ಬೆಂಗಳೂರು
ನರೇಗಾ ಯೋಜನೆ ಜಾರಿ ಹಾಗೂ ಇತರ ವಿಚಾರಗಳ ಕುರಿತು ನಾನು ಏನೆಲ್ಲಾ ಅಪವಾದ ಮಾಡಿದ್ದೇನೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಈಶ್ವರಪ್ಪನವರು ಯಾವ ಸಮಯ ನಿಗದಿ ಮಾಡುತ್ತಾರೋ ಆಗ ನಾನು ಎಲ್ಲ ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕೋವಿಡ್ ಕುರಿತ ಕಾಂಗ್ರೆಸ್ ಟಾಸ್ಕ್ ಫೆÇೀರ್ಸ್ ಸಭೆಗೂ ಮುನ್ನ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಸಾಂಕೇತಿಕವಾಗಿ ಸುರಕ್ಷತಾ ಕಿಟ್ ವಿತರಣೆ ಮಾಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಅವರು, ಈಶ್ವರಪ್ಪನಿಗೆ ಶಕ್ತಿ ಇದ್ದರೆ, ಮಾಹಿತಿ ಇದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಹೇಳಲಿ.
ನಾನು ಈ ಹಿಂದೆ ಅವರು ಮಲಗಿದ್ದಾರೆ ಎಂದು ಹೇಳಿದ್ದರ ಅರ್ಥವನ್ನು ಗ್ರಹಿಸಲು ಅವರಿಗೆ ಸಾಧ್ಯವಾಗಿಲ್ಲ. ಈಶ್ವರಪ್ಪನವರೇ ನರೇಗಾ ವಿಚಾರದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆದೇಶಿಸಿದ್ದಾರೆ. ನರೇಗಾ ಯೋಜನೆಗೆ ಎಷ್ಟು ಶಕ್ತಿ ಇದೆ ಅಂತಾ ಈಶ್ವರಪ್ಪನವರಿಗೆ ಗೊತ್ತಿಲ್ಲ. ಈ ಯೋಜನೆಯನ್ನು ದೇಶದಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕನಕಪುರದಲ್ಲಿ ಬಳಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ನನಗೆ ಪ್ರಶಸ್ತಿ ನೀಡಿದೆ. ಈ ಬಗ್ಗೆ ಈಶ್ವರಪ್ಪನವರಿಗೆ ಗೊತ್ತಿಲ್ಲ ಎಂದು ಛೇಡಿಸಿದರು.
ಯುಪಿಎ ಸರ್ಕಾರ ನರೇಗಾ ಮೂಲಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಒಂದು ಕುಟುಂಬ ಹೇಗೆ ಬಳಸಿಕೊಳ್ಳಬಹುದು? ವೈಯಕ್ತಿಕವಾಗಿ ಈ ಯೋಜನೆ ಕುಟುಂಬಗಳಿಗೆ ಹೇಗೆ ಆಸರೆಯಾಗುತ್ತದೆ ಎಂದು ನಾನು ಹಿಂದೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ. ಈಶ್ವರಪ್ಪನವರು ಈ ವಿಚಾರವಾಗಿ ಯಾವ ಮಾಧ್ಯಮದಲ್ಲಾದರೂ ಬಹಿರಂಗ ಚರ್ಚೆಗೆ ಬರಲಿ. ಎಲ್ಲ ಮಾಧ್ಯಮಗಳಲ್ಲೂ ಚರ್ಚೆ ಆಗಲಿ. ನಾನು ಅದನ್ನು ಎದುರಿಸಲು ಸಿದ್ಧ. ಅವರಿಗೆ ಯಾವ ಮಾಹಿತಿ ಬೇಕೋ ಕೊಡುತ್ತೇನೆ. ವಿರೋಧ ಪಕ್ಷದ ಅಧ್ಯಕ್ಷನಾಗಿ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ನಾನು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ.
ನನಗೆ ರಾಜಕಾರಣ ಹೇಗೆ ಮಾಡಬೇಕು ಅಂತಾನೂ ಗೊತ್ತಿದೆ. ಇದು ದೇಶ ಹಾಗೂ ಮಾನವೀಯತೆಯ ವಿಚಾರ. ಒಂದು ಪಕ್ಷದ ಅಧ್ಯಕ್ಷನಾಗಿ ನರೇಗಾ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದೇನೆ. ನನ್ನ ಘನತೆ ಕಡಿಮೆಯಾದರೂ ಪರ್ವಾಗಿಲ್ಲ. ನಾನು ಈಶ್ವರಪ್ಪನಿಗೆ ಉತ್ತರ ಕೊಡಲು ಸಿದ್ಧನಿದ್ದೇನೆ. ಸುಮ್ಮನೆ ಮಾತನಾಡಿ ಓಡಿ ಹೋಗುವ ವ್ಯಕ್ತಿ ನಾನಲ್ಲ. ನೀವು ಸಮಯ ನಿಗದಿ ಮಾಡಿ, ನಾನು ಬಂದು ಉತ್ತರ ನೀಡುತ್ತೇನೆ. ನನಗೆ ಈ ವಿಚಾರದಲ್ಲಿನ ಮಾಹಿತಿಗಳು ಬೆರಳ ತುದಿಯಲ್ಲಿವೆ ಎಂದು ಅವರು ತಿಳಿಸಿದರು.
ಹೈಕಮಾಂಡ್ ಮನವಿಗೆ ನಾವು ಬದ್ಧ :
ನಮ್ಮ ಪಕ್ಷದ ಹೈಕಮಾಂಡ್ ನೀಡಿರುವ ಹೇಳಿಕೆಗೆ ನಾವು ಬದ್ಧವಾಗಿದ್ದೇವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕಿದೆ. ರಾಷ್ಟ್ರಮಟ್ಟದಲ್ಲಿ ನಮ್ಮ ನಾಯಕರು ಪ್ರಧಾನ ಮಂತ್ರಿಗಳಿಗೆ ಮಾಡಿರುವ ಮನವಿಗೆ ನಮ್ಮ ರಾಜ್ಯ ಘಟಕ ಕೂಡ ಬದ್ಧವಾಗಿದೆ ಎಂದರು.
ಸುರಕ್ಷತಾ ಕಿಟ್ ವಿತರಣೆ :
ವೈದ್ಯರು ಹೊರತಾಗಿ ಆಶಾ ಕ್ರಾಯಕರ್ತರು, ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿ ಯಾರಿಗೆ ಸುರಕ್ಷಾ ಕಿಟ್ ಸಿಕ್ಕಿಲ್ಲವೋ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸುರಕ್ಷಾ ಕಿಟ್ ನೀಡಲು ನಿರ್ಧರಿಸಲಾಗಿದೆ. ಸುರಕ್ಷತಾ ಸಾಮಗ್ರಿ ನೀಡುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ.ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜಾಗ್ರತೆಯಿಂದ ಇರಬೇಕಾಗಿದೆ. ಸ್ವಲ್ಪ ಕಡಿಮೆ ಆಯ್ತು ಅಂತಾ ಲಾಕ್ ಡೌನ್ ಸಡಿಲ ಮಾಡಿದ್ದಾರೆ ಎಂದು ನಾವು ಯಾಮಾರುವುದು ಬೇಡ. ಸೋಂಕು ಹೆಚ್ಚಾಗುವ ವಾತಾವರಣವಿದೆ. ಹೆಚ್ಚು ಪರೀಕ್ಷೆ ನಡೆದಂತೆ ಸೋಂಕು ಪ್ರಕರಣ ಪತ್ತೆಯಾಗಲಿದೆ ಎಂಬ ಮಾಹಿತಿ ಇದೆ. ಆ ದೃಷ್ಟಿಯಿಂದ ನಾವು ನಮ್ಮ ಅಂತರ ಕಾಯ್ದು ಕೊಳ್ಳುವುದು ಸೂಕ್ತ ಎಂದು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
