ಹಾವೇರಿ

ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ ಸೃಷ್ಟಿಸಿ ಗದಗ ಜಿಲ್ಲೆಯಿಂದ ಹಾವೇರಿಗೆ ಪ್ರವೇಶಮಾಡುತ್ತಿದ್ದ ಕಾರು ಚಾಲಕನೋರ್ವ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಕಲಿ ಪಾಸ್ ಸೃಷ್ಟಿಕರ್ತನ ಮೇಲೆ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣ ಹೊರತುಪಡಿಸಿ ಇತರ ಪ್ರಯಾಣಿಕರ ವಾಹನ ಓಡಾಟಕ್ಕೆ ನಿರ್ಭಂಧ ಹೆರಲಾಗಿದೆ. ವೈದ್ಯಕೀಯ ಕಾರಣಗಳಿದ್ದರೆ ಅಧಿಕೃತವಾಗಿ ಪಾಸ್ ಪಡೆದು ಪ್ರಯಾಣ ಮಾಡಬಹುದು. ಆದರೆ ದಿಲೀಪ್ ಬಂಕಾಪುರ ಎಂಬಾತ ಮಾರುತಿ ವಿಟಾರ್ ಬ್ರಿಜ್ (ಕೆಎ-27 ಎನ್ 4122) ಕಾರಿನ ಮೇಲೆ ಬ್ಯಾಡಗಿ ಶಾಸಕರು ಎಂದು ನಕಲಿ ಪಾಸ್ ಅಂಟಿಸಿಕೊಂಡು ಲಕ್ಷ್ಮೇಶ್ವರದಿಂದ ರಾಣೇಬೆನ್ನೂರಿಗೆ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಮಾಡುತ್ತಿದ್ದ ಎನ್ನಲಾಗಿದೆ.
ಚೆಕ್‍ಪೋಸ್ಟ್‍ಗಳ ತಪಾಸಣೆ ವೇಳೆಯಲ್ಲಿ ಈ ಕಾರ್‍ನ್ನು ಗಮನಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಕಾರ್ ತಡೆದು ವಿಚಾರಣೆ ನಡೆಸಿದ್ದಾರೆ. ಕಾರಿನ ಮೇಲಿದ್ದ ಶಾಸಕರ ಹೆಸರಿನ ಬಣ್ಣದ ಪಾಸ್ ಅಸಲಿ ಕುರಿತಂತೆ ಸಂಶಯಗೊಂಡು ಸ್ಥಳದಲ್ಲೇ ಶಾಸಕರಿಗೆ ಕರೆಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆಯಲ್ಲಿ ಶಾಸಕರು ಯಾರಿಗೂ ಪಾಸ್ ನೀಡಿಲ್ಲ ಎಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಕಲಿ ಪಾಸ್ ಸೃಷ್ಟಿಸಿ ಕಾರು ಚಾಲನೆ ಮಾಡುತ್ತಿದ್ದವನ ಮೇಲೆ ಮೊಕದ್ದಮೆ ದಾಖಲಿಸಿ ಕಾರು ವಶಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
