1.5 ಕೋಟಿ ಮೌಲ್ಯದ ನಕಲಿ ಬಿತ್ತನೆ ಬೀಜ ವಶ..!

ಬ್ಯಾಡಗಿ:

      ಪಟ್ಟಣದಲ್ಲಿರುವ ಶೀತಲ ಗೃಹಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿರುವ ಅನಧಿಕೃತ ಬಿತ್ತನೆ ಬೀಜಗಳ ಪತ್ತೆಗಾಗಿ ಬೆನ್ನು ಹತ್ತಿರುವ ಕೃಷಿ ಇಲಾಖೆಯು ಶನಿವಾರವೂ ತನ್ನ ತನಿಖೆಯನ್ನು ಮುಂದುವರೆಸಿದ್ದು, ಮತ್ತೆ ಎರಡು ಕೋಲ್ಡ್ ಸ್ಟೋರೇಜ್’ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 1.5 ಕೋಟಿ ರೂ ಮೌಲ್ಯದ 1600 ಕ್ವಿಂಟಾಲ್ ನಕಲಿ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿದೆ.

     ಶುಕ್ರವಾರ ಹಾವೇರಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ. ಮಂಜುನಾಥ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ಸೂರ್ಯ ಕೋಲ್ಡ್ ಸ್ಟೋರೇಜ್ ಹಾಗೂ ಛತ್ರ ರಸ್ತೆಯಲ್ಲಿರುವ ವಕ್ರತುಂಡ ಕೋಲ್ಡ್ ಸ್ಟೋರೇಜ್ ಮೇಲೆ ದಾಳಿ ನಡೆಸಿ 3.5 ಕೋಟಿ ರೂಗಳ ಮೌಲ್ಯದ ನಕಲಿ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿತ್ತು. ಶನಿವಾರ ಮತ್ತೆ ದಾಳಿ ಮುಂದುವರೆಸಿರುವ ಅಧಿಕಾರಿಗಳ ತಂಡ ಪಟ್ಟಣದ ಮಲ್ಲೂರ ರಸ್ತೆಯಲ್ಲಿರುವ ನವಲೆ ಕೋಲ್ಡ್ ಸ್ಟೋರೇಜ್ ಹಾಗೂ ಸಿದ್ಧಗಂಗಾ ಕೋಲ್ಡ್ ಸ್ಟೋರೇಜ್’ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 1600 ಕ್ವಿಂಟಾಲ್ ನಕಲಿ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ವಶ ಪಡಿಸಿಕೊಂಡಿದ್ದಾರೆ. 

     ಕೃಷಿ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ನಕಲಿ ಬೀಜ ಮಾರಾಟಗಾರರು ಪಟ್ಟಣದ ಕೋಲ್ಡ್ ಸ್ಟೋರೇಜ್’ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ತಮ್ಮ ಬಿತ್ತನೆ ಬೀಜಗಳನ್ನು ಲಾರಿಗಳ ಮೂಲಕ ಸಾಗಾಟ ಮಾಡಲು ಯತ್ನಿಸುವ ಸಂದರ್ಭದಲ್ಲಿ ಅಧಿಕಾರಿಗಳ ತಂಡಕ್ಕೆ ಮಾಹಿತಿ ದೊರಕಿದ್ದು, ಮೊದಲೇ ಕೋಲ್ಡ್ ಸ್ಟೋರೇಜ್’ಗಳ ನಿಗಾ ವಹಿಸಿದ್ದ ಅಧಿಕಾರಿಗಳ ತಂಡ ಲಾರಿ ಚಾಲಕನನ್ನು ಹಿಡಿದು ಬಂಧಿಸಿದ್ದು, ವಿಚಾರಣೆ ನಡೆಸಿದ ವೇಳೆ ಸತ್ಯ ಬಯಲಾಗಿದೆ.

      ಈಗಾಗಲೇ ನಾಲ್ಕು ಕೋಲ್ಡ್ ಸ್ಟೋರೇಜ್’ಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಚೀಲಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕಿ ಜಿ.ಎಸ್. ಸ್ಫೂರ್ತಿ, ತಹಶೀಲ್ದಾರ ಶರಣಮ್ಮ ಕಾರಿ, ಸಿಪಿಐ ಭಾಗ್ಯವತಿ ಬಂತಿ, ಜಾಗೃತಿ ದಳದ ಅಧಿಕಾರಿ ಪ್ರಾಣೇಶ, ಸಹಾಯಕ ಕೃಷಿ ನಿರ್ದೇಶಕ ಎಚ್. ಬಿ. ಗೌಡಪ್ಪಳವರ, ತಾಂತ್ರಿಕ ಕೃಷಿ ಅಧಿಕಾರಿ ಬಸವರಾಜ ಮರಗಣ್ಣನವರ, ಕೃಷಿ ಅಧಿಕಾರಿ ಎಂ. ಮಂಜುನಾಥ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link