ಖಾಸಗಿ ಶಾಲೆಗಳ ಅಂದ-ಚೆಂದಕ್ಕೆ ಮರುಳಾಗದಿರಿ

ದಾವಣಗೆರೆ :

   ಖಾಸಗಿ ಶಾಲೆಗಳ ಅಂದ, ಚೆಂದಕ್ಕೆ ಮರುಳಾಗದೇ, ಪೋಷಕರು ಮಕ್ಕಳನ್ನು ಚೆಂದವಿಲ್ಲದಿದ್ದರೂ ನುರಿತ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಿವಿಮಾತು ಹೇಳಿದ್ದಾರೆ.ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಹಾಯವಾಣಿ ಸಲಹಾ ಸಮಿತಿ (ಸಿಎಬಿ) ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ರೈಮಾಸಿಕ, ಜಿಲ್ಲಾ ತನಿಖಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮಕ್ಕಳ ಪೋಷಕರು ಖಾಸಗಿ ಶಾಲೆಯ ಅಂದಕ್ಕೆ ಮರುಳಾಗಿ, ನಿಯಮಾನುಸಾರ ಅರ್ಹತೆ ಇಲ್ಲದ ಶಿಕ್ಷಕರು ಬೋಧಿಸುವಂತಹ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಾರೆ. ಆದರೆ, ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಸಂಪನ್ಮೂಲ ಶಿಕ್ಷಕರಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಮುಂದಾಗದಿರುವುದು ನಿಜಕ್ಕೂ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

    ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಪಾದನೆ ಇದ್ದು, ಶಿಕ್ಷಕರು ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ಶಾಲೆಗಳಲ್ಲಿ ಶುಚಿತ್ವ ಕಾಪಾಡಬೇಕಾದ ಅವಶ್ಯಕತೆ ಇದೆ ಎಂದರು.

   ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಖಾಸಗಿ ಶಾಲೆಗಳೂ ನಿಯಮಾನುಸಾರ ನಡೆಯುತ್ತಿಲ್ಲ. ಆದರೆ, ಅವುಗಳ ಅಂದ ಚೆಂದಕ್ಕೆ ಮಾತ್ರ ಹೆಚ್ಚಿನ ಗಮನ ಹರಿಸುತ್ತಿವೆ. ಸರ್ಕಾರಿ ಶಾಲೆಯಲ್ಲಿ ಅಂದ ಚೆಂದ ಹೆಚ್ಚಿಲ್ಲದಿದ್ದರೂ ಗುಣಮಟ್ಟದ ಶಿಕ್ಷರಿದ್ದು, ಎಲ್ಲರೂ ಸರ್ಕಾರಿ ಶಾಲೆಗಳ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

  ಮಹಿಳಾ ಸಹಾಯವಾಣಿಯ ಸಂಯೋಜನಾಧಿಕಾರಿ ಮಾತನಾಡಿ, ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹಗಳ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಬಾಲ್ಯವಿವಾಹವನ್ನು ತಡೆಯಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಗ್ರಾಮೀಣ ಮಟ್ಟದಲ್ಲಿ ಮಕ್ಕಳ ದೌರ್ಜನ್ಯ ಮತ್ತು ಬಾಲ್ಯವಿವಾಹವನ್ನು ತಡೆಯಲು ಅಗತ್ಯ ನೆರವನ್ನು ಪೊಲೀಸ್ ಇಲಾಖೆಯು ನೀಡಬೇಕಾಗಿದೆ ಎಂದರು.

   ಈ ವೇಳೆ ಪ್ರತಿಕ್ರಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್, ಎಲ್ಲಾ ಕಡೆಗಳಲ್ಲೂ ಪೋಸ್ಟರ್‍ಗಳ ಮೂಲಕ ಬಾಲ್ಯವಿವಾಹ ನಿಷೇಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ವೃದ್ದಾಶ್ರಮ ಮತ್ತು ನಿರ್ಗತಿಕರ ಕೇಂದ್ರಗಳು ವ್ಯಾವಹಾರಿಕೆ ದೃಷ್ಠಿಯನ್ನು ಹೊಂದಿದ್ದು, ಎಲ್ಲಾ ಕಡೆ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.

   ನಿರ್ಗತಿಕರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನು ಕೆಲವು ನಿರಾಶ್ರಿತರ ಕೇಂದ್ರಗಳು ನೀಡುತ್ತಿಲ್ಲ. ಕೇವಲ ಫಂಡ್‍ಗಳನ್ನು ಪಡೆಯಲು ಸಿಬ್ಬಂದಿ ಮತ್ತು ನಿರಾಶ್ರಿತರ ಸಂಖ್ಯೆಯನ್ನು ತೋರಿಸುತ್ತಿವೆ. ಜೆ.ಜೆ ಕಾಯ್ದೆಯಡಿಯಲ್ಲಿ ನೊಂದಣಿಯಾಗದ ಶ್ರೀಶೈಲ ಮಠಕ್ಕೆ ಈಗಾಗಲೇ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.

   ಇದಕ್ಕೆ ಪ್ರತಿಕ್ರಯಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ, ನಿರಾಶ್ರಿತರ ಕೇಂದ್ರದ ಮಕ್ಕಳನ್ನು ಸಿಸಿಐನಲ್ಲಿ ಹಾಜರು ಪಡಿಸಬೇಕು. ಸಿಸಿಐನಲ್ಲಿ ಹಾಜರು ಪಡಿಸದ ಮಕ್ಕಳನ್ನು ಯಾವುದೇ ನಿರಾಶ್ರಿತರ ಕೇಂದ್ರ ಅಥವಾ ಸಂಸ್ಥೆಯು ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಿದರು.

   ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿ, ಕಬ್ಬಿನ ಕಟ್ಟಾವು, ಚೆಂಡು ಹೂವಿನ ಕಾರ್ಖಾನೆ ಮತ್ತು ಸೀಡ್ ಕ್ರಾಸಿಂಗ್ ಕಾರ್ಖಾನೆಗಳಲ್ಲಿ ಮಕ್ಕಳು ಹೆಚ್ಚಾಗಿ ದುಡಿಯಲು ಹೋಗುತ್ತಿದ್ದು ಇದರಿಂದಾಗಿ ಶಾಲೆಯಿಂದ ಮಕ್ಕಳು ದೂರ ಉಳಿಯುತ್ತಿದ್ದಾರೆ. ಇದಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

   ಸಭೆಯಲ್ಲಿ ಜಿ ಪಂ ಸಿಇಓ ಪದ್ಮಾ ಬಸವಂತಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್ ಬಡಿಗೇರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಪೊಲೀಸ್ ಇನ್ಸ್‍ಪೆಕ್ಟರ್ ನಾಗಮ್ಮ, ಮಹಿಳಾ ರಕ್ಷಣಾ ಘಟಕದ ಸಿಬ್ಬಂದಿ ಶೃತಿ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap