ಕೊರೊನಾ ಭೀತಿ: ಸಾಮನ್ಯ ರೋಗಗಳ ತಪಾಸಣೆಗೆ ಹಿಂದೇಟು

ತುಮಕೂರು    ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಸಾಮಾನ್ಯ ಕಾಯಿಲೆಗಳು ಕಡೆಗಣಿಕೆಗೊಳಗಾಗಿವೆಯೆ? ಜಗತ್ತಿನಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಕಾಯಿಲೆಗಳನ್ನು ಕೇಳುವವರೇ ಇಲ್ಲದಂತಾಗಿದೆ, ವೈದ್ಯರು ಕೂಡಾ ಇಂತಹ ಕಾಯಿಲೆಗಳ ತಪಾಸಣೆ, ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

      ಕೊರೊನಾ ಭೀತಿಯಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಅನೇಕ ಖಾಸಗಿ ಕ್ಲಿನಿಕ್‍ಗಳು ಬಂದ್ ಆಗಿವೆ. ತೆರೆದಿರುವ ಕಿನಿಕ್‍ಗಳಲ್ಲಿ ವೈದ್ಯರು ಜ್ವರ ಸಂಬಂಧ ರೋಗ ಲಕ್ಷಣದ ರೋಗಿಗಳ ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಒಳ ರೋಗಿಗಳಾಗಿ ದಾಖಲಾಗುವವರಿಗೆ ಮಾತ್ರವೆ ಅವಕಾಶ ನೀಡಲಾಗುತ್ತಿದೆ. ಹಾಗಾದರೆ, ಕೊರೊನಾ ಅಲ್ಲದ ಕಾಯಿಲೆಗಳ ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.

      ಕಳೆದ ಒಂದು ವಾರದಿಂದ ವಿವಿಧ ಕಾಯಿಲೆಗಳಿಂದ ನರಳುತ್ತಿರುವ, ನೋವು ಅನುಭವಿಸುತ್ತಿರುವ ಜನರು ಪದೆ ಪದೆ ಈ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಇದಕ್ಕೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಹೊರ ರೋಗಿ ತಪಾಸಣೆ ವ್ಯವಸ್ಥೆ ಸದ್ಯಕ್ಕೆ ಬೇಡ, ಒಳರೋಗಿಗಳಾಗಿ ಅಗತ್ಯ ಪರೀಕ್ಷೆ ಪಡೆಯುವುದು ಸೂಕ್ತ ಎಂದು ಕೆಲ ವೈದ್ಯರು ಸಲಹೆ ಮಾಡುತ್ತಾರೆ. ಆದರೆ, ಅಷ್ಟೂ ರೋಗಿಗಳನ್ನು ದಾಖಲಿಸಿಕೊಂಡು ಒಳರೋಗಿಗಳಾಗಿ ಚಿಕಿತ್ಸೆ ನೀಡಲು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹಾಗಂತ ಸಾಮಾನ್ಯ ಕಾಯಿಲೆಗಳಿಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಬಡವರಿಗೆ ತೀರಾ ದುಬಾರಿ ಖರ್ಚಿನ ವಿಚಾರ.

      ಖಾಸಗಿ ಆಸ್ಪತ್ರೆಗಳು, ನಸ್ರಿಂಗ್ ಹೋಮ್‍ಗಳು, ಕ್ಲಿನಿಕ್‍ಗಳಲ್ಲಿ ಒಪಿಡಿ ಬಂದ್ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು, ಯಾವುದೇ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮುಚ್ಚಕೂಡದು, ಬರುವ ಎಲ್ಲಾ ರೋಗಿಗಳಿಗೂ ಆರೋಗ್ಯ ಸಲಹೆ, ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದ್ದರು. ಆದರೂ ಕೆಲ ಖಾಸಗಿ ಕ್ಲಿನಿಕ್‍ಗಳು ಬಾಗಿಲು ಮುಚ್ಚಿವೆ. ಕೆಲವು ತೆರೆದಿದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ.

     ಸಚಿವರ ಹೇಳಿಕೆಗೂ ಯಾವುದೇ ಕಿಮ್ಮತ್ ಇಲ್ಲ. ಎಲ್ಲರೂ ಕೊರೋನಾ ಬಗ್ಗೆ ಮಾತನಾಡುತ್ತಿದ್ದಾರೆ. ಜ್ವರ ಎಂದರೆ ಹೆದರುತ್ತಿದ್ದಾರೆ. ಆದರೆ ಎಲ್ಲಾ ಜ್ವರವು ಕೊರೋನಾ ಅಲ್ಲಾ, ಹೊಗಲಿ ಜ್ವರ ಬಿಟ್ಟು ಇತರೆ ಕಾಯಿಲೆಗಳನ್ನಾದರು ಪರಿಕ್ಷಿಸಬೇಕಲ್ಲವೆ? ಅದು ಇಲ್ಲಾ ಎಂದರೆ ಆಸ್ಪತ್ರೆಗಳನ್ನು ಕಟ್ಟಿಕೊಂಡು ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೆ ಕುಳಿತು ಕೊಂಡರೆ ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆ.

       ಕ್ಲಿನಿಕ್‍ಗಳನ್ನು ತೆರೆದು ರೋಗಿಗಳ ತಪಾಸಣೆ ಮಾಡಬೇಕೆಂದರೆ ಅಲ್ಲಿನ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಸುರಕ್ಷಿತಾ ಸೌಕರ್ಯವನ್ನು ಸರ್ಕಾರ ಒದಗಿಸಬೇಕು. ಕೊರೊನಾದಂತಹ ಕಾಯಿಲೆ ಹರಡುವ ಸಂದರ್ಭದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ವೈದ್ಯರು ರೋಗಿಗಳನ್ನು ತಪಾಸಣೆ ಮಾಡುವುದು ಅಪಾಯಕಾರಿ ಎಂದು ಖಾಸಗಿ ವೈದ್ಯರು ಹೇಳುತ್ತಾರೆ.

      ಕೊರೊನಾ ಭೀತಿಯಿಂದ ಆಸ್ಪತ್ರೆಗಳಲ್ಲಿ ಜ್ವರ, ಕೆಮ್ಮು, ನೆಗಡಿ ಅಂತ ಆಸ್ಪತ್ರೆಗೆ ಹೋದ ರೋಗಿಗಳನ್ನು ವೈದ್ಯರು ಪರೀಕ್ಷಿಸಲೂ ಭಯ ಬೀಳುವಂತಾಗಿದೆ. ಯಾರಿಗೆ ಕೊರೊನಾ ಸೋಂಕು ಇದೆಯೋ ಅದು ತಮಗೆಲ್ಲಿ ಅಂಟಿ ಬಿಡುವುದೋ ಎಂಬ ಆತಂಕ ವೈದ್ಯರಲ್ಲೂ ಇದೆ. ಖಾಸಗಿ ಕ್ಲಿನಿಕ್‍ಗಳ ವೈದ್ಯರಂತೂ ಇಂತಹ ಲಕ್ಷಣದ ರೋಗಿಗಳನ್ನು ಅನುಮಾನದಿಂದಲೇ ನೋಡುವಂತಾಗಿದೆ. ಹೊರ ರೋಗಿಗಳನ್ನು ತಪಾಸಣೆ ಮಾಡಲು ಖಾಸಗಿ ಕ್ಲಿನಿಕ್‍ಗಳ ವೈದ್ಯರು ಹಿಂಜರಿಯುತ್ತಾರೆ.

      ಯಾಕೆಂದರೆ, ಇಂತಹ ಕ್ಲಿನಿಕ್‍ಗಳಲ್ಲಿ ವೈದ್ಯರಿಗೆ ಹಾಗೂ ಬರುವ ರೋಗಿಗಳಿಗೆ ಸುರಕ್ಷತಾ ಸೌಕರ್ಯಗಳಿಲ್ಲ. ತಪಾಸಣೆಗೆ ಬರುವ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ ಅವರನ್ನು ಪರೀಕ್ಷಿಸುವ ವೈದ್ಯರಿಗೂ ಅಂಟಿ, ಅವರ ಮೂಲಕ ಇತರೆ ರೋಗಿಗಳಿಗೂ ಹರಡಬಹುದು. ಈ ಕಾರಣದಿಂದ ಖಾಸಗಿ ಕ್ಲಿನಿಕ್‍ಗಳು ಹೊರ ರೋಗಿಗಳ ತಪಾಸಣೆ, ಚಿಕಿತ್ಸೆಗೆ ಸೂಕ್ತವಲ್ಲ, ಬಂದ್ ಮಾಡಬೇಕು ಎಂದು ಐಎಂಎ ಸಲಹೆ ಮಾಡಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನ ಜಿಲ್ಲಾ ಅಧ್ಯಕ್ಷ ಡಾ. ಮಹೇಶ್ ಹೇಳುತ್ತಾರೆ.

      ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು ತೆರೆದು ಆರೋಗ್ಯ ತಪಾಸಣೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ವೈದ್ಯರಿಗೆ ತಿಳಿಸಿದ್ದಾರೆ. ಅಂತಹ ವೈದ್ಯರ ಸಭೆ ಕರೆದು ಅವರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಖಾಸಗಿ ವೈದ್ಯರು ತಮ್ಮ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳಬೇಕು, ಇಲಾಖೆಯಿಂದ ಯಾವುದೇ ಸೌಲಭ್ಯ ಬೇಕು ಎಂದು ಕೋರಿದರೆ ಒದಗಿಸಲು ಸಿದ್ಧ ಎನ್ನುತ್ತಾರೆ.

      ತಾಲ್ಲೂಕು ಆಸ್ಪತ್ರೆಗಳನ್ನು ಜ್ವರದ ಕ್ಲಿನಿಕ್‍ಗಳಾಗಿ ರೂಪಿಸಲಾಗಿದೆ. ಸದ್ಯದ ಕೊರೊನಾ ಭೀತಿ ಇರುವ ಸಂದರ್ಭದಲ್ಲಿ ಜ್ವರ, ನೆಗಡಿ, ಕೆಮ್ಮು ಅಂತಹ ಲಕ್ಷಣ ಕಂಡು ಬಂದರೆ ಅಂತಹವರು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಖಾಸಗಿ ಕ್ಲಿನಿಕ್‍ಗಳಿಗೆ ಹೋಗಬಾರದು ಎಂದು ಸಲಹೆ ಮಾಡಿದ ಡಿಹೆಚ್‍ಓ ಡಾ. ಚಂದ್ರಿಕಾ, ಕೊರೊನಾ ಸೋಂಕು ಇದ್ದವರು ಇಂತಹ ಆಸ್ಪತ್ರೆಗಳಲ್ಲಿಗೆ ಹೋದರೆ ಸೋಂಕು ಇತರರಿಗೆ ಹರಡುವ ಸಾಧ್ಯತೆಗಳಿರುತ್ತವೆ ಎಂದರು.

       ಇದನ್ನು ತಡೆಯುವ ಸಲುವಾಗಿ, ಜಿಲ್ಲೆಯಲ್ಲಿ ಖಾಸಗಿ ವೈದ್ಯರನ್ನೂ ಒಳಗೊಂಡ ವೈದ್ಯರ ತಂಡ ರಚಿಸಲಾಗುತ್ತದೆ. ಅವರ ಮೊಬೈಲ್ ನಂಬರ್‍ಗಳನ್ನು ಪ್ರಕಟಿಸಲಾಗುತ್ತದೆ. ಜ್ವರ ಸಂಬಂಧಿ ಕಾಯಿಲೆ ಲಕ್ಷಣಗಳಿರುವವರು ಈ ತಂಡದ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಬಹುದು. ವೈದ್ಯರ ತಂಡ ಕೂಡಾ ಟೆಲಿಮೆಡಿಸಿನ್ ಸೇವೆ ಆರಂಭಿಸಿ, ತಮ್ಮನ್ನು ಫೋನ್‍ನಲ್ಲಿ ಸಂಪರ್ಕಿಸುವವರಿಗೆ ಆರೋಗ್ಯ ಸಲಹೆ ನೀಡುತ್ತಿದ್ದಾರೆ.

       ರೋಗಿಯ ಇತ್ತೀಚಿನ ಪ್ರವಾಸ, ಅವರು ಯಾರಾರನ್ನು ಸಂಪರ್ಕಿಸಿದ್ದರು ಮುಂತಾಗಿ ಜ್ವರದ ಹಿನ್ನೆಲೆಯ ಮಾಹಿತಿ ಸಂಗ್ರಹಿಸಿ ಕೊರೊನಾ ಶಂಕೆ ವ್ಯಕ್ತವಾದರೆ ಅಂತಹವರನ್ನು ಇಲಾಖೆ ವಾಹನದಲ್ಲಿ ಕರೆ ತಂದು ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಚಂದ್ರಿಕಾ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link