ತುಮಕೂರು:
ತಾನು ಪ್ರೀತಿಸಿದ ಹುಡುಗಿಯನ್ನು ವಿವಾಹವಾಗಲು ವಿರೋಧಿಸುತ್ತಿದ್ದ ತಂದೆ ತಾಯಿಯನ್ನೇ ಸುಫಾರಿ ಕೊಟ್ಟು ಕೊಲೆಗೈದಿದ್ದ ಮಗನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ತುಮಕೂರಿನ ಅಶೋಕನಗರದಲ್ಲಿ ಗೋಪಾಲಶೆಟ್ಟಿ ಹಾಗೂ ರೂಪಾ ದಂಪತಿಗಳು ವಾಸವಾಗಿದ್ದರು. ಇವರಿಗೆ ಧೀರಜ್ ಎಂಬ ಮಗನಿದ್ದ. ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಷಯ ತಂದೆ ತಾಯಿಯರಿಗೆ ಗೊತ್ತಾಗಿ ವಿವಾಹಕ್ಕೆ ವಿರೋಧಿಸಿದ್ದರು. ಇವರು ಬದುಕಿದ್ದರೆ ನಾನು ಪ್ರೀತಿಸಿದ ಹುಡುಗಿಯನ್ನು ವಿವಾಹವಾಗಲು ಸಾಧ್ಯವಿಲ್ಲ ಎಂದು ತಿಳಿದ ಧೀರಜ್ ಹೆತ್ತವರನ್ನೇ ಮುಗಿಸಲು ಸಂಚು ರೂಪಿಸಿದ.
ಇದಕ್ಕಾಗಿ ರವಿ ಅಲಿಯಾಸ್ ಗೇಟಾ, ಆನಂದ, ರಾಮಚಂದ್ರ ಎಂಬುವರೊಂದಿಗೆ ಸೇರಿಕೊಂಡು ತಕ್ಕ ಯೋಜನೆ ತಯಾರಿಸಿದ. ಆರೋಪಿಗಳು ಬೆಂಗಳೂರಿನಿಂದ ತುಮಕೂರಿಗೆ ಬಂದು ಇಳಿದುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ. ಈತನೇ ರೂಪಿಸಿದ ಸಂಚಿನಂತೆ ಆರೋಪಿ ಧೀರಜ್ ತನ್ನ ತಂದೆ ತಾಯಿಯರನ್ನು ಕೊಲೆ ಮಾಡಲು ಮುಂಗಡವಾಗಿ ಹಣ ನೀಡಿ ತಾನಿರುವ ಮನೆಯನ್ನು ತೋರಿಸಿದ್ದ. 8.3.2016 ರಂದು ಕೊಲೆಗೆ ಸಂಚು ನಡೆಯಿತು. ಆನಂತರ 14.3.2016ರಂದು ಬೆಳಗಿನ ಜಾವ 1.45ರಲ್ಲಿ ಆರೋಪಿಗಳಾದ ಹರೀಶ, ಚಂದ್ರಮೌಳಿ ಮತ್ತು ರವಿ ಅವರು ಧೀರಜ್ ಮನೆಗೆ ಬಂದು ಸೇರಿಕೊಂಡರು.
ಗೋಪಾಲಶೆಟ್ಟಿ ದಂಪತಿ ಮಲಗಿದ್ದ ಕೊಠಡಿಗೆ ತೆರಳಿ ಹರಿತವಾದ ಡ್ರಾಗರ್‍ನಿಂದ ಗೋಪಾಲಶೆಟ್ಟಿಯ ಕುತ್ತಿಗೆ, ಎಡಗಡೆ ಹೊಟ್ಟೆಗೆ ಮತ್ತಿತರ ಕಡೆಗಳಿಗೆ ತಿವಿದು ರಕ್ತಗಾಯಗಳನ್ನುಂಟು ಮಾಡಿದರು. ರೂಪ ಅವರಿಗೂ ಇದೇ ರೀತಿ ಡ್ರಾಗನ್‍ನಿಂದ ತಿವಿದು ಕೊಲೆಗೈಯ್ಯಲಾಗಿತ್ತು. ಅದೇ ದಿನ ಧೀರಜ್‍ನಿಂದ ಸುಫಾರಿ ಹಣ ಪಡೆದು ಅವರು ಪರಾರಿಯಾಗಿದ್ದರು.
ಮಾರನೆಯ ದಿನ ಬೆಳಗ್ಗೆ ಈ ಘಟನೆ ತುಮಕೂರು ನಗರದಾದ್ಯಂತ ಚರ್ಚೆಯಾಗಿ ಜನ ಅಶೋಕನಗರದ ಮನೆಯ ಮುಂದೆ ಗುಂಪುಗೂಡಿದ್ದರು. ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಜನತೆ ಆಗ್ರಹಿಸಿದ್ದರು. ವೃದ್ಧ ದಂಪತಿಗಳನ್ನು ಕೊಲೆಗೈದಿದ್ದ ಈ ಪ್ರಕರಣ ತುಮಕೂರಿನ ಜನತೆಯನ್ನು ಬೆಚ್ಚಿಬೀಳಿಸಿತ್ತು. ಇದಾದ ನಂತರ ಮಗನ ಮೇಲೆಯೇ ಸಂಶಯಗಳು ಆರಂಭವಾಗಿ ಪೊಲೀಸರ ತಂಡ ಸುಧೀರ್ಘ ವಿಚಾರಣೆ ನಡೆಸಿ ಮಗ ಧೀರಜ್‍ನನ್ನು ಬಂಧಿಸಿತ್ತು. ಅಂದಿನ ತನಿಖಾಧಿಕಾರಿ ಬಾಳೇಗೌಡ ನ್ಯಾಯಾಯಲಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಧೀರಜ್‍ನಿಗೆ ಐಪಿಸಿ ಕಲಂ 302ರ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ಕೊಲೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ತೀರ್ಪು ಪ್ರಕಟಿಸಿದರು.
14 ವರ್ಷಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷೆ ಅನುಭವಿಸಲು ತೀರ್ಪಿನಲ್ಲಿ ನ್ಯಾಯಾಧೀಶರು ಆದೇಶಿಸಿರುತ್ತಾರೆ. ಇತರೆ ಆರೋಪಿಗಳಾದ ರವಿ, ಆನಂದ, ರಾಮಚಂದ್ರ, ಹರೀಶ, ಚಂದ್ರಮೌಳಿ ಇವರಿಗೂ ಶಿಕ್ಷೆ ಪ್ರಕಟಿಸಲಾಗಿದೆ. ಕೊಲೆಗೆ ಸುಫಾರಿ ನೀಡಿದ ಮಗ ಧೀರಜ್ 1ನೇ ಆರೋಪಿಯಾಗಿದ್ದರೆ, ಡ್ರಾಗರ್‍ನಿಂದ ಗೋಪಾಲಶೆಟ್ಟಿ ಅವರಿಗೆ ತಿವಿದು ಸಾಯಿಸಿದ ಹರೀಶ 2ನೇ ಆರೋಪಿ, ರೂಪ ಅವರಿಗೆ ಡ್ರಾಗರ್‍ನಿಂದ ತಿವಿದು ಸಾಯಿಸಿದ ಆರೋಪಿ ಚಂದ್ರಮೌಳಿ 3ನೇ ಆರೋಪಿ. ಇದಕ್ಕೆಲ್ಲ ಸಹಕರಿಸಿದ ರವಿ, ಆನಂದ ಮತ್ತು ರಾಮಚಂದ್ರ ಕ್ರಮವಾಗಿ 4, 5 ಮತ್ತು 6ನೇ ಆರೋಪಿಗಳು. ಸದರಿ ಪ್ರಕಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಆರ್.ಟಿ ಅರುಣ ವಾದ ಮಂಡಿಸಿದ್ದರು.