ಮಾರಿಕೊಳ್ಳಬೇಡಿ ಸ್ವಾಭಿಮಾನದ ಘನತೆಯ…!

ಬಳ್ಳಾರಿ
 
       ಮಾರಿಕೊಳ್ಳಬೇಡಿ ಸ್ವಾಭಿಮಾನದ ಘನತೆ ಅಭಿಮಾನದ ಭಾದ್ಯತೆ ಗೌರವ ಗೌಪ್ಯತೆ ಪ್ರಜಾಪ್ರಭುತ್ವದ ಮಗಳು ನಾನು ಬಲಿಯಾಗಬೇಡಿ ಹಣಹೆಂಡ ಮೋಜಿಗೆ ಕುರಿಕೋಳಿ ಮದ್ಯ ಅಮಲಿನ ಆಮಿಷಕೆ ಭವ್ಯ ಭಾರತದ ಮುತ್ತೈದೆ ನಾನು…ಹೀಗೆ ಯುವಕವಿ ಬಿ.ಅರುಣಕುಮಾರ ಸೋಲಾಪುರ ಕವನ ವಾಚನ ಮಾಡುತ್ತಿದ್ದರೇ ದೇವಸ್ಥಾನ ಹಾಗೂ ಸುತ್ತಮುತ್ತಲು ನಿಶ್ಯಬ್ಧ. ಎಲ್ಲರ ಕೀವಿಗಳು ವೇದಿಕೆಯಲ್ಲಿನ ಆ ಧ್ವನಿ ಕೇಳುವತ್ತ.
   
       ಇದು ನಡೆದಿದ್ದು ಸೋಮವಾರ ಸಂಜೆ ನಗರದ ಬಸವೇಶ್ವರ ನಗರ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕವಿಗೋಷ್ಠಿ/ನಗೆ ಚಟಾಕಿ ಕಾರ್ಯಕ್ರಮ ಮತದಾನದ ಪ್ರಾಮುಖ್ಯತೆಯನ್ನು ಸಾರಿತು.
   
        ೨೫ಕ್ಕೂ ಹೆಚ್ಚು ಕವಿಗಳು ಮತದಾನದ ಮಹತ್ವ ಸಾರುವ ವಿವಿಧ ಕವನಗಳನ್ನು ತಮ್ಮ ಸುಮಧುರ ಕಂಠದಿಂದ ವಾಚಿಸುವ ಮೂಲಕ ನೆರೆದಿದ್ದ ಎಲ್ಲರನ್ನು ಮಂತ್ರಮುಗ್ದಗೊಳಿಸಿದರು. ನೆರೆದ ಎಲ್ಲರು ಹೌದು ಮತದ ಪ್ರಾಮುಖ್ಯತೆ ಅಪಾರ; ಇದು ನಮಗೆ ಸಂವಿಧಾನ ಕಲ್ಪಿಸಿರುವ ಅವಕಾಶ ಏ.೨೩ರಂದು ಕಡ್ಡಾಯವಾಗಿ ಮತ ಹಾಕುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸೋಣ ಎಂಬ ಅಭಿಪ್ರಾಯಗಳು ಕೇಳಿಬಂದವು.
   
         ಮತದಾನದ ಆಮಿಷಗಳಿಗೆ ಬಲಿಯಾಗಿ ಕೂಪಮಂಡುಕದ ತರಹ ಅಂಧಕಾರದ ಮಡುವಿನಲ್ಲಿ ಸೆರೆಯಾಗದಿರಿ, ಸ್ವಾತಂತ್ರ್ಯದ ಸಮಾನತೆಯ ಕೈಗನ್ನಡಿಯಂತಿರುವ ಮತದಾನವನ್ನು ಅತ್ಯಂತ ವಿವೇಚನಾಯುಕ್ತವಾಗಿ ಯೋಗ್ಯವ್ಯಕ್ತಿಗೆ ಹಾಕುವುದರ ಮೂಲಕ ಸದೃಢ ಭಾರತ ನಿರ್ಮಿಸಬೇಕು;ಅದನ್ನು ಬಿಟ್ಟು ಸಣ್ಣಪುಟ್ಟ ಆಮಿಷಗಳಿಗೆ ಬಲಿಯಾಗಿ ಜೇಡರ ಬಲೆಯ ವಿಷವರ್ತುಲಕೆ ಸಿಲುಕಿಸಬೇಡಿ. ಪ್ರಜಾಸತ್ಯಾತ್ಮತೆಯ ಕನಸಿನ ಕೂಸು ನಾನು ಎಂಬ ಅಂಶಗಳು ಕವನದಲ್ಲಿ ಪ್ರತಿಧ್ವನಿಸಿದವು.
   
         ಜನಪರ ಸರಕಾರ ರಚನೆಗೆ ಅಸ್ತ್ರ ಮತಬಾಣ, ಸೀರೆ,ಚಿನ್ನದ ಆಸೆಗೆ ಮೋಸ ಹೋಗಬೇಡ, ಮಾಂಸ-ಹೆಂಡದ ಕೂಪಕ್ಕೆ ಬಿದ್ದು ಸಾಯಬೇಡಿ ಎಂದು ವಿವಿಧ ಕವಿಗಳು ತಮ್ಮ ಕವನದಲ್ಲಿ ಪ್ರಸ್ತಾಪಿಸಿದ ಅವರು, ಹಣದ ಕಂತೆಯ ಚೆಲ್ಲಿದ ದುರುಳ ಸುಮ್ಮನಿರದೇ ಐದು ವರ್ಷ ಅವನು ದೋಚದೇ ಬಿಡುವುದಿಲ್ಲ. ಚುನಾವಣೆ ಬಂದಾಗ ಮತದಾರನನ್ನು ದೇವರೆಂದು ಹೇಳುವರು ಗಾದಿ ಸಿಕ್ಕ ತಕ್ಷಣ ನೀ ಯಾರೆಂದು ಕೇಳುತಾರ ಎಂಬ ಅಂಶಗಳು ಪ್ರಸ್ತಾಪವಾದವು.
   
         ಜಾತಿ-ಮತ ನೋಡದೇ ಸ್ವಜನಪಕ್ಷಪಾತ ಮಾಡದೇ ಕಲ್ಯಾಣ ನವಭಾರತ ನಿರ್ಮಾಣಕ್ಕೆ ಯೋಚಿಸಿ ಮತದಾನ ಮಾಡಬೇಕು; ಇದು ನಮ್ಮ ದೇಶದ ಅಭಿವೃದ್ಧಿಯ ಪಥ ಎಂಬ ಅಂಶಗಳು ಸೇರಿದಂತೆ ಮತದಾನಕ್ಕೆ ಸಂಬಂಧಿಸಿದ ವಿವಿಧ ಅಂಶಗಳು ಕವನಗಳಲ್ಲಿ ಪ್ರಸ್ತಾಪವಾದವು.
   
          ನಗೆಗಡಲಲ್ಲಿ ತೇಲಿಸಿದ ಎರ್ರಿಸ್ವಾಮಿ: ಟಿವಿ ೯ ಕಾಮಿಡಿ ಜಂಕ್ಷನ್ ಖ್ಯಾತಿಯ ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ ಅವರು ವಿವಿಧ ರೀತಿಯ ಹಾಸ್ಯದ ಚಟಾಕಿಗಳನ್ನು ಹಾರಿಸುವುದರ ಮೂಲಕ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದರು. 
ಮತದಾನಕ್ಕೆ ಸಂಬಂಧಿಸಿದ ವಿವಿಧ ಹಾಸ್ಯ ಚಟಾಕಿಗಳು ಹಾಗೂ ಪ್ರತಿನಿತ್ಯ ಜೀವನದಲ್ಲಿ ಸಂಭವಿಸುವ ವಿವಿಧ ಘಟನೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಹಾಸ್ಯ ಚಟಾಕಿಗಳನ್ನು ಹೇಳಿದರು.
   
         ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್ ಗುಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ರಾಮ ಕಲ್ಮಠ ಸೇರಿದಂತೆ ಅನೇಕರು ಇದ್ದರು.ಅಮಾತಿ ಬಸವರಾಜ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link