ಬೆಂಗಳೂರು
ನ್ಯಾಷನಲ್ ಕಾಲೇಜು ಮೈದಾನದ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ಹಿರಿಯ ಚಿಂತಕ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ ಅವರ ಹೆಸರನ್ನು ನಾಮಕರಣ ಮಾಡಲು ಶಿಫಾರಸು ಮಾಡಲಿದ್ದು, ಅವರ ಹುಟ್ಟೂರಾದ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ನ್ಯಾಷನಲ್ ಕಾಲೇಜಿನಲ್ಲಿಂದು 7ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಮೆಟ್ರೋ ನಿಲ್ದಾಣಕ್ಕೆ ಡಾ.ಎಚ್.ಎನ್. ಅವರ ಹೆಸರು ಇಡುವುದು ಸೂಕ್ತ. ಅದೇ ರೀತಿ ಅವರ ಹುಟ್ಟೂರಿನಲ್ಲಿ ಖಾಸಗಿ ಸಹಭಾಗಿತ್ವದಡಿ ಅವರ ನೆನಪಿನಲ್ಲಿ ವಿಜ್ಞಾನ ಕೇಂದ್ರ ತೆರೆಯಲಾಗುವುದು. ಈ ಮೂಲಕ ಡಾ.ಎಚ್.ಎನ್. ಅವರಿಗೆ ಸೂಕ್ತ ಗೌರವ ಸಲ್ಲಿಸಲಾಗುವುದು ಎಂದರು.
ನ್ಯಾಷನಲ್ ಕಾಲೇಜು ಮೈದಾನವನ್ನು ಮರಳಿ ಕಾಲೇಜು ಸುಪರ್ದಿಗೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಕುಮಾರ ಸ್ವಾಮಿ ಸ್ಪಷ್ಟಪಡಿಸಿದರು. ಈ ಕಾಲೇಜಿನ ವಿದ್ಯಾರ್ಥಿಯಾಗಿ ಇತಿಹಾಸಕಾರರು ಬರೆದಿಡುವಂತಹ ಕೆಲಸ ಮಾಡುವುದಾಗಿಯೂ ಹೇಳಿದರು.
ರೈತರ ಸಾಲ ಮನ್ನಾ ಮಾಡುವುದರಿಂದ ಸರ್ಕಾರದ ಖಜಾನೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗುವುದಿಲ್ಲ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಆರ್ಥಿಕ ಶಿಸ್ತಿದೆ. ರೈತರ ಸಾಲಮನ್ನಾ ಮಾಡಲು ಸರ್ಕಾದ ಬದ್ಧವಾಗಿದೆ ಎಂದರು.
ನಮ್ಮ ಕೃಷಿ ನೀತಿ ಬದಲಾವಣೆ ಆಗಲೇಬೇಕಿದ್ದು, ವರ್ಷಕ್ಕೆ ನಮ್ಮ ರೈತರು 23 ಸಾವಿರ ಕೋಟಿ ರೂ ಮೌಲ್ಯದ ಬೆಳೆ ಬೆಳೆಯುತ್ತಾರೆ. ಆದರೆ ಇದು 54 ಸಾವಿರ ಕೋಟಿ ರೂಗೆ ಮಾರಾಟವಾಗುತ್ತದೆ. 15-20 ಸಾವಿರ ಕೋಟಿ ರೂ ಮಧ್ಯವರ್ತಿಗಳ ಪಾಲಾಗುತ್ತಿದೆ. ಯಾವುದೇ ಶ್ರಮಪಡದೇ ಇವರು ಹಣ ಗಳಿಸುತ್ತಿದ್ದಾರೆ. ಹೀಗಾಗಿ ಬೆಳೆಯುವ ರೈತ ಮತ್ತು ಖರೀದಿಸುವ ಗ್ರಾಹಕ ಇಬ್ಬರಿಗೂ ಅನುಕೂಲವಾಗುವಂತಹ ಯೋಜನೆ ರೂಪಿಸಿ ಜಾರಿಗೆ ತರುವುದು ತಮ್ಮ ಉದ್ದೇಶವಾಗಿದೆ ಎಂದು ಕುಮಾರ ಸ್ವಾಮಿ ಹೇಳಿದರು.
ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಉತ್ಪಾದನಾ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು. ಆದರೆ ಈ ಸರ್ಕಾರದಲ್ಲಿ ತಮಗಿರುವ ಮಿತಿಯ ಅರಿವಿದೆ. ಸಮ್ಮಿಶ್ರ ಸರ್ಕಾರ ಮುನ್ನಡೆಸುವುದು ತಂತಿಯ ಮೇಲೆ ನಡಿಗೆ ಇದ್ದ ಹಾಗೆ. ಬಲು ಕಷ್ಟದ ಕೆಲಸ. ಕಾಂಗ್ರೆಸ್ ನವರಿಗೂ ಅವರದ್ದೇ ಆದ ಕೆಲವು ಯೋಜನೆಗಳಿವೆ. ತಮ್ಮಲ್ಲಿಯೂ ಕೆಲವು ಯೋಜನೆಗಳನ್ನು ಜಾರಿಗೆ ತರುವ ಉದ್ದೇಶವಿದೆ. ತಮಗೆ ವೈಯಕ್ತಿಕ ಕಾರ್ಯಸೂಚಿ ಇಲ್ಲ. ಯುವಕರು ಸೇರಿ ಎಲ್ಲರಿಗೂ ಒಳ್ಳೆಯದಾಗಬೇಕು ಎನ್ನುವುದು ತಮ್ಮ ಗುರಿಯಾಗಿದೆ ಎಂದರು.
ಬೆಂಗಳೂರಿನ ಸುತ್ತ ಔಟರ್ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 12 ವರ್ಷಗಳ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡಲಾಗಿತ್ತು. ಆದರೆ ಈವರೆಗೆ ಅದು ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಪೆರಿಫೆರಲ್ ರಿಂಗ್ ರಸ್ತೆಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ಮೆಟ್ರೋ ಪರಿಸ್ಥಿತಿಯೂ ಇದೇ ಆಗಿತ್ತು. ತಮ್ಮ ಕಾಲದಲ್ಲಿ ಆರಂಭವಾದ ಮೆಟ್ರೋ ಯೋಜನೆ ಅನುಷ್ಠಾನ ಸಹ ವಿಳಂಬವಾಯಿತು ಎಂದು ಕುಮಾರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ