ತುರುವೇಕೆರೆ
ತಾಲ್ಲೂಕಿನ ಚಿಕ್ಕತುರುವೇಕೆರೆ ಗ್ರಾಮದಲ್ಲಿನ ಚರಂಡಿಗಳು ಸ್ವಚ್ಛತೆ ಕಾಣದೆ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕ ತುರುವೇಕೆರೆ ಗ್ರಾಮದಲ್ಲಿ ಸುಮಾರು 80 ಕುಟುಂಬದಿಂದ 200ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಸುಮಾರು ದಿನಗಳಿಂದ ಗ್ರಾಮ ಪಂಚಾಯ್ತಿ ಗ್ರಾಮವನ್ನು ಸಂಪೂರ್ಣ ಕಡೆಗಣಿಸಿದ್ದು ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿಲ್ಲ. ಸುಮಾರು ದಿನಗಳಿಂದ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸದೆ ನೀರು ತುಂಬಿಕೊಂಡು ರಸ್ತೆಯಲ್ಲಿ ಹರಿಯುತ್ತಿದೆ. ಮನೆಗಳ ಮುಂದೆ ಚರಂಡಿ ನೀರು ನಿಂತಲ್ಲೆ ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ.
ಇದರಿಂದ ಈಗಾಗಲೇ ಗ್ರಾಮದಲ್ಲಿ ಸಂಕ್ರಾಮಿಕ ರೋಗಗಳ ತಾಣವಾಗಿದ್ದು ಹಲವು ಜನರು ಹಾಗೂ ಮಕ್ಕಳು ಕಾಯಿಲೆ ಬೀಳುವಂತಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಓಗೂ ಗ್ರಾಮಸ್ಥರು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಗ್ರಾಮವನ್ನು ನಿರ್ಲಕ್ಷ್ಯ ಮಾಡಿದರೆ ಗ್ರಾಮ ಪಂಚಾಯ್ತಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಓಂಕಾರಮೂರ್ತಿ, ಶಿವಗಂಗಮ್ಮ, ರೇಣುಕ, ಮೂಡಲಗಿರಿಯಪ್ಪ, ಮಂಜುನಾಥ್, ದಾಸಪ್ಪ, ಕುಮಾರ್, ಶೈಲಜ, ರಾಧಿಕ ಎಚ್ಚರಿಸಿದ್ದಾರೆ.
ಅಂಗನವಾಡಿಗೆ ನೀರಿಲ್ಲ, ಕರೆಂಟಿಲ್ಲ :
ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡದ ಮುಂಭಾಗದಲ್ಲಿಯೆ ಸ್ವಚ್ಛತೆ ಮಾಯವಾಗಿದೆ. ಬಾಗಿಲ ಮುಂಭಾಗದಲ್ಲಿ ದೊಡ್ಡ ಗುಂಡಿಯಾಗಿ ಮಳೆಯ ನೀರು ನಿಂತು ಸೊಳ್ಳೆಗಳು ವಾಸವಾಗಿವೆ. ಸುಮಾರು 10 ರಿಂದ 12 ಮಕ್ಕಳು ಅಂಗನವಾಡಿಗೆ ಬರಲಿದ್ದು ಹಲವು ಮಕ್ಕಳಿಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ನೀಡಿಲ್ಲ.
ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸದೆ ನಿಂತಲ್ಲೆ ನಿಂತು ಕೆಟ್ಟ ವಾಸನೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿ ಹಲವು ರೋಗ ಬರುವ ಭೀತಿಯಲ್ಲಿ ನಾವು ವಾಸ ಮಾಡುತಿದ್ದೇವೆ. ಈಗಾಗಲೇ ನನ್ನ ಮಗ ಡೆಂಗ್ಯೂ ಕಾಯಿಲೆಗೆ ತುತ್ತಾಗಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಆದ್ದರಿಂದ ಗ್ರಾಮ ಪಂಚಾಯ್ತಿ ಕೂಡಲೇ ಚರಂಡಿ ಸ್ವಚ್ಛಗೊಳಿಸಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಗ್ರಾಮಸ್ಥ ಪಾರ್ಥಸಾರಥಿ ವಿನಂತಿಸಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ