ಆರೋಗ್ಯ ಕೇಂದ್ರಕ್ಕೆ ಚಕ್ಕರ್, ‘ನರ್ಸಿಂಗ್ ಹೋಂ’ನಲ್ಲಿ ಹಾಜರ್

ಚನ್ನಗಿರಿ:

         ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಚಿಕಿತ್ಸೆ ನೀಡುತ್ತಿಲ್ಲ ಎಂದು ತಾಲೂಕು ಪಂಚಾಯತ್ ಸದಸ್ಯೆ ಎಂ.ಎನ್. ಪುಷ್ಪಾವತಿ ಆರೋಪಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ಹಾಗೂ ತಜ್ಞವೈದ್ಯರು ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸದೇ, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯ ಕೇಂದ್ರಕ್ಕೆ ಬರುವ ಬಡಜನರು, ಚಿಕಿತ್ಸೆ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

        ಮರವಂಜಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯೆ ಎಲ್. ಗಾಯತ್ರಿಬಾಯಿ ತಾಲ್ಲೂಕು ಜಮ್ಮಾಪುರ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಎಎನ್‍ಎಂ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ, ಇದುವರೆಗೂ ಈ ಕಟ್ಟಡ ಕಾಮಗಾರಿ ಪೂರ್ಣವಾಗಿಲ್ಲ. ಇದರಿಂದ ಗ್ರಾಮದಲ್ಲಿ ಆರೋಗ್ಯ ಸಹಾಯಕಿ ಉಳಿದುಕೊಳ್ಳಲು ಕಟ್ಟಡವಿಲ್ಲದೇ ತೊಂದರೆಯಾಗಿದೆ ಎಂದು ಆರೋಪಿಸಿದರು.

         ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಯನ್ನು ಕೇಳಿದರೆ ಮಾಹಿತಿ ಇಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಈ ಎಎನ್‍ಎಂ ಕಟ್ಟಡಕ್ಕೆ ಕಿಟಿಕಿ, ಬಾಗಿಲುಗಳು ಇಲ್ಲ. ಗುತ್ತಿಗೆದಾರರೂ ಗೊತ್ತಿಲ್ಲ. ಈ ರೀತಿಯಾದರೆ ನಾವು ಯಾರನ್ನೂ ಪ್ರಶ್ನಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಇದಕ್ಕೆಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

        ಇದಕ್ಕೆ ಪ್ರತಿಕ್ರಯಿಸಿದ ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ಉತ್ತರ ನೀಡಿ `ನಾಳೆ ಜಮ್ಮಾಪುರ ಗ್ರಾಮಕ್ಕೆ ಭೇಟಿ ಕಟ್ಟಡದ ಪರಿಶೀಲನೆ ನಡೆಸುತ್ತೇನೆ. 2 ಲಕ್ಷ ರೂ. ಅನುದಾನದಲ್ಲಿ ದುರಸ್ತಿ ಮಾಡಲು ಸಾಧ್ಯವಾದರೆ ಶೀಘ್ರ ಅನುದಾನ ಬಿಡುಗಡೆ ಮಾಡಿಸಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

         ಸದಸ್ಯ ಎಚ್. ಹಾಲೇಶ್ ನಾಯ್ಕ ಮಾತನಾಡಿ, ಪಟ್ಟಣದ ಸಂತೇ ಮೈದಾನದ ಬಳಿ ಪರಿಶಿಷ್ಟ ಜಾತಿ ಬಾಲಕರ ವಿದ್ಯಾರ್ಥಿನಿಲಯ ಇದ್ದು, ನವೀಕರಣ ಕಾಮಗಾರಿಗೆ 2017-18ನೇ ಸಾಲಿನಲ್ಲಿ 56 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಈ ಕಾಮಗಾರಿಯ ಗುತ್ತಿಗೆಯನ್ನು ಕೆಆರ್‍ಐಡಿಎಲ್ ಸಂಸ್ಥೆ ವಹಿಸಿಕೊಂಡಿದ್ದು, ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿರುವುದಿಲ್ಲ’ ಎಂದು ಆರೋಪಿಸಿದರು.ಸದಸ್ಯ ಆರ್. ಷಡಾಕ್ಷರಿ ಮಾತನಾಡಿ, ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಮುಖ್ಯ ಶಿಕ್ಷಕರ ವರ್ಗಾವಣೆ ನಡೆದಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು.

         ತಾ.ಪಂ.ಅಧ್ಯಕ್ಷೆ ರೂಪಾ ಶ್ರೀಧರ್, `ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಆಹಾರವನ್ನು ನೀಡಬೇಕು. ಅದೇ ರೀತಿ ನಿಲಯಗಳಲ್ಲಿ ಹಾಳಾಗಿರುವ ನಲ್ಲಿ, ಕಿಟಿಕಿ, ಬಾಗಿಲುಗಳನ್ನು ದುರಸ್ತಿಗೊಳಿಸಬೇಕು. ಕಡ್ಡಾಯವಾಗಿ ಬಯೋಮೆಟ್ರಿಕ್ ಅನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳಬೇಕೆಂದು ಸೂಚಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಜಯ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಸಿ. ರವಿ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap