ಹೊಸಪೇಟೆ
ಖಾಸಗಿ ಹಾಗು ಅನುದಾನಿತ ಶಾಲೆಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತ ಅಧಿಕ ಡೊನೇಶನ್ ಪಡೆಯುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಸಂಘಟನೆಯ ಪದಾಧಿಕಾರಿಗಳು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿವೈಎಫ್‍ಐನ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ ಮಾತನಾಡಿ, ಖಾಸಗಿ ಹಾಗು ಅನುದಾನಿತ ಶಾಲೆಗಳಲ್ಲಿ ಮನಸೋ ಇಚ್ಚೆ ಡೊನೇಶನ್ ಪಡೆಯಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತ ಅಧಿಕ ಡೊನೇಶನ್ ಪಡೆಯಲಾಗತ್ತಿದೆ.
ಯಾರು ಹೆಚ್ಚು ಡೊನೇಶನ್ ನೀಡುತ್ತಾರೋ ಅವರನ್ನು ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಎಸ್‍ಎಫ್‍ಐ ಹಾಗು ಡಿವೈಎಫ್‍ಐ ಅನೇಕ ವರ್ಷಗಳಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ಒಂದೇ ಒಂದು ಸಭೆಯನ್ನು ನಡೆಸಿಲ್ಲ. ಹಾಗು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಡೊನೇಶನ್ ಹಾವಳಿ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ಲೇ ಕ್ಲಾಸ್, ಎಲ್‍ಕೆಜಿ, ಯುಕೆಜಿ ಹಾಗು 1ನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳಲು ರೂ.5 ಸಾವಿರದಿಂದ ರೂ.35 ಸಾವಿರ ವರೆಗೆ ಡೊನೇಶನ್ ಹೆಸರಿನಲ್ಲಿ ಯಾವುದೇ ರಸೀದಿ ನೀಡದೇ ಹಣ ಪಡೆಯಲಾಗುತ್ತಿದೆ. ಜೊತೆಗೆ ಬಸ್ ಚಾರ್ಜ್, ಮಕ್ಕಳ ಬಟ್ಟೆ, ಪುಸ್ತಕಗಳಿಗೆ ಸಹ ಬೇರೆ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಇವರು ಕೂಡ ಶಾಮೀಲಾಗಿದ್ದಾರೆಯೇ ? ಎಂಬ ಸಂಶಯ ಬರುತ್ತದೆ ಎಂದರು.
ಹೀಗಾಗಿ ಕೂಡಲೇ ನಮ್ಮ ಬೇಡಿಕೆಗಳಾದ ಪ್ರತಿ ಶಾಲೆಗಳ ಮುಂದೆ ಬೋದನಾ ಶುಲ್ಕ, ಅಭಿವೃದ್ದಿ ಶುಲ್ಕ, ವಿಶೇಷ ಅಭಿವೃದ್ದಿ ಶುಲ್ಕ ಮತ್ತು ಬಂಡವಾಳ ವೆಚ್ಚ ಗಳನ್ನು ಸಂಗ್ರಹಿಸಲು ಸರ್ಕಾರ ಸೂಚಿಸಿರುವ ನಿಯಮದ ಪ್ರಕಾರ ತಮ್ಮ ಶಾಲೆಗಳಿಗೆ ಅನ್ವಯಿಸಿದ ಶುಲ್ಕಗಳನ್ನು ಸಂಗ್ರಹಿಸಲು ಇರುವ ವಿವರಗಳನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು.
ಡೊನೇಷನ್ ಹೆಸರಿನಲ್ಲಿ ವಿದ್ಯಾರ್ಥಿಗಳ ತಂದೆ-ತಾಯಿ-ಪೋಷಕರಿಂದ ಹಣವನ್ನು ವಸೂಲಿ ಮಾಡಿರುವ, ಮಾಡುತ್ತಿರುವ ಶಾಲೆಗಳ ಮೇಲೆ ಶಿಸ್ತು ಕ್ರಮವನ್ನು ಕೈಗೊಂಡು ಡೊನೇಷನ್ ಹಣವನ್ನು ಪೋಷಕರಿಗೆ ಮರುಳಿಸಬೇಕು ಡೊನೇಷನ್ ವಿರೋಧಿ ಸಮಿತಿಯನ್ನು ರಚಿಸಬೇಕು.
ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ, ಮಹಿಳಾ ಮೀಸಲಾತಿಗಳನ್ನು ಸರಿಯಾಗಿ ಜಾರಿ ಮಾಡಿಸಬೇಕು. ಪ್ರತಿ ಶಾಲೆಗಳಿಗೆ ಸಂಬಂಧಿಸಿದಂತೆ ಎಷ್ಟು ಸೀಟುಗಳಿವೆಂಬುದನ್ನು ಪ್ರದರ್ಶಿಸಬೇಕು.ವರ್ಗಾವಣೆ ಪ್ರಮಾಣ ಪತ್ರ, ಅಂಕ ದಾಖಲೆ ,ಅಧ್ಯಯನ ಪತ್ರ, ನಡತೆ ಪತ್ರ, ಇತರೆ ಪ್ರಮಾಣ ಪತ್ರಗಳಿಗೆ ಇರುವ ಸರ್ಕಾರದ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಲು ನಿರ್ದೇಶಿಸಬೇಕು. ಇಲ್ಲವಾದರೆ ಇಲಾಖೆ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂಧರ್ಭದಲ್ಲಿ ಡಿವೈಎಫ್‍ಐನ ಪದಾಧಿಕಾರಿಗಳಾದ ಕಿನ್ನಾಳ ಹನುಮಂತ, ಕಲ್ಯಾಣಯ್ಯ, ಬಂಡೆ ತಿರುಕಪ್ಪ, ಇ.ಮಂಜುನಾಥ, ಕೆ.ಎಂ.ಸಂತೋಷ, ವಿಜಯಕುಮಾರ್, ರಾಜ, ಚಂದ್ರಶೇಖರ ಇದ್ದರು.