ಗ್ರಾಮೀಣ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ

ಹೊನ್ನಾಳಿ:

             ಗ್ರಾಮೀಣ ಪ್ರದೇಶದ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಎನ್ನೆಸ್ಸೆಸ್ ಶಿಬಿರಾರ್ಥಿಗಳು ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

          “ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯಡಿ ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಮಾದನಬಾವಿ ಗ್ರಾಮದ ಶ್ರೀ ಮಾಧವ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಸ್ವಚ್ಛತಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶೌಚಾಲಯಗಳನ್ನು ನಿರ್ಮಿಸಿಕೊಂಡು ತಪ್ಪದೇ ಬಳಸುವ ಮೂಲಕ ಎಲ್ಲರೂ ನೈರ್ಮಲ್ಯತೆಗೆ ಒತ್ತು ನೀಡಬೇಕು ಎಂದು ವಿನಂತಿಸಿದರು.

        ನಾನು ಈ ರೀತಿ ಕೆಲಸ ಮಾಡುತ್ತೇನೆ, ನೀವೂ ನಿಮ್ಮ ನಿಮ್ಮ ಕೆಲಸಗಳನ್ನು ಇದೇ ರೀತಿ ಮಾಡಿ ಮಾಡಿಕೊಳ್ಳಿ ಎಂದು ತಿಳಿಸುವುದೇ ಎನ್ನೆಸ್ಸೆಸ್‍ನ ಗುರಿಯಾಗಿದೆ. ಮಹಾತ್ಮ ಗಾಂಧಿ ಅವರ ನಿಲುವು ಕೂಡ ಇದೇ ಆಗಿತ್ತು. ಜನರಿಗಾಗಿ ನಾವು ಸೇವೆ ಮಾಡಬೇಕು ಎಂಬುದನ್ನು ಸಬರಮತಿ ಆಶ್ರಮದಲ್ಲಿ ಅವರು ತಿಳಿಸುತ್ತಿದ್ದರು. ಗಾಂಧಿ ಕೇವಲ ಬೇರೆಯವರಿಗೆ ಉಪದೇಶ ಮಾಡುತ್ತಿರಲಿಲ್ಲ. ಸ್ವತಃ ತಾವೂ ಕೆಲಸ ಮಾಡುತ್ತಿದ್ದರು. ಆಶ್ರಮದಲ್ಲಿನ ಶೌಚಾಲಯಗಳನ್ನೂ ಸ್ವಚ್ಛಗೊಳಿಸುತ್ತಿದ್ದರು. ಅದೇ ರೀತಿ ಮದರ್ ಥೆರೇಸಾ ಪಾಶ್ಚಾತ್ಯರಾದರೂ ಭಾರತದ ಕರ್ಮಭೂಮಿಯಲ್ಲಿ ಅನನ್ಯ ಸೇವೆ ಮಾಡುವ ಮೂಲಕ ಜನರ ಪ್ರೀತಿ ಗಳಿಸಿದರು. ಕೊಳಚೆ ಪ್ರದೇಶಗಳ ರೋಗಿಗಳು, ದೀನ-ದುರ್ಬಲರ ಸೇವೆ ಸೇವೆ ಮಾಡಿದರು. ಈ ರೀತಿ ಹಲವಾರು ವ್ಯಕ್ತಿಗಳು, ಸಾಧಕರು ಸೇವೆ ಸಲ್ಲಿಸಿದ್ದಾರೆ. ಇದು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ವಿವರಿಸಿದರು.

       ಕಾಲೇಜಿನ ಪ್ರಾಂಶುಪಾಲ ನಾರಾಯಣ ನಾಯ್ಕರ್ ಮಾತನಾಡಿ, ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಜನಜೀವನದ ಪರಿಚಯ ಮಾಡಿಸುತ್ತದೆ. ನಾವು ಸಮಾಜದಲ್ಲಿ ಹೇಗೆ ಸಹಜೀವನ ನಡೆಸಬೇಕು ಎಂಬುದನ್ನು ಯುವಜನತೆಗೆ ಕಲಿಸುತ್ತದೆ. ನಾಡಿನ ಧೀಮಂತ ನಾಯಕರಾದ ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ಅವರಂಥ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

      ನಮ್ಮ ದೇಶ ಕೇವಲ ಆರ್ಥಿಕ ರಂಗದಲ್ಲಿ ಅಭಿವೃದ್ಧಿ ಸಾಧಿಸಿದರೆ ಸಾಲದು, ಬದಲಿಗೆ ಶಿಕ್ಷಣ ರಂಗದಲ್ಲೂ ಉನ್ನತ ಸಾಧನೆ ಮಾಡಬೇಕು. ಇದು ನಮ್ಮ ವಿದ್ಯಾರ್ಥಿ ಸಮೂಹದಿಂದ ಸಾಧ್ಯ. ಹಾಗಾಗಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದು ವಿವರಿಸಿದರು.

       ಅರಬಗಟ್ಟೆ ಗ್ರಾಪಂ ಅಧ್ಯಕ್ಷ ಎಸ್.ಎಚ್. ಚನ್ನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ನೆಸ್ಸೆಸ್ ಶಿಬಿರಾರ್ಥಿಗಳು ಉತ್ತಮ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಪ್ರದೇಶದ ಬದುಕನ್ನು ಎಲ್ಲರಿಗೂ ಪರಿಚಯಿಸುವುದೇ ಶಿಬಿರದ ಗುರಿಯಾಗಿದೆ. ಹಾಗಾಗಿ, ಎಲ್ಲರೂ ಸಕ್ರಿಯವಾಗಿ ಶಿಬಿರದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

       ಶ್ರೀಗಂಧ ಯುವಕ ಸಂಘದ ಅಧ್ಯಕ್ಷ ಕರಿಬಸಪ್ಪ ಉಪನ್ಯಾಸ ನೀಡಿದರು. ಶಿಬಿರಾಧಿಕಾರಿ ಎಚ್. ಬಸವರಾಜ್, ಉಪನ್ಯಾಸಕರಾದ ಸುರೇಶ್ ಲಮಾಣಿ, ಲಕ್ಷ್ಮೀ ಇತರರು ಮಾತನಾಡಿದರು.

        ಜಿಪಂ ಸದಸ್ಯೆ ಉಮಾ ಎಂ.ಪಿ. ರಮೇಶ್, ತಾಪಂ ಸದಸ್ಯೆ ನೇತ್ರಾವತಿ ಸಂತೋಷ್, ಅರಬಗಟ್ಟೆ ಗ್ರಾಪಂ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಎಂ.ಕೆ. ಕಾಡಪ್ಪ, ಎ.ಕೆ. ಮಲ್ಲಪ್ಪ, ಫಾಲಾಕ್ಷಮ್ಮ ರುದ್ರಪ್ಪಗೌಡ, ಮಂಜುಳ ದೊಡ್ಡಬಸಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಸುಜಾತ ರೇಣುಕಪ್ಪ, ಮಾಜಿ ಸದಸ್ಯರಾದ ಗುರುನಂಜಪ್ಪ, ಎಂ.ಕೆ. ಭರಮಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಎಂ.ಕೆ. ಕಡೂರಪ್ಪ, ನಾಗರಾಜ್ ಸೇರಿದಂತೆ ಗ್ರಾಮದ ಎಲ್ಲಾ ಮುಖಂಡರು-ಯುವಕರು ಉಪಸ್ಥಿತರಿದ್ದರು.

         ಎನ್ನೆಸ್ಸೆಸ್ ಸ್ವಯಂ ಸೇವಕರು ಮಾದನಬಾವಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಶುಚಿಗೊಳಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link