ಚಿತ್ರದುರ್ಗ:
ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣ ಸೇರಿದಂತೆ ಅನೇಕ ಶರಣರು ಮಹಿಳೆಯರನ್ನು ಲೌಖಿಕ ಮತ್ತು ಅಲೌಖಿಕ ಸಂಕಷ್ಟದಿಂದ ಹೊರತರಲು ಕ್ರಾಂತಿಕಾರಿ ಹೋರಾಟ ನಡೆಸಿದರು. 21 ನೇ ಶತಮಾನದಲ್ಲಿ ಇಂದಿಗೂ ಮಹಿಳೆ ಪುರುಷ ಪ್ರಧಾನ ಸಮಾಜದಿಂದ ಹೊರಬರಲು ಆಗುತ್ತಿಲ್ಲ ಏಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಲೇಖಕ, ಚಿಂತಕ ಹೊಳಲ್ಕೆರೆಯ ಚಂದ್ರಶೇಖರ ತಾಳ್ಯ ವಿಷಾಧಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಹಾಗೂ ಸೇಂಟ್ ಮೇರಿಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಸೇಂಟ್ ಮೇರಿಶ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹೆಜ್ಜೆ ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಾಕಷ್ಟು ಶಿಕ್ಷಣವಂತರಾಗುತ್ತಿದ್ದಾರೆ. ಆದರೂ ಇಂತಹ ಸಮಾರಂಭಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ. ಕೀಳರಿಮೆ, ಹಿಂಜರಿಕೆ ಏಕೆ ಎನ್ನುವುದು ಗೊತ್ತಾಗುತ್ತಿಲ್ಲ. ಮಹಿಳೆಯರು ಅಪಾರವಾದ ಸಂಕಟ ಅನುಭವಿಸುತ್ತಿದ್ದಾರೆ. ಮನಸ್ಸಿನ ಅಭಿವ್ಯಕ್ತಿ ಚಿಂತನೆಯನ್ನು ಬರವಣಿಗೆ ಮೂಲಕ ಹೊರಹಾಕಬೇಕಾಗಿದೆ.
ಮಾತೃ ಸಂಸ್ಕತಿಯಿಂದ ಪಿತೃ ಸಂಸ್ಕತಿಗೆ ಹೆಣ್ಣು ಜಿಗಿದಾಗಿನಿಂದ ಲೌಖಿಕ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಇನ್ನು ಮುಂದೆ ಪತಿಯೂ ಕೂಡ ಕಾನೂನು ಸಮ್ಮತಿ ಪಡೆದುಕೊಂಡು ಪತ್ನಿಯನ್ನು ಮುಟ್ಟುವ ಕಾಲ ಬಂದರೂ ಬರಬಹುದು ಆಶ್ಚರ್ಯವಿಲ್ಲ ಎಂದು ಎಸ್.ಎಲ್.ಬೈರಪ್ಪ ಹಾಸ್ಯ ಚಟಾಕಿ ಹಾರಿಸುವುದನ್ನು ನಿಜವಾಗಿಯೂ ಬುದ್ದಿವಂತರು, ಪ್ರಜ್ಞಾವಂತರು ಸ್ತ್ರೀಯರು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಹಾಸ್ಯವಲ್ಲ.
ನೋವಿನ ಸಂಗತಿ. ಬೈರಪ್ಪ 21 ನೇ ಶತಮಾನದ ಮನುಧರ್ಮಶಾಸ್ತ್ರದ ಆಧುನಿಕ ವಕ್ತಾರ ಎಂದು ಕುಟುಕಿದರು.
ಇಂದಿಗೂ ಬಹಳ ಮಹಿಳೆಯರಿಗೆ ಲೌಖಿಕ ಬಂಧನದಲ್ಲಿದ್ದೇವೆ ಎನ್ನುವುದು ಗೊತ್ತಿಲ್ಲ. ಹೆಣ್ಣು-ಗಂಡು ಎನ್ನುವ ತಾರತಮ್ಯಕ್ಕಿಂತ ಇಬ್ಬರು ಒಂದಾಗಿ ಬದುಕುವ ಸ್ಥಿತಿ ತಂದುಕೊಳ್ಳಬೇಕು.
ಹೋಬಳಿ ಮಟ್ಟದಲ್ಲಿ ಹೆಚ್ಚು ಲೇಖಕಿಯರು ಬೆಳೆಯಬೇಕು. ಪ್ರಶಿಕ್ಷಣಾರ್ಥಿಗಳು ಓದುವುದರ ಕಡೆಗೆ ಹೆಚ್ಚಿನ ಗಮನ ಕೊಡಿ ಎಂದು ಬಿ.ಇ.ಡಿ.ವಿದ್ಯಾರ್ಥಿಗಳಿಗೆ ಕರೆ ನೀಡಿದ ಚಂದ್ರಶೇಖರ ತಾಳ್ಯ ಲೇಖಕಿಯರು ಬರೆಯುವುದಕ್ಕಿಂತ ವಿಚಾರವನ್ನು ಗ್ರಹಿಸುವುದು ಮುಖ್ಯ. ಮಹಿಳೆಯರು ಪುರುಷರನ್ನು ದ್ವೇಷಿಸಬಾರದು. ಪುರುಷರು ಕೂಡ ಮಹಿಳೆಯರನ್ನು ದ್ವೇಷಿಸಬಾರದು. ಹೆಣ್ಣು-ಗಂಡು ಇಬ್ಬರು ಸಮಾನರೆ ಎನ್ನುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಸಮಕಾಲೀನ ಮಹಿಳಾ ಕಥಾ ಸಾಹಿತ್ಯ ಹೊಸ ನೋಟಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಚಿತ್ರದುರ್ಗ ಜಿಲ್ಲೆಯಲ್ಲಿ 300 ಮಹಿಳೆಯರು ಕಥೆಗಳನ್ನು ಬರೆಯುತ್ತಿದ್ದಾರೆ. 700 ಕಥಾಸಂಕಲನಗಳಿವೆ. ಮಹಿಳೆಯರ ಸಂವೇದನೆಯನ್ನು ಬರೆಯುವವರು ಹೆಚ್ಚು ದಾಖಲಾಗುತ್ತಿಲ್ಲ. ಮಹಿಳಾ ಬರಹಗಾರ್ತಿಯರಿಗೂ ಪ್ರೇರಕ ಶಕ್ತಿ ಬೇಕಾಗಿದೆ ಎಂದು ತಿಳಿಸಿದರು.
ಹನ್ನೆರಡನೇ ಶತಮಾನದಲ್ಲಿಯೇ 35 ಕ್ಕೂ ಹೆಚ್ಚು ಮಹಿಳೆಯರು ಕಥೆಗಳನ್ನು ಬರೆದಿದ್ದಾರೆ. ಎಲ್ಲಿಯೂ ದಾಖಲಾಗಿಲ್ಲ. ಶೈಕ್ಷಣಿಕ ವಲಯಕ್ಕೆ ಮಹಿಳೆಯರ ಬರವಣಿಗೆ ಪ್ರವೇಶಿಸುತ್ತಿಲ್ಲ. ಬರವಣಿಗೆಯೇ ಬಂಡಾಯ, ಮಾತೆ ಬಂಡಾಯ ಎನ್ನುವಾಗ ಸ್ತ್ರೀಯರ ಬರವಣಿಗೆ ಇನ್ನು ಏಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಇದಕ್ಕೆ ಮಹಿಳೆ ಎನ್ನುವ ನಿರ್ಲಕ್ಷೆ, ಅಸಡ್ಡೆ ಕಾರಣವಿರಬಹುದು ಹಾಗಾಗಿ ಕಥೆಗಳಿಗೆ ಅಭಿವ್ಯಕ್ತಿ ಬೇಕು ಎಂದರು.
ಜೀವನ ಅನುಭವ ಎಷ್ಟು ಮುಖ್ಯವೋ, ಬರವಣಿಗೆ, ಓದು ಕೂಡ ಅಷ್ಟೆ ಮುಖ್ಯವಾದುದು. ದೇಹ ಮತ್ತು ಮನಸ್ಸನ್ನು ಒಂದು ಮಾಡಿ ಮಾತುಗಳನ್ನು ಕೇಳುವುದೇ ನಿಜವಾದ ಅನುಭವ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ವಿಜ್ಞಾನ-ತಂತ್ರಜ್ಞಾನ, ಸ್ತ್ರೀವಾದವಿದೆ. ಮಹಿಳೆಯರು ಎಚ್ಚರವಾದಾಗ ಆಲೋಚನೆ ಬದಲಾಗುತ್ತದೆ. ಚರಿತ್ರೆ, ಇತಿಹಾಸ, ಪರಂಪರೆಯನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳನ್ನು ಎಚ್ಚರಿಸಿದರು.
ಕುವೆಂಪುರವರ ನಾಯಿಬುತ್ತಿ, ಮೊದಲ ಹೆಜ್ಜೆ ಪುಸ್ತಕಕ್ಕೆ ಹತ್ತಿರವಾದ ಸಂಬಂಧವಿದೆ. ಕಾವ್ಯದಲ್ಲಿದ್ದಂತೆ ಕಥೆಗಳಲ್ಲಿಯೂ ಕಾಡುವ ಗುಣವಿರಬೇಕು. ಪ್ರತಿಯೊಂದನ್ನು ಯೋಚಿಸಿ ಪ್ರಶ್ನಿಸುವ ಶಕ್ತಿ ಕಥೆ, ಬರವಣಿಗೆ, ಅಭಿವ್ಯಕ್ತಿಯಲ್ಲಿರಬೇಕು. ಆಚಾರ-ಸಂಪ್ರದಾಯ-ನಂಬಿಕೆಗಳನ್ನು ಪರಾಮರ್ಶಿಸಿ ತರ್ಕಕ್ಕೆ ಕೊಂಡೊಯ್ಯಬೇಕು. ಮಹಿಳಾ ಬರಹಗಾರರಿಗೂ ದೊಡ್ಡ ಜವಾಬ್ದಾರಿಯಿರುವುದರಿಂದ ಬದಲಾವಣೆಯ ಕಾಲಘಟ್ಟದಲ್ಲಿ ಹಳೆ ತಲೆಮಾರಿಗೆ ಇನ್ನು ಜೋತುಬೀಳಬಾರದು. ವಿಜ್ಞಾನದ ಮೂಲಕ ಮೌಢ್ಯಗಳನ್ನು ನಂಬಿ ಮೋಸ ಹೋಗುವುದು ನಿಲ್ಲಬೇಕು ಎಂದು ಹೇಳಿದರು.
ಸೃಜನಶೀಲತೆಗೆ ಜೀವನಾನುಭವ ಮುಖ್ಯ. ಬರೆಯುವ ತುಡಿತ ನಿಮ್ಮೊಳಗೆ ಇರಬೇಕು. ಗ್ರಾಮೀಣ ಸಂವೇದನೆ, ಮಹಿಳೆಯರ ಸಂವೇದನೆ, ದಲಿತರ ಸಂವೇದನೆಯನ್ನು ಓದಬೇಕು. ಓದು-ಬರಹಕ್ಕೆ ಜಾತಿ, ಮತ, ವಯಸ್ಸು, ಪ್ರದೇಶ ಸೀಮಿತವಲ್ಲ. ಸಂವೇದನಾಶೀಲರಾದ ಬರವಣಿಗೆ ದಾಖಲಾಗುತ್ತದೆ. ಪ್ರಗತಿಪರ ಆಲೋಚನೆ, ಮಾನವೀಯ ಮೌಲ್ಯಗಳು ಬರವಣಿಗೆಯಲ್ಲಿರಬೇಕು ಎಂದರು.
ಕರ್ನಾಟಕ ಲೇಖಕಿಯರ ಸಂಘ ಚಿತ್ರದುರ್ಗ ಶಾಖೆ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್, ಕನ್ನಡ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಲೇಖಕಿ ಪದ್ಮಿನಿ ನಾಗರಾಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಎಸ್.ಎನ್.ಹೇಮಂತರಾಜು, ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.ಸಿ.ಬಿ.ಶೈಲಾ, ಡಿ.ಮಂಜುಳ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಕಾರ್ಯದರ್ಶಿ ಶಶಿಕಲ ರವಿಶಂಕರ್ ಇನ್ನು ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
