ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು

ಹೊನ್ನಾಳಿ:

      ಯುವಜನತೆ ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು.

        ಇಲ್ಲಿನ ಹಿರೇಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಯುವಜನತೆಯ ಸಾಧನೆಗೆ ಪೋಷಕರು ಬೆನ್ನೆಲುಬಾಗಿ ನಿಲ್ಲಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಮಾರ್ಗದರ್ಶನ ನೀಡುತ್ತಾ ಸಾಧನೆ ಮಾಡಲು ನೆರವಾಗಬೇಕು ಎಂದು ಕಿವಿ ಮಾತು ಹೇಳಿದರು.

       ಇಂದಿನ ವೈಜ್ಞಾನಿಕ ಯುಗದಲ್ಲಿ ನಾವು ಏನೆಲ್ಲಾ ಸಾಧನೆ ಮಾಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಹಿಂಸೆ ವೈಭವೀಕರಣಗೊಳ್ಳುತ್ತಿದೆ. ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಹಾಗಾಗಿ, ನಾವೆಲ್ಲರೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜದ ದನಿ ಇಲ್ಲದವರು, ದೀನ-ದುರ್ಬಲರಿಗೆ ನೆರವಾಗುವ ಸಂಕಲ್ಪ ಮಾಡೋಣ ಎಂದು ವಿವರಿಸಿದರು.

        ಎಚ್. ಕಡದಕಟ್ಟೆಯ ಸಾಯಿ ಗುರುಕುಲ ವಸತಿಯುತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ. ಮರಿಗೌಡ ಮಾತನಾಡಿ, ದುಷ್ಟ ಶಿಕ್ಷಕಿ, ಶಿಷ್ಟರ ರಕ್ಷಕಿ ದೇವಿಯನ್ನು ಆರಾಧಿಸುವ ಈ ಶುಭ ಸಂದರ್ಭದಲ್ಲಿ ಸಮಾಜದಲ್ಲಿನ ಎಲ್ಲರೂ ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸನ್ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.

        ದಾವಣಗೆರೆ ಪೊಲೀಸ್ ಅಧೀಕ್ಷಕ ಮಂಜುನಾಥ್ ಗಂಗಲ್, ಹೊನ್ನಾಳಿ ಪಿಎಸ್‍ಐ ಎನ್.ಸಿ. ಕಾಡದೇವರ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಇ. ರಾಜೀವ್, ನಿವೃತ್ತ ಪ್ರಾಂಶುಪಾಲ ಡಾ.ಎಂ. ಶಿವಶಂಕರಯ್ಯ, ಎಚ್.ಎಂ. ಆನಂದಯ್ಯ ಇತರರು ಮಾತನಾಡಿದರು.

        ಕವಲೇದುರ್ಗ ಸಂಸ್ಥಾನಮಠದ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಂದಿ ಮಹೇಶ್ವರಪ್ಪ, ಶಿವಯೋಗಿಸ್ವಾಮಿ, ಕೋರಿ ದೀಪುಕುಮಾರ್ ಮತ್ತಿತರರಿಗೆ ಗುರು ರಕ್ಷೆ ನೀಡಲಾಯಿತು. ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

        ಎಚ್. ಕಡದಕಟ್ಟೆಯ ಸಾಯಿ ಗುರುಕುಲ ವಸತಿಯುತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕತಿಕ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link