ಶಿಕ್ಷಣದಿಂದ ದೇಶ ಬದಲಾವಣೆ ಸಾಧ್ಯ: ಡಿಸಿ ಡಾ.ರಾಮ್ ಪ್ರಸಾತ್ ಮನೋಹರ್

ಬಳ್ಳಾರಿ :

      ಗುರುಗಳು ಮಕ್ಕಳಿಗೆ ಬುದ್ಧಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಅವರ ಜೀವನ ಬದಲಾವಣೆಯಾಗಲು ಸಾಧ್ಯ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.

       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಗೃಹರಕ್ಷಕದಳ ಕಚೇರಿ ಪಕ್ಕದಲ್ಲಿರುವ ಗುರುಭವನದ ಆವರಣದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ 130ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

       ಜಿಲ್ಲಾಡಳಿತ ವತಿಯಿಂದ ಶಿಕ್ಷಣ ಅಭಿವೃದ್ಧಿಗಾಗಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇವೆ, ಸ್ಮಾರ್ಟ್ ಕ್ಲಾಸ್ ಯೋಜನೆ ಹಾಗೂ ಇತರೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹೊಸದಾಗಿ ಬಡ ವಿದ್ಯಾರ್ಥಿಗಳಿಗೆ ಬೆಳಕು ಎಂಬ ಹೊಸ ಕಾರ್ಯಕ್ರಮದಡಿಯಲ್ಲಿ 85 ಸಾವಿರ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಣದಲ್ಲಿ 34 ಸ್ಥಾನದಲ್ಲಿದ್ದ ನಮ್ಮ ಬಳ್ಳಾರಿ ಇಂದು ಟಾಪ್ 10ನೇ ಸ್ಥಾನದಲ್ಲಿದೆ. ಇದರಲ್ಲಿ ನಮ್ಮ ಶಿಕ್ಷಕರ ಪಾತ್ರ ಅತ್ಯಂತ ಅಮೋಘವಾಗಿದೆ ಎಂದು ಬಣ್ಣಿಸಿದರು.

      ಮುಂದಿನ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಬಳ್ಳಾರಿ ಟಾಪ್ 5 ಸ್ಥಾನದಲ್ಲಿರುವುದಕ್ಕೆ ಎಲ್ಲಾ ಶಿಕ್ಷಕರು ಶ್ರಮವಹಿಸಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳು ಕೆಎಂಇಆರ್‍ಸಿ ಅಡಿ ಶೈಕ್ಷಣಿಕ ಅಭಿವೃದ್ಧಿಗಾಗಿ 600 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಅನುದಾನದಲ್ಲಿ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್, ಕುಡಿಯುವ ನೀರು ಹಾಗೂ ಇತರೆ ಮೂಲಭೂತ ಸೌಕರ್ಯವನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

      ಮಹಾತ್ಮಗಾಂಧೀ ನಗರದ ಬಡಾವಣೆ : ಶಿಕ್ಷಕರಿಗೆ ಸಾಮಾನ್ಯವಾಗಿ ಮನೆ ಕಟ್ಟುವ ಕನಸು ಇರುತ್ತದೆ;ಇದಕ್ಕಾಗಿ ಮಹಾತ್ಮಗಾಂಧಿ ನಗರದ ವ್ಯಾಪ್ತಿಯಲ್ಲಿ ಬಡಾವಣೆಯಲ್ಲಿ ಮನೆ ಕಟ್ಟಲು ನಿವೇಶನ ನೀಡಲಾಗುತ್ತಿದೆ. ಇದಕ್ಕಾಗಿ ಕಡಿಮೆ ಬಡ್ಡಿಧರದಲ್ಲಿ ಸಾಲ ಸಹ ನೀಡಲಾಗುತ್ತದೆ. ಸರ್ಕಾರದ ಯೋಜನೆಯಿಂದ ಶಿಕ್ಷಕರಿಗೆ ನೇರವಾಗಿ 2 ಲಕ್ಷ 60 ಸಾವಿರ ರೂ. ಗಳನ್ನು ನೀಡಲಾಗುತ್ತಿದೆ. ಈ ಬಡಾವಣೆಗೆ ಶಿಕ್ಷಕರು ಬಂದಲ್ಲಿ ಆ ಬಡಾವಣೆಯ ಅಭಿವೃದ್ಧಿ ಆಗುತ್ತದೆ. ಈ ಬಡಾವಣೆಯಲ್ಲಿ ಉದ್ಯಾನವನ, ಶಾಲೆ, ಬಸ್‍ನಿಲ್ದಾಣ ಹಾಗೂ ಇತರೆ ಮೂಲಭೂತ ಸೌಕರ್ಯವನ್ನು ಸಹ ಒದಗಿಸಲಾಗುತ್ತದೆ ಎಂದರು.

      ಪ್ರತಿ ತಿಂಗಳಿಗೊಮ್ಮೆ ಶಾಲಾ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ: ಜಿಲ್ಲೆಯ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಸಂವಾದ ಕಾರ್ಯಕ್ರಮಕ್ಕೆ ಶಿಕ್ಷಕರು ಸಮೇತ ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದ ಅವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಬೆಳವಣಿಗೆ ಆಗಬೇಕಾದರೆ ಶಿಕ್ಷಣದಿಂದಲೇ ಅದು ಸಾಧ್ಯ ಎಂದರು.

      ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿರುಮಲ ಅವರು ಮಾತನಾಡಿದರು. ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್ ಅವರು ಸ್ವಾಗತಿಸಿದರು.

       ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮಹಾನಗರ ಪಾಲಿಕೆಯ ಮಹಾಪೌರರಾದ ಆರ್.ಸುಶೀಲಬಾಯಿ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ವಿ.ಲಕ್ಷ್ಮೀದೇವಿ, ಮಾಜಿ ಉಪಮೇಯರ್ ನಾಗಮ್ಮ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಇದ್ದರು.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link