ಸಿಎಎ ತಪ್ಪು ಗ್ರಹಿಕೆ ಬೇಡ : ಯಡಿಯೂರಪ್ಪ

ಬೆಂಗಳೂರು

     ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ ಎಂಬ ವಾಸ್ತವ ಸತ್ಯವನ್ನು ತಿಳಿಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

   ನಗರದ ವಸಂತ ನಗರ ವಾರ್ಡ್‌ನಲ್ಲಿ ಭಾನುವಾರ ಮನೆ ಮನೆಗಳಿಗೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟರು.ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪ ಸಂಖ್ಯಾತರು ಮುಸ್ಲಿಂ ಸಮುದಾಯದವರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಆದರೂ ಸಹ ವಿರೋಧ ಪಕ್ಷಗಳು ಅಪ ಪ್ರಚಾರ ನಡೆಸುವ ಮೂಲಕ ದೇಶದ ಜನತೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿವೆ.

      ಇದಕ್ಕೆಲ್ಲ ಕಿವಿ ಕೊಡಬಾರದು ಎಂದು ನಾಗರಿಕರಲ್ಲಿ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಿದ್ದ ಮಹಮ್ಮದ್ ಗೌಸ್, ಬಳಿಗೂ ತೆರಳಿದ ಮುಖ್ಯಮಂತ್ರಿಗಳು ಕಾಯ್ದೆಯ ಬಗ್ಗೆ ಆತನಲ್ಲೂ ಅರಿವು ಉಂಟು ಮಾಡಿದ್ದರಲ್ಲದೇ ಕಾಯ್ದೆಯಿಂದ ಏನಾದರೂ ತೊಂದರೆ ಇದೆಯೇ ಎಂದು ಪ್ರಶ್ನಿಸಿದರು.

     ಮುಸಲ್ಮಾನರ ಮನೆಗಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಪೌರತ್ವ ಕಾಯ್ದೆಯ ವಾಸ್ತವತೆಯ ಬಗ್ಗೆ ಅರಿವು ಮಾಡಿಕೊಟ್ಟರು. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಕುರಿತಂತೆ ಜನರಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ಕುರಿತಂತೆ ಎಲ್ಲ ಮಾಹಿತಿಗಳನ್ನು ಒಳಗೊಂಡ ಕರ ಪತ್ರಗಳನ್ನು ಹಂಚುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಯ್ದೆ ಏಕೆ ಬೇಕು ಎಂಬುದರ ಬಗ್ಗೆಯೂ ಜಾಗೃತಿ ಉಂಟು ಮಾಡಿದ್ದರು.

      ಎಳೆ ನೀರು ಮಾರಾಟಗಾರ ಕಳೆದ 20 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ. ನಾನು ಸಾಯುವುದು ಇಲ್ಲೇ ಎಂದು ಉತ್ತರ ನೀಡಿದ್ದು ಮುಖ್ಯಮಂತ್ರಿ ಅವರಿಗೆ ಸಂತಸ ಉಂಟು ಮಾಡಿತ್ತು. ಮನೆ ಮನೆಗೆ ತೆರಳುವ ಜನ ಜಾಗೃತಿ ಅಭಿಯಾನದಲ್ಲಿ ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ವಸಂತ ನಗರ ವಾರ್ಡ್‌ನ ಬಿಜೆಪಿ ಸದಸ್ಯ ಎಸ್.ಸಂಪತ್ ಕುಮಾರ್, ಮಾಜಿ ಪಾಲಿಕೆ ಸದಸ್ಯ ಮಂಜುನಾಥ್, ಹಾಗೂ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಯ್ದೆ ಅನುಷ್ಠಾನ

     ಈ ನಡುವೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಷ್ಟಪಡಿಸಿದ್ದಾರೆ.

     ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದ ಆಡಳಿತದಲ್ಲಿ ಇದೂವರೆವಿಗೂ ಯಾವುದೇ ಲೋಪ ಕಂಡಿಲ್ಲ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ ದೇಶದ ಬಹುಸಂಖ್ಯಾತ ಜನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಒಪ್ಪಿಕೊಂಡು ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಪಾಕಿಸ್ತಾನದ ಪರ ವಾದ ಮಾಡುತ್ತಿದೆ ಎಂದು ಆರೋಪಿಸಿದರು.

     ದೇಶದಲ್ಲಿ ಮುಸಲ್ಮಾನರಿಗೆ ದೇಶದ ಎಲ್ಲಾ ಸ್ಥಾನ ಮಾನ ಗೌರವ ಸಿಗುತ್ತಿದೆ. ರಾಷ್ಟ್ರಪತಿ, ನ್ಯಾಯಾಧೀಶರು, ಸೇರಿದಂತೆ ಉನ್ನತ ಹುದ್ದೆಗಳನ್ನು ನೀಡಲಾಗಿದೆ. ಮುಸ್ಮಿಂ ಸಮುದಾಯದ ತಲೆ ಹಾಳು ಮಾಡುವವರ ಬಗ್ಗೆ ನಿಗಾವಹಿಸಬೇಕಾಗಿದೆ ಎಂದು ತಿಳಿಸಿದರು.

     ಕಾಂಗ್ರೆಸ್ ಪಕ್ಷ ಮುಸಲ್ಮಾನರನ್ನು ಓಟ್ ಬ್ಯಾಂಕ್ ಆಗಿ ಪರಿಗಣಿಸುತ್ತಲೇ ಬಂದಿದೆ. ಅದರಿಂದಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಸಮುದಾಯ ವಿರೋಧ ಎಂದು ಬಿಂಬಿಸುವ ಮೂಲಕ ಜನತೆಯನ್ನು ದಿಕ್ಕು ತಪ್ಪಿಸುತ್ತಿದೆ ಜನರನ್ನು ಗೊಂದಲದಲ್ಲಿ ಮುಳುಗಿಸಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ