ನಿರ್ಲಕ್ಷ್ಯದಿಂದ ಗಿಡಮೂಲಿಕೆ ಅನ್ಯರ ಪಾಲು

ದಾವಣಗೆರೆ:

     ಭಾರತೀಯರ ನಿರ್ಲಕ್ಷ್ಯದಿಂದಾಗಿ ಗಿಡಮೂಲಿಕೆಗಳು ಅನ್ಯರ ಪಾಲಾಗುತ್ತಿವೆ ಎಂದು ಇಳಕಲ್ಲಿನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀಗುರು ಮಹಾಂತ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

     ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಶುಕ್ರವಾರ ನಡೆದ ಔಷಧಿ ಸಸ್ಯಗಳ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

        ಹಿತ್ತಲ ಗಿಡ ಮದ್ದಲ್ಲವೆಂಬ ಭಾರತೀಯರ ನಿರ್ಲಕ್ಷ್ಯದಿಂದಾಗಿ ಭಾರತದ ಪಾರಂಪರಿಕ ಗಿಡಮೂಲಿಕೆಯಂಥ ಪದಾರ್ಥಗಳು ಅನ್ಯರ ಪಾಲಾಗುತ್ತಿವೆ. ಇದಕ್ಕೆ ಅಮೇರಿಕಾ ಅರಿಶಿಣದ ಮೇಲೆ ಪೇಟೆಂಟ್ ಪಡೆದುಕೊಂಡಿರುವುದೇ ಉತ್ತಮ ನಿದರ್ಶನವಾಗಿದೆ ಎಂದರು.

      ಮನುಷ್ಯನಿಗೆ ಬಾಧಿಸುವ ಎಲ್ಲಾ ರೋಗ-ರುಜೀನಗಳಿಗೂ ಪ್ರಕೃತಿಯಲ್ಲಿಯೇ ದೊರೆಯುವ ಔಷಧೀಯ ಸಸ್ಯಗಳಲ್ಲೇ ಪರಿಹಾರವಿದೆ. ಇದನ್ನು ಅರಿತು ನಮ್ಮ ಹಿರಿಯರು ಗಿಡಮೂಲಿಕೆಯ ಸಸ್ಯಗಳಿಂದಲೇ ರೋಗಗಳನ್ನು ಪರಿಹರಿಸುತ್ತಿದ್ದರು. ಇಂದಿನ ಅಲೋಪಥಿ ಔಷಧಿಗಳಿಗೂ ಗಿಡಮೂಲಿಕೆಯೇ ಮೂಲ ತಾಯಿಬೇರುಯಾಗಿದೆ ಎಂದು ಹೇಳಿದರು.

       ಪಾರಂಪರಿಕವಾಗಿ ದೊರೆಯುವ ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗ-ರುಜೀನಗಳನ್ನು ಗುಣಪಡಿಸುವುದು ನಮ್ಮ ಭಾರತೀಯ ಚಿಕಿತ್ಸಾ ಪದ್ಧತಿಯ ವಿಧಾನವಾಗಿದೆ. ಸಸ್ಯಗಳಲ್ಲಿರುವ ಔಷಧೀಯ ಗುಣವನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಆದರೆ, ಇಂದಿನ ತಲೆಮಾರಿಗೆ ಅವುಗಳ ಪರಿಚಯವೇ ಇಲ್ಲವಾಗಿದೆ. ಆದ್ದರಿಂದ ಇಂತಹ ಸಮ್ಮೇಳನಗಳ ಮೂಲಕ ಪಾರಂಪರಿಕ ವೈದ್ಯ ಪದ್ಧತಿಯ ಕುರಿತು ಇಂದಿನವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

      ಪಾರಂಪರಿಕ ವೈದ್ಯ ಪದ್ಧತಿಯು ಗುರು-ಶಿಷ್ಯ ಪರಂಪರೆ ಹಾಗೂ ವಂಶ ಪಾರಂಪರ್ಯವಾಗಿ ಬೆಳೆದು ಬಂದಿರುವ ವಿದ್ಯೆಯಾಗಿದೆ. ಈ ವಿದ್ಯೆಗೆ ಬಹಳಷ್ಟು ಅನುಭವ ಬೇಕಾಗಿದೆ. ಪಾರಂಪರಿಕ ಚಿಕಿತ್ಸಾ ಪದ್ಧತಿಯು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ಪದ್ಧತಿಯಾಗಿದೆ. ಹೀಗಾಗಿ ಸಮಾಜವೇ ಪಾರಂಪರಿಕ ವೈದ್ಯ ಪದ್ಧತಿಯಿಯನ್ನು ಉಳಿಸಿ, ಬೆಳೆಸಿ ಪೋಷಿಸಬೇಕೆಂದು ಕಿವಿಮಾತು ಹೇಳಿದರು.

      ಹಿಂದೆ ಪಾರಂಪರಿಕ ವೈದ್ಯರಿಂದಾಗಿ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಈಗಲೂ ಅನೇಕ ನಾಟಿ ವೈದ್ಯರು ಸೇವಾ ಮನೋಭಾವದಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಇದು ಬಡಜನರಿಗೆ ತುಂಬಾ ಉಪಯುಕ್ತವಾಗಿದೆ. ಪಾರಂಪರಿಕ ಚಿಕಿತ್ಸಾ ಪದ್ಧತಿಯ ಜ್ಞಾನವು ಅಲೋಪತಿ ವೈದ್ಯ ಪದ್ಧತಿಯಂತೆ ವ್ಯಾಪಾರವಾಗಿ ಬಳಕೆಯಾಗದೇ, ಸೇವೆಗಾಗಿ ಬಳಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

      ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ್ ಮಾತನಾಡಿ, ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು ತಮ್ಮ ಚಿಕಿತ್ಸಾ ವಿಧಾನವನ್ನು ದಾಖಲಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ಪದ್ಧತಿ ಬಹುತೇಕರಿಗೆ ತಲುಪುತ್ತಿಲ್ಲ. ಆದ್ದರಿಂದ ಪಾರಂಪರಿಕ ವೈದ್ಯರಿಗೆ ಸೂಕ್ತ ತರಬೇತಿ ನೀಡಿ, ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಗೆ ತರಲು ಇಲಾಖೆ ಶ್ರಮಿಸುತ್ತಿದೆ. ಈ ದಿಸೆಯಲ್ಲಿ ಪಾರಂಪರಿಕ ವೈದ್ಯರ ಸಮಗ್ರ ಮಾಹಿತಿಯುಳ್ಳ ಪಟ್ಟಿಯನ್ನು ಆಯುಷ್ ನಿರ್ದೇಶನಾಲಯಕ್ಕೆ ಕಳಿಸಲಾಗಿದೆ. ಪಾರಂಪರಿಕ ವೈದ್ಯ ವೃತ್ತಿಯಲ್ಲಿರುವವರಿಗೆ ಮಾನ್ಯತೆ ಪ್ರಮಾಣಪತ್ರ ನೀಡುವ ಚಿಂತನೆಯು ಸರ್ಕಾರದ ಮುಂದಿದೆ ಎಂದು ಹೇಳಿದರು.

      ಮೈಸೂರು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ, ಅಂಕಣಕಾರ ಡಾ.ಸತ್ಯನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

       ಕಾರ್ಯಕ್ರಮದ ಸಾನಿಧ್ಯವನ್ನು ಇಳಕಲ್ಲಿನ ಶ್ರೀಬಸವಪ್ರಸಾದ ಸ್ವಾಮೀಜಿ, ಶ್ರೀಗುರುಬಸವ ಸ್ವಾಮೀಜಿ, ಶ್ರೀಬ್ರಹ್ಮಾನಂದ ಸ್ವಾಮೀಜಿ, ನಂದಾ ತಾಯಿ, ಶ್ರೀಬಸವ ಭೃಂಗೇಶ್ವರ ಸ್ವಾಮೀಜಿ, ಶ್ರೀರಾಮಮೂರ್ತಿ ಸ್ವಾಮೀಜಿ, ಶ್ರೀನಿರಂಜನ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್.ಟಿ.ದೇವರಾಜ, ಮೂಡಿಗೆರೆ ತೋಟಗಾರಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಸದಾಶಿವ ನಡುಕೇರಿ, ಪಾರಂಪರಿಕ ವೈದ್ಯ ಪರಿಷತ್‍ನ ಅಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link