ಅಂಗನವಾಡಿ ಮಕ್ಕಳ ವೈದ್ಯಕೀಯ ತಪಾಸಣೆ ಮಾಡಿ

ಚಿತ್ರದುರ್ಗ:

    ಚಿತ್ರದುರ್ಗ ತಾಲ್ಲೂಕಿನಲ್ಲಿರುವ 530 ಅಂಗನವಾಡಿ ಕೇಂದ್ರದ 31816 ಮಕ್ಕಳ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ನಡೆಸುವಂತೆ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸೂಚಿಸಿದರು.

    ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಕ್ರಿಯಾ ಯೋಜನಾ ತಾಲ್ಲೂಕು ಸಮಿತಿ ಸಭೆಯಲ್ಲಿ ವೈದ್ಯರು, ಆರೋಗ್ಯ ಸಹಾಯಕರ ಜೊತೆ ಚರ್ಚಿಸಿದ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹುಟ್ಟಿದ ಮಗುವಿನಿಂದ ಹಿಡಿದು ಅಂಗನವಾಡಿ ಕೇಂದ್ರಗಳಲ್ಲಿನ ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಹೇಳಿದರು

    ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ. ಜವಾಬ್ದಾರಿಯಿಂದ ಯಾರು ನುಣುಚಿಕೊಳ್ಳುವಂತಿಲ್ಲ. ಕೆಲವೆಡೆ ಕೊರೋನಾ ಸೋಂಕಿತರಿಗಾಗಿ ಕ್ವಾರೆಂಟೈನ್ ತೆರೆಯುವ ಸಂದರ್ಭದಲ್ಲಿ ಸುತ್ತಮುತ್ತಲಿನ ಜನ ಗಲಾಟೆ ಮಾಡಿದ್ದಾರೆ. ಅಂತಹ ಸಂದರ್ಭಗಳಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಸೋಂಕಿತರನ್ನು ಕ್ವಾರೆಂಟೈನ್‍ಗಳಲ್ಲಿಡ ಬೇಕಾದ ಪರಿಸ್ಥಿತಿ ಎದುರಾದಾಗ ಎಲ್ಲಾ ಸಿದ್ದತೆಗಳು ನಮ್ಮಲ್ಲಿರಬೇಕು. ಹಾಗಾಗಿ ಅಂಗನವಾಡಿಗಳನ್ನು ಶುಚಿಯಾಗಿಟ್ಟುಕೊಳ್ಳಿ ಎಂದು ಸೂಚಿಸಿದರು

     ಎಲ್ಲೆಲ್ಲಿ ಶೌಚಾಲಯಗಳಿಲ್ಲವೋ ಅಂತಹವುಗಳನ್ನು ನಮ್ಮ ಗಮನಕ್ಕೆ ತಂದರೆ ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರಿಗೆ ತಿಳಿಸುತ್ತೇನೆ. ಅದಕ್ಕಾಗಿ ನಿಮ್ಮಗಳ ಸಹಕಾರ ಬೇಕು ಎಂದು ಕೋರಿದರು.ಗುರುವಾರದಿಂದ ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್‍ಗಳ ವಿತರಣೆಯಾಗಬೇಕು. ತಾಲ್ಲೂಕಿನಲ್ಲಿರುವ 25 ಪರೀಕ್ಷಾ ಕೇಂದ್ರಗಳಲ್ಲಿಯೂ ಮಕ್ಕಳ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸ್ ಆಗಬೇಕು. ಅದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಶಿಕ್ಷಣ ಸಂಯೋಜಕ ವೇಣುಗೋಪಾಲ್‍ಗೆ ತಿಳಿಸಿದರು.

     ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕ್ರಿಯಾ ಯೋಜನೆ ಕುರಿತು ವಿವರಿಸಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ವೈದ್ಯಾಧಿಕಾರಿ, ಶುಶ್ರೂಷಕರು, ನೇತ್ರ ಸಹಾಯಕರನ್ನೊಳಗೊಂಡ ಎರಡು ವೈದ್ಯಕೀಯ ತಂಡ ತಾಲ್ಲೂಕಿನಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳ, ಸಮಾಜ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ, ವೈದ್ಯರುಗಳಾದ ವಾಣಿ, ಮಂಜುಳ, ಸುಪ್ರಿತ, ಮಹೇಂದ್ರ, ಹಿರಿಯ ಆರೋಗ್ಯ ಸಹಾಯಕಿ ಪರ್ವಿನ್, ಆಶಾ ಬೋಧಕಿ ಶಭಾನ, ಹಿರಿಯ ಆರೋಗ್ಯ ಸಹಾಯಕ ಮಾರುತಿ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link