ಶಿರಾ
ತಾಲ್ಲೂಕಿನ ಶ್ರೀ ಕ್ಷೇತ್ರ ಪ.ನಾ.ಹಳ್ಳಿ ಮಠದಲ್ಲಿ ಶ್ರೀ ನಂಜಾವಧೂತಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಕೈಗೊಳ್ಳಲಾಗಿದ್ದ ಲಲಿತ ಸಹಸ್ರ ನಾಮ ಹೋಮದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡರು.
ರಾಜ್ಯದ ಜನತೆಯ ಒಳಿತಿನ ದೃಷ್ಟಿಯಿಂದ ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿಯ ಚುನಾವಣೆಗೆ ಹೆಜ್ಜೆ ಹಾಕಿದ್ದು ಮುಂದಿಟ್ಟ ಹೆಜ್ಜೆಯಿಂದ ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಯ ಪಕ್ಷಗಳಿಗೆ ಬೆಂಬಲ ದೊರೆಯುವುದು ಹಗಲಿನಷ್ಟೇ ಸತ್ಯವಾಗಿದ್ದು, ದೋಸ್ತಿ ಪಕ್ಷಗಳು ರಾಜ್ಯದಲ್ಲಿ ನಡೆಸಿರುವ ಕ್ರಿಯಾಶೀಲ ಮತ ಪ್ರಚಾರವನ್ನು ಕಂಡು ಕೋಮುವಾದಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿರಾ ತಾಲ್ಲೂಕಿನ ಶ್ರೀ ಕ್ಷೇತ್ರ ಪ.ನಾ.ಹಳ್ಳಿ ಮಠದಲ್ಲಿ ಶ್ರೀ ನಂಜಾವಧೂತಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸೋಮವಾರ ಕೈಗೊಳ್ಳಲಾಗಿದ್ದ ಲಲಿತ ಸಹಸ್ರನಾಮ ಹೋಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ದೇಶದ ಹಿತಕ್ಕಾಗಿ ಎರಡೂ ಪಕ್ಷಗಳ ವರಿಷ್ಠರು ಮೈತ್ರಿಯ ಚುನಾವಣೆಗೆ ಅಭಿಮತ ವ್ಯಕ್ತಪಡಿಸಿದ್ದು, ಇಲ್ಲಿ ಜಾತ್ಯತೀತ ಭಾವನೆಗಳಿಗೆ ಜಯ ಖಚಿತವಾಗಿದೆ. ಸಂಸತ್ ಚುನಾವಣೆಯಲ್ಲಿ ನಮ್ಮನ್ನು ಬಗ್ಗುಬಡಿಯಲು ಐ.ಟಿ. ಅಸ್ತ್ರವನ್ನು ಬಿ.ಜೆ.ಪಿ. ವರಿಷ್ಠರು ಬಳಸಿದ್ದು ಇದರಿಂದ ಯಾವುದೇ ಪ್ರಯೋಜನವಾಗದು. ರಾಜ್ಯದಲ್ಲಿ ನಡೆದ ಐ.ಟಿ.ದಾಳಿಯಲ್ಲಿ ಜೆ.ಡಿ.ಎಸ್. ಮುಖಡರನ್ನೆ ಟಾರ್ಗೆಟ್ ಮಾಡಿದ್ದು ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಏನೂ ಸಿಗದಂತಾಗಿ ಕಂಗಾಲಾಗುವಂತಾಗಿದೆ ಎಂದರು.
ಈ ಹಿಂದೆ ಮಾಜಿ ಸಚಿವ ಈಶ್ವರಪ್ಪ ಅವರ ಮನೆಯ ಮೇಲೆ ಐಟಿ ದಾಳಿ ನಡೆದಾಗ ಅವರ ಮನೆಯಲ್ಲಿ ಹಣದ ನೋಟನ್ನು ಎಣಿಸುವ ಎಷ್ಟು ಯಂತ್ರಗಳು ಲಭ್ಯವಾಗಿದ್ದವು ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಅಂತಹ ಯಾವುದೇ ನೋಟನ್ನು ಎಣಿಕೆ ಮಾಡುವ ಯಂತ್ರಗಳು ನಮ್ಮ ಪಕ್ಷದ ಮುಖಂಡರ ಮನೆಗಳಲ್ಲಿ ಲಭ್ಯವಾಗಿಲ್ಲ ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಅಭ್ಯರ್ಥಿಯಾಗಿರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪ ನಿಮ್ಮ ಮೇಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅಧಿಕಾರವಿಲ್ಲದಿದ್ದರೂ ಅಲ್ಲಿನ ಸ್ವತಂತ್ರ ಅಭ್ಯರ್ಥಿ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸೋಲುವ ಹತಾಶಾಭಾವನೆಯಿಂದ ಮಂಡ್ಯ ಸ್ವತಂತ್ರ ಅಭ್ಯರ್ಥಿ ಪೇಚಿಗೆ ಸಿಕ್ಕಂತೆ ಆಡುತ್ತಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಅಗತ್ಯ ನಮಗಿಲ್ಲ. ನಾಮಪತ್ರ ಸಲ್ಲಿಕೆಯ ವೇಳೆ ಹಾಗೂ ಆ ನಂತರದ ಯಾವುದೇ ಬೆಳವಣಿಗೆಯಲ್ಲೂ ನಾವು ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ ಎಂದರು.
ರಾಜ್ಯದ ಜನತೆಯ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಢಿಸಿಕೊಳ್ಳಲಾಗಿದೆ. ರೈತರ ಸಾಲಮನ್ನಾ ಮಾಡಿ ಎಂದು ಕೇಂದ್ರಕ್ಕೆ ಗೋಗರೆದರೂ ಮನ್ನಾ ಮಾಡದಿದ್ದಾಗ ರಾಜ್ಯ ಸರ್ಕಾರವೆ ಸಹಕಾರಿ ಸಂಘಗಳ ರೈತರ ಸಾಲಮನ್ನಾ ಮಾಡಿದೆ. ತೆಂಗಿನ ತೋಟಗಳು ನಾಶಗೊಂಡಾಗ ಅಂತಹ ರೈತರ 1 ಎಕರೆಗೆ 20,000 ರೂಗಳಂತೆ ಹಣ ನೀಡಿ ರೈತರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಇಂತಹ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್-ಜೆ.ಡಿ.ಎಸ್. ಬೆಂಬಲಿತ ಅಭ್ಯರ್ಥಿಗಳ ಕೈ ಹಿಡಿಯಲಿದ್ದು ದೋಸ್ತಿ ಪಕ್ಷಗಳ ಅಭ್ಯರ್ಥಿಗಳನ್ನು ಜನತೆ ಆಶೀರ್ವದಿಸಲಿದ್ದಾರೆ ಎಂದರು.
ಹೇಮಾವತಿಯ ಹೋರಾಟಕ್ಕಿಳಿದಾಗ ಸುರೇಶ್‍ಗೌಡ, ಮಾಧುಸ್ವಾಮಿ ಹುಟ್ಟಿಯೇ ಇರಲಿಲ್ಲ….!
ದೇವೇಗೌಡರು ತುಮಕೂರು ಜಿಲ್ಲೆಯ ಹೇಮಾವತಿ ನೀರಿನ ಪಾಲಿಗೆ ಅಡ್ಡಗಾಲಾಗಿದ್ದರು ಎಂಬ ಆರೋಪದ ಬಗ್ಗೆ ಪತ್ರಕರ್ತರು ಮುಖ್ಯಮಂತ್ರಿಗಳ ಗಮನ ಸೆಳೆದಾಗ ಹೇಮಾವತಿಯ ನೀರನ್ನು ಹರಿಸುವ ನಿಟ್ಟಿನಲ್ಲಿ ದೇವೇಗೌಡರು ಎಂದೂ ಕೂಡಾ ವಿರೋಧಿಸಿಲ್ಲ. ಗೊರೂರು ಜಲಾಶಯದ ನಿರ್ಮಾಣಕ್ಕೆ ಹೋರಾಟ ಮಾಡಿದವರಲ್ಲಿ ದೇವೇಗೌಡರೆ ಪ್ರಥಮರು.
1964ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಮಿಳುನಾಡಿಗೆ ನಾವು ಸಾಕಷ್ಟು ಹೇಮಾವತಿ ನೀರು ಕೊಡುತ್ತೇವೆ ನೀವು ಭತ್ತಕೊಡಿ, ನಾವು ನೀರು ಕೊಡುತ್ತೇವೆಂದು ಹೇಳಿದಾಗ ಅದನ್ನು ಪ್ರಬಲವಾಗಿ ವಿರೋಧಿಸಿದವರೆ ದೇವೇಗೌಡರು ಎಂದು ಕುಮಾರಸ್ವಾಮಿ ಹೇಳಿದರು.
ಹೇಮಾವತಿಯ ಆಳ ಅರಿವುಗಳನ್ನು ತಿಳಿಯವದವರೂ ಕೂಡಾ ಹೇಮಾವತಿಯ ಬಗ್ಗೆ ಮಾತನಾಡುವಂತಾಗಿದೆ. ದೇವೇಗೌಡರು ಹೇಮಾವತಿಯ ಹೋರಾಟಕ್ಕಿಳಿದಾಗ ಅದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಮಾಜಿ ಶಾಸಕ ಸುರೇಶ್‍ಗೌಡ ಹಾಗೂ ಹಾಲಿ ಶಾಸಕ ಮಾಧುಸ್ವಾಮಿ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ. ಬಾಯಿ, ನಾಲಿಗೆ ಇದೆ ಅಂತಾ ಮನಸೋ ಇಚ್ಛೆ ಮಾತನಾಡುವುದು ಅವರ ಯೋಗ್ಯತೆಯನ್ನು ತೋರಿಸುತ್ತಿದೆ. ದೇವೇಗೌಡರು ಹೇಮಾವತಿಗಾಗಿ ಮಾಡಿದ ಹೋರಾಟದ ಬಗ್ಗೆ ಮಾತನಾಡುವ ಹಕ್ಕು ಇವರಿಬ್ಬರಿಗೂ ಇಲ್ಲ ಎಂದರು.
ಶ್ರೀ ನಂಜಾವಧೂತಸ್ವಾಮೀಜಿ ಲಲಿತ ಸಹಸ್ರ ಹೋಮದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್, ಸಂಸದ ಹಾಗೂ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ಸಿ.ಆರ್.ಉಮೇಶ್, ರಾಮಕೃಷ್ಣ, ಆರ್.ರಾಮು, ಆರ್.ರಾಘವೇಂದ್ರ, ಶ್ರೀಮತಿ ಗಿರಿಜಮ್ಮ, ಮುದಿಮಡು ರಂಗಸ್ವಾಮಯ್ಯ, ಟಿ.ಡಿ.ಮಲ್ಲೇಶ್, ಮುಂತಾದವರು ಹಾಜರಿದ್ದರು.