ಹೂವಿನಹಡಗಲಿ :
ಹೂವಿನಹಡಗಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಉಪಾಧೀಕ್ಷಕರ ಕಛೇರಿ (ಡಿ.ವೈ.ಎಸ್.ಪಿ) ರವರ ಕಛೇರಿಯನ್ನು ಸರ್ಕಾರ ಜಗಳೂರಿಗೆ ಸ್ಥಳಾಂತರಗೊಳಿಸಿ, ಆದೇಶ ಹೊರಡಿಸಿದ್ದು, ಕೂಡಲೇ ಆದೇಶವನ್ನು ರದ್ದುಗೊಳಿಸಿ, ಹಡಗಲಿಯಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ಮಾಜಿ ಶಾಸಕರಾದ ಬಿ.ಚಂದ್ರನಾಯ್ಕ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ.ಬಸವರಾಜ್ ಆಗ್ರಹಿಸಿದರು.
ಅವರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿ, ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್‍ರವರು ಕ್ಷೇತ್ರದ ಅಭಿವೃದ್ದಿಗಾಗಿ ಎಲ್ಲಾ ಕಛೇರಿಗಳನ್ನು ಹೂವಿನಹಡಗಲಿಗೆ ತಂದಿದ್ದರು. ಆದರೆ, ಅವರ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಸಚಿವ ಪಿ.ಟಿ.ಪರಮೇಶ್ವರನಾಯ್ಕರವರ ಅಧಿಕಾರದ ಅವಧಿಯಲ್ಲಿ ಡಿ.ವೈ.ಎಸ್.ಪಿ. ಕಛೇರಿ ಸ್ಥಳಾಂತರಗೊಂಡಿದ್ದು, ಸಚಿವರ ನಿಷ್ಕಾಳಜಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಜಿ.ಬುಳ್ಳಪ್ಪ ಮಾತನಾಡಿ, 15 ದಿನಗಳ ಒಳಗಾಗಿ ಕಛೇರಿ ಸ್ಥಳಾಂತರ ಆದೇಶ ರದ್ದುಗೊಳ್ಳದಿದ್ದರೆ, ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಹಿಂದೆ ಇಂಜಿನೀಯರಿಂಗ್ ಕಾಲೇಜ್ ಬಳ್ಳಾರಿಗೆ ಸ್ಥಳಾಂತರಗೊಂಡಾಗ ಆರಂಭದಲ್ಲಿ ಪತ್ರಕರ್ತರ ಸಂಘಟನೆಯಿಂದ ಅಹೋರಾತ್ರಿ ಧರಣಿಯನ್ನು ಆರಂಭಿಸುವುದರ ಮೂಲಕ ಕಾಲೇಜ್ ಸ್ಥಳಾಂತರವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಹೋರಾಟದ ಮೂಲಕ ಇಂಜಿನೀಯರಿಂಗ್ ಕಾಲೇಜ್ ಸ್ಥಳಾಂತರವನ್ನು ಅಂದಿನ ಬಿಜೆಪಿ ಸರ್ಕಾರ ರದ್ದುಗೊಳಿಸಿ, ಹಡಗಲಿಯಲ್ಲಿಯೇ ಮುಂದುವರೆಸಿತು. ಅದೇ ಮಾದರಿಯಲ್ಲಿ ಡಿ.ವೈ.ಎಸ್.ಪಿ. ಕಛೇರಿ ಸ್ಥಳಾಂತರ ರದ್ದಾಗದಿದ್ದರೆ ಎಲ್ಲಾ ಪ್ರಗತಿಪರ ಸಂಘಟನೆಗಳು ಸೇರಿಕೊಂಡು ಹೋರಾಟಕ್ಕೆ ಇಳಿಯಲಿವೆ ಎಂದು ಹೇಳಿದರು.
ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಪೂಜಪ್ಪ, ತಾ.ಪಂ. ಸದಸ್ಯರಾದ ಈಟಿ ಲಿಂಗರಾಜ, ಜೆ.ಶಿವರಾಜ, ಪುರಸಭೆ ಸದಸ್ಯರಾದ ಮಂಜುನಾಥ ಜೈನ್, ಜಿ.ಗುರುಬಸಮ್ಮ, ಮುಖಂಡರಾದ ಶಂಕ್ರಪ್ಪ, ಬಿ.ರಾಘವೇಂದ್ರ, ಪರಶುರಾಮ, ಶಿರಾಜ್ ಬಾವಿಹಳ್ಳಿ, ಫಕೃದ್ದೀನ್, ಸೇರಿದಂತೆ ಇತರರು ಇದ್ದರು.