ಬೆಂಗಳೂರು:
ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಪ್ರಖ್ಯಾತರಾಗಿದ್ದ ಡಿ ಕೆ ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದ ಪ್ರಕರಣವನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿ ಆದೇಶ ನೀಡಿದೆ.
ಐಟಿ ಇಲಾಖೆ ತಮ್ಮ ವಿರುದ್ಧ ದಾಖಲಿಸಿದ್ದ 4ನೇ ಪ್ರಕರಣದಿಂದ ಕೈ ಬಿಡುವಂತೆ ಡಿಕೆ ಶಿವಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.ಆ ಅರ್ಜಿವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ವಜಾ ಮಾಡಿ ಆದೇಶಿಸಿದೆ. ಡಿಕೆಶಿ ಆಪ್ತರಾದ ಸುನೀಲ್ ಶರ್ಮಾ, ಸಚಿನ್ ನಾರಾಯಣ್, ರಾಜೇಂದ್ರ, ಆಂಜನೇಯ ಅವರನ್ನು ಆರೋಪಿಯನ್ನಾಗಿ ಪ್ರಕರಣದಲ್ಲಿ ಹೆಆರಿಸಲಾಗಿದೆ.
ಈ ಹಿಂದೆ ಪ್ರಕರಣ ಕೈಬಿಡುವಂತೆ ಕೋರಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಡಿಕೆಶಿಗೆ ಅಲ್ಲಿ ಸಹ ನಿರಾಶೆಯಾಗಿತ್ತು. ಕೆಳ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ ಬಳಿಕ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನಿಡಿತ್ತು. ಆದರೆ ಮಂಗಳವಾರ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಡಿಕೆಶಿ ಹಾಗೂ ಬೆಂಬಲಿಗರಿಗೆ ಹಿನ್ನಡೆಯಾಗಿದೆ.
ದೆಹಲಿ ನಿವಾಸದಲ್ಲಿ ಪತ್ತೆಯಾಗಿದ್ದ 8.5 ಕೋಟಿ ರೂ. ಹಣದ ಕುರಿತು ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲಾ ಹಣದ ಉಲ್ಲೇಖ ಮಾಡಲಾಗಿತ್ತು.
