತಹ ಚಟುವಟಿಕೆಗಳು ಇಂದಿನ ಅಗತ್ಯ. ಎಲ್ಲರ ಬಳಿಯೂ ಮೊಬೈಲ್‍ಗಳಿವೆ. ಸಾಮಾಜಿಕ ಜಾಲತಾಣಗಳು ಯುವಕರನ್ನು ಆಕರ್ಷಿಸುತ್ತಿವೆ. ಇವೆಲ್ಲವೂ ಯುವಕರನ್ನು ದಾರಿ ತಪ್ಪಿಸುವ ಮಾರ್ಗಗಳು. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯತೆ ಇಂದು ಹೆಚ್ಚಿದೆ.
