ಬೆಂಗಳೂರು:
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ಬೀಳಿಸುವ ಬಿಜೆಪಿ ಪ್ರಯತ್ನ ಯಶಸ್ವಿ ಆಗುವುದಿಲ್ಲ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.
ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಉರುಳಿಸಲು Operation Nath ಯೋಜನೆ ಸಿದ್ದವಾಗುತ್ತಿದೆ ಎಂಬ ಏಕನಾಥ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಏಕನಾಥ್ ಶಿಂಧೆ ಭ್ರಮೆಯಲ್ಲಿದ್ದಾರೆ. ಯಾವ ಕಾರಣಕ್ಕೂ ಅಪರೇಷನ್ ಕಮಲ ಮಾಡಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ ಎಂದು ಹೇಳಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ. ಅವರು ಚುನಾವಣೆಯಲ್ಲಿ ಸೋಲುತ್ತಾರೆ. ಅದಕ್ಕೆ ಅವರು ಹತಾಶತಾಗಿ ಸರ್ಕಾರ ಬೀಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಹೇಳಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಮಹಾರಾಷ್ಟ್ರ ಸರ್ಕಾರ ಉಳಿಯೋದೆ ಡೌಟು ಇದೆ. ಅಲ್ಲಿ ಶಾಸಕರು ಯುಟರ್ನ್ ಹೊಡೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅಲ್ಲಿ ನಮ್ಮ ಪಕ್ಷದ ಸರ್ಕಾರ ಬರಲಿದೆ. ಅಲ್ಲಿ ಮೈತ್ರಿ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದರು.
ಎನ್ ಸಿಪಿ, ಶಿವಸೇನೆಯ ಶಾಸಕರು ವಾಪಸ್ ಆಗ್ತಾ ಇದ್ದಾರೆ. ಅದಕ್ಕೆ ಅಲ್ಲಿ ಸರ್ಕಾರ ಬದಲಾವಣೆ ಆಗಲಿದೆ. ನಮ್ಮ ಸರ್ಕಾರದಲ್ಲಿ ಯಾವುದೇ ಸಿಂಧೆ ಇಲ್ಲ. ಅವರಲ್ಲೇ ಸಿಂಧೆ ಇದ್ದಾರೆ ಎಂದರು.