ಉದ್ಯೋಗ ಖಾತ್ರಿ ಯೋಜನೆಗೆ ಕತ್ತರಿ ಬೇಡ..!!!

ದಾವಣಗೆರೆ

     ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಗ್ರಾಮೀಣ ಜನತೆಗೆ ವರದಾನವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನೇ ಸ್ಥಗಿತಗೊಳಿಸುವ ಪ್ರಯತ್ನ ನಾಡಿಸಿದ್ದು, ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿಗೆ ಕತ್ತರಿ ಹಾಕಬಾರದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ರೂಪಾ ನಾಯ್ಕ ಒತ್ತಾಯಿಸಿದ್ದಾರೆ.

      ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಪಕ್ಷಗಳು ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಿಸಿರುವ ಬಗ್ಗೆ ಪ್ರಶ್ನಿಸಿದಕ್ಕೆ ಉತ್ತರಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ನತ್ತು ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಬಡತನ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬೆಳೆ ವಿಮೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

      ಆದ್ದರಿಂದ ನರೇಗಾವನ್ನು ಮುಂದುವರೆಸುವ ಅವಶ್ಯಕತೆ ಇದೆಯೇ ಎಂಬುದಾಗಿ ಮರು ಪ್ರಶ್ನೆ ಹಾಕಿದ್ದರು. ಸಚಿವರ ಈ ಹೇಳಿಕೆಯು ಉದ್ಯೋಗ ಖಾತ್ರಿ ಯೋಜನೆಯನ್ನೇ ಸ್ಥಗಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಹುನ್ನಾರ ನಡೆಸಿರುವುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಆರೋಪಿಸಿದರು.

        ಕಳೆದ ಕೇಂದ್ರ ಬಜೆಟ್‍ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 68 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಆ ಅನುದಾನವನ್ನು ಕಡಿತಗೊಳಿಸಿ, 60 ಸಾವಿರ ಕೋಟಿ ಅನುದಾನ ನೀಡಿದೆ. ಹೀಗೆ, ಹಂತ, ಹಂತವಾಗಿ ನರೇಗಾ ಅನುದಾನವನ್ನು ಕಡಿತಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಬದುಕಿಗೆ ವರವಾಗಿರುವ ಈ ಯೋಜನೆಯನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಆತಂಕ ಗ್ರಾಮೀಣರನ್ನು ಕಾಡುತ್ತಿದೆ ಎಂದು ದೂರಿದರು.

         ಬಡತನ ನಿರ್ಮೂಲನೆಯ ಉದಾತ್ತ ಉದ್ದೇಶದ ಮೂಲಕ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಬಡ ಜನರಿಗಾಗಿ ರೂಪಿಸಿರುವ ಸಾಮಾಜಿಕ ಭದ್ರತಾ ಕಾಯ್ದೆಯಾಗಿದೆ. ಉದ್ಯೋಗ ಹಕ್ಕಿನ ಮೂಲಕ ದೀರ್ಘಾವದಧಿ ಆಸ್ತಿಗಳಾದ ಕೆರೆ, ಕುಂಟೆ, ಕಾಲುಗೆ, ಬಾವಿ, ಅರಣ್ಯೀಕರಣ, ನೆಡುತೋಪು, ರಸ್ತೆ ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಜನರಿಗೆ ಸುಸ್ಥಿರ ಬದುಕು ಕಟ್ಟಿಕೊಡಲಿದೆ ಎಂದು ಹೇಳಿದರು.

          ಇಂದು ಇಡೀ ಜಗತ್ತೇ ಜಾಗತಿಕ ತಾಪಮಾನದಿಂದ ಒದ್ದಾಡುತ್ತಿದೆ. ಈ ಜಾಗತಿಕ ತಾಪಮಾನವನ್ನು ನಿಯಂತ್ರಣಕ್ಕೆ ತರಲು ಬೇಕಾಗಿರುವ ಕೆರೆ, ಕುಂಟೆ, ಗೋಕಟ್ಟೆಗಳನ್ನು ನಿರ್ಮಿಸಿ, ಜಲ ಮೂಲವನ್ನು ವೃದ್ಧಿ ಪಡಿಸುವ ಅವಕಾಶ ಉದ್ಯೋಗ ಖಾತ್ರಿ ಯೋಜನೆಯಲ್ಲಿದೆ. ಅಲ್ಲದೇ, ಈ ಯೋಜನಯಡಿ ಎಲ್ಲ ಜನಾಂಗ ಜಾತಿಯವರು ಒಂದೆಡೆಯೇ ಸೇರಿ ಕೆಲಸ, ಊಟ ಮಾಡುವುದರಿಂದ ಸಮಾನತೆ ಬಂದಿದೆ.

          ಉದ್ಯೋಗ ಅರಸಿ ಮಕ್ಕಳು-ಮರಿ, ವಯೋವೃದ್ಧರನ್ನು ಬಿಟ್ಟು ವಲಸೆ ಹೋಗುವುದು ಕಡಿಮೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸದೇ ಮುಂದುವರೆಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಎ.ಕೆ.ಗುಡದಯ್ಯ, ಕು.ವೀರಮ್ಮ, ರಾಜ್ಯ ಉಪಾಧ್ಯಕ್ಷೆ ನೇತ್ರಾವತಿ, ಹರೀಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap