ಜಿಲ್ಲೆಯ ಪ್ರಮುಖ ಪ್ರಸ್ತಾವನೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಅನುಷ್ಠಾನ : ಶ್ರೀಕಾರ್

ಬಳ್ಳಾರಿ

   ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಪ್ರಸ್ತಾವನೆಗಳ ಮಾಹಿತಿ ಒದಗಿಸಿ; ಅವುಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎಸ್.ಶ್ರೀಕಾರ್ ಹೇಳಿದರು.

   ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದಪಡಿಸಲಾದ ವಿವಿಧ ಯೋಜನೆಗಳು ಮತ್ತು ಪ್ರಸ್ತಾವನೆಗಳನ್ನು ಸರಕಾರದ ಮಟ್ಟದಲ್ಲಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅವುಗಳನ್ನು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ ಅವರು ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಂಡರು.

ಡಿಎಂಎಫ್ 45 ಕೋಟಿ ರೂ. ವೆಚ್ಚದಲ್ಲಿ ಶಾಲೆ, ಅಂಗನವಾಡಿಗಳಲ್ಲಿ ತೋಟಗಾರಿಕೆ ಬೆಳೆಗಳ ನೆಡುವಿಕೆ:

     ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿಗಳ ಆವರಣದಲ್ಲಿ ತೋಟಗಾರಿಕೆಗಳ ವಿವಿಧ ಬೆಳೆಗಳನ್ನು ನೆಡುವುದಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ 45 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಯೋಜನೆ ತಯಾರಿಸಿಕೊಂಡು ಬನ್ನಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಕಾರ್ ಅವರು ಸೂಚಿಸಿದರು.

     ಅರಣ್ಯ ಇಲಾಖೆಗೆ ತೋಟಗಾರಿಕೆ ಬೆಳೆಗಳನ್ನು ಅಂಗನವಾಡಿ ಮತ್ತು ಶಾಲೆಗಳ ಆವರಣದಲ್ಲಿ ಬೆಳೆಯುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿಕೊಂಡು ಬನ್ನಿ ಅಂತ ಸೂಚನೆ ನೀಡಲಾಗಿತ್ತು; ಆದರೇ ಇದುವರೆಗೆ ಅವರು ಸಲ್ಲಿಸಿಲ್ಲ. ತಾವು ಒದಗಿಸಿದರೇ ತಮಗೆ ಈ ಕೆಲಸ ವಹಿಸಲಾಗುವುದು ಎಂದು ಡಿಸಿ ನಕುಲ್ ಹೇಳಿದರು. ಇದಕ್ಕೆ ಉಸ್ತುವಾರಿ ಕಾರ್ಯದರ್ಶಿ ಶ್ರೀಕಾರ್ ದನಿಗೂಡಿಸಿದರು.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.

*804 ಕುಟುಂಬಗಳಿಗೆ ಒಟ್ಟು ರೂ.80.40 ಲಕ್ಷ ಪರಿಹಾರ ವಿತರಣೆ:

      ಪ್ರವಾಹದಿಂದ ಭಾದಿತ ಸಂತ್ರಸ್ಥರ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳಿಗೆ ಪ್ರತಿ ಕುಟುಂಬಕ್ಕೆ ರೂ.10 ಸಾವಿರಗಳಂತೆ ಪರಿಹಾರ ನೀಡಲು ಆದೇಶಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಒಟ್ಟು 804 ಕುಟುಂಬಗಳಿಗೆ ಒಟ್ಟು ರೂ.80.40 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 05 ಜೀವ ಹಾನಿ ಸಂಭವಿಸಿದ್ದು, ರೂ.5.00 ಲಕ್ಷದಂತೆ ಒಟ್ಟು ರೂ.25.00 ಲಕ್ಷ ಪರಿಹಾರ ಸಂತ್ರಸ್ಥರಿಗೆ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಸಭೆಗೆ ವಿವರಿಸಿದರು.

      ಹಡಗಲಿ ತಾಲ್ಲೂಕಿನಲ್ಲಿ 121 ಬಲೆಗೆ ಒಟ್ಟು ರೂ.3.146 ಲಕ್ಷ ಮತ್ತು 64 ತಪ್ಪೆಗಳಿಗೆ ರೂ.6.144 ಲಕ್ಷ ಪರಿಹಾರ ಪಾವತಿ ಮಾಡಲಾಗಿದೆ. ಹರಪನಹಳ್ಳಿ ತಾಲ್ಲೂಕಿನಲ್ಲಿ 06 ಬಲೆಗೆ ಒಟ್ಟು ರೂ.0.156 ಲಕ್ಷ ಮತ್ತು 13 ತಪ್ಪೆಗಳಿಗೆ ರೂ.1.248 ಲಕ್ಷ ಪರಿಹಾರ ಪಾವತಿ ಮಾಡಲಾಗಿದೆ ಎಂದರು.

     ಆಗಸ್ಟ್ ತಿಂಗಳಲ್ಲಿ ಹಡಗಲಿ ತಾಲೂಕಿನಲ್ಲಿ ಸಂಭವಿಸಿದ ಪ್ರವಾಹದಿಂದ ಮುಳುಗಡೆ ಸ್ಥಿತಿಯಲ್ಲಿದ್ದ ಹಡಗಲಿ ತಾಲ್ಲೂಕಿನ ಬ್ಯಾಲಹುಣಸಿ, ಅಂಗೂರು, ಮದಲಗಟ್ಟ ಮತ್ತು ಕುರುವತ್ತಿ ಗ್ರಾಮಗಳನ್ನು ಸ್ಥಳಾಂತರಿಸುವ ಕುರಿತು ಮತ್ತು ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ನವ ಗ್ರಾಮದಲ್ಲಿ ಆಸರೆ ಯೋಜನೆಯಡಿ ನಿರ್ಮಿಸಲಾದ ಮನೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ದುರಸ್ಥಿ ಪಡಿಸಲು ಬೇಕಾಗುವ ಅನುದಾನ ಕುರಿತು ಪರಿಶೀಲನೆ ಮಾಡಿ ವರದಿ ನೀಡಲು ಸಿ.ಪಿ.ಓ. ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸದರಿ ಸಮಿತಿಯು ಸ್ಥಳಾಂತರಿಸಲು ಮತ್ತು ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಸವಿವರ ಅಂದಾಜು ಪಟ್ಟಿಗಳನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಡಿಸಿ ಅವರು ಸಭೆಗೆ ವಿವರಿಸಿದರು.

ವಸತಿ ಅಕ್ರಮ ತಡೆಗೆ ವಸತಿ ವ್ಹೀಜಲ್ ಆ್ಯಪ್:

     ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿಶೇಷ ಅಭಿಯಾನದ ಮೂಲಕ ಸಮೀಕ್ಷೆ ನಡೆಸಲು ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತರಬೇತಿ ನೀಡಲಾಗುವುದು ಮತ್ತು 10 ದಿನದೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಕುಲ್ ಅವರು ತಿಳಿಸಿದರು.

    ವಸತಿ ಯೋಜನೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೈಜಫಲಾನುಭವಿಗಳಿಗೆ ವಸತಿಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಸಮೀಕ್ಷಾ ಆ್ಯಪ್ ಸಹಕಾರಿಯಾಗಲಿದೆ ಎಂದರು.ಬೇರೆ ಮನೆಯ ಫೋಟೊ ತೊರಿಸಿ ಹಣ ತೆಗೆಯುವುದು, ಯಾರದ್ದೋ ಮನೆ ಇನ್ಯಾರಿಗೋ ಹಣ ಹೋಗುವುದು ಇದರಿಂದ ತಡೆಬಿಳಲಿದೆ ಎಂದು ಹೇಳಿದ ಅವರು ಗ್ರಾಮಲೆಕ್ಕಿಗರ ಮೂಲಕ ಸಮೀಕ್ಷೆ ನಡೆಸಿ ದಾಖಲಿಸಬೇಕು ಎಂದರು.
ಪಿಡಿಒ,ಬಿಲ್ ಕಲೆಕ್ಟರ್ ಮತ್ತು ವಿಎಗಳ ವಿವರ ಈ ಆ್ಯಪ್‍ನಲ್ಲಿ ದಾಖಲಿಸಬೇಕು. ವಸತಿಗೆ ಸಂಬಂಧಿಸಿದ ಫೋಟೊ ತೆಗೆದು ಮಾಹಿತಿ ದಾಖಲಿಸಿದರೇ ಇಒ,ಜಿಪಂ ಸಿಇಒ, ತಹಸೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಲಾಗಿನ್‍ಗೆ ಬರುತ್ತದೆ. ಒಕೆ ಆದರೇ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ ಎಂದರು.

37 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ:

    ಸ್ವಚ್ಛ ಭಾರತ ಮಿಶನ್ ಯೋಜನೆ ಅಡಿ 37 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮ ಸಂಸ್ಕರಣೆಗೆ ಕ್ರಮವಹಿಸಲಾಗಿದೆ. ಮೊದಲ ಹಂತದಲ್ಲಿ 22 ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಎರಡನೇ ಹಂತದಲ್ಲಿ 15 ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಜಿಪಂ ಸಿಇಒ ಕೆ.ನಿತೀಶ್ ಅವರು ಸಭೆಗೆ ವಿವರಿಸಿದರು.

    ಕಸದ ತೊಟ್ಟಿ, ವಾಹನಗಳು,ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇನ್ನೂ 15 ದಿನಗಳಲ್ಲಿ ಮೊದಲ ಹಂತದ ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಕಾರ್ಯ ಆರಂಭವಾಗಲಿದೆ. ಈಗಾಗಲೇ ಈ ಕುರಿತು ಗ್ರಾಪಂಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.ನರೇಗಾದಡಿ ತೋಟಗಾರಿಕೆ ಇಲಾಖೆಯ ಪ್ರದೇಶದ ವಿಸ್ತರಣೆಗೆ ಒತ್ತು ನೀಡಲಾಗಿದೆ ಎಂದು ಅವರು ವಿವರಿಸಿದರು.

ಸಂಡೂರಿನ 23 ಗ್ರಾಪಂಗಳಲ್ಲಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ:

    ಜಿಲ್ಲಾ ಖನಿಜ ಅಭಿವೃದ್ಧಿ ನಿಧಿ ಅಡಿ ಸಂಡೂರು ತಾಲೂಕಿನ 23 ಗ್ರಾಪಂಗಳ ವ್ಯಾಪ್ತಿಯ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ಡಿಸಿ ನಕುಲ್ ಅವರು ಸಭೆಗೆ ವಿವರಿಸಿದರು.ಕಂಪ್ಯೂಟರ್ ತರಬೇತಿ, ಎಲೆಕ್ಟ್ರೀಕಲ್, ಡಾಟಾ ಎಂಟ್ರಿ, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಕಾರ್ ಅವರ ಗಮನಕ್ಕೆ ತಂದರು.ಡಿಎಂಎಫ್ ಅಡಿ ಇದುವರೆಗೆ 1037 ಕೋಟಿ ರೂ. ಸಂಗ್ರಹವಾಗಿದೆ. ಈಗಾಗಲೇ ಕ್ರಿಯಾಯೋಜನೆಗಳಿಗೂ ಅನುಮೋದನೆ ದೊರಕಿದೆ ಎಂದರು.

    ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ವಿವಿಧ ವಿಷಯಗಳ ಕುರಿತ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಡೆದುಕೊಂಡರು ಮತ್ತು ಅಗತ್ಯ ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.ಸಭೆಯಲ್ಲಿ ಜಿಪಂ ಸಿಇಒ ಕೆ.ನಿತೀಶ್, ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್, ರಮೇಶ ಕೋನರೆಡ್ಡಿ, ಪ್ರಸನ್ನಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ ಸೇರಿದಂತೆ ತಹಸೀಲ್ದಾರರು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

 

Recent Articles

spot_img

Related Stories

Share via
Copy link
Powered by Social Snap