JNU ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಮೇಲೆ ಎಫ್ ಐ ಆರ್..!

ನವದೆಹಲಿ:

   ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿನ ಸರ್ವರ್ ಕೋಣೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಶೆ ಘೋಷ್ ಮತ್ತು ಇತರ 19 ಮಂದಿ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

   ಜೆಎನ್ ಯು ಆಡಳಿತ ಮಂಡಳಿಯ ಅಧಿಕಾರಿಗಳು ಐಶೆ ಘೋಷ್ ಮತ್ತು ಆಕೆಯ 19 ಮಂದಿ ಸ್ನೇಹಿತೆಯರ ವಿರುದ್ಧ ಕೇಸ್ ದಾಖಲಿಸಿದ್ದು ವಿಶ್ವವಿದ್ಯಾನಿಲಯದ ಆಸ್ತಿ ಧ್ವಂಸ ಮಾಡಿದ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

   ಕಳೆದ ವರ್ಷ ಹಾಸ್ಟೆಲ್ ಶುಲ್ಕ ಸೇರಿದಂತೆ ವಿವಿಧ ಸೇವೆಗಳ ಶುಲ್ಕ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದ ಆರೋಪ ಎದುರಿಸುತ್ತಿದ್ದಾರೆ.ಎಫ್ಐಆರ್ ನಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಇನ್ನು ಸಿಕ್ಕಿಲ್ಲ. ಭಾನುವಾರ ರಾತ್ರಿ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ನಡೆದು ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿ ಕ್ಯಾಂಪಸ್ ನಲ್ಲಿದ್ದ ವಸ್ತುಗಳನ್ನು ಹಾನಿ ಮಾಡಿದ್ದರು. ವಿಶ್ವವಿದ್ಯಾಲಯದ ಆಡಳಿತ ವರ್ಗ ಪೊಲೀಸರಿಗೆ ಕರೆ ಮಾಡಿ ನಂತರ ಘಟನೆ ಖಂಡಿಸಿ ಮೆರವಣಿಗೆ ಸಾಗಿದ್ದರು.

    ಈ ಘಟನೆಯಲ್ಲಿ ಗಾಯಗೊಂಡ ಸುಮಾರು 35 ವಿದ್ಯಾರ್ಥಿಗಳು ದೆಹಲಿಯ ಏಮ್ಸ್ ಮತ್ತು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಾದರು. ಸ್ವತಃ ಐಶೆ ಘೋಷ್ ಗೆ ತಲೆಗೆ ಪೆಟ್ಟಾಗಿ ರಕ್ತ ಸುರಿಯಿತು. ಈ ಘಟನೆ ಹಿಂದೆ ಆರ್ ಎಸ್ ಎಸ್ ಪ್ರೇರಿತ ಎಬಿವಿಪಿ ಕಾರ್ಯಕರ್ತರಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ