ಚಹಾ ಸೇವನೆಯಿಂದ ಮಾದಕ ವಸ್ತುಗಳೆಡೆಗೆ…

ತುಮಕೂರು

ಪೋಷಕರ ಪಾತ್ರವೇನು?

    ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಿದಾಕ್ಷಣ ಪೋಷಕರ ಕರ್ತವ್ಯ ಮುಗಿಯಿತೇ? ಅಲ್ಲಿ ಏನು ಮಾಡುತ್ತಿದ್ದಾರೆ? ಎಂತಹವರ ಸಹವಾಸದಲ್ಲಿದ್ದಾರೆ? ಮನೆಯಿಂದ ಬಿಡುವ ಹಾಗೂ ಮರಳುವ ಸಮಯ ಇತ್ಯಾದಿ ವಿಷಯಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಬೇಕಾದುದು ಪೋಷಕರ ಕರ್ತವ್ಯ. ಆದರೆ ಪೋಷಕರ ಈ ಕರ್ತವ್ಯ ವಿಮುಖತೆಯೆ ಹಲವು ಗಂಡಾಂತರಗಳಿಗೆ ಕಾರಣವಾಗುತ್ತಿದೆ.

  ನಮ್ಮ ಮಕ್ಕಳು ಉತ್ತಮ ಗುಣ ನಡತೆಯುಳ್ಳವರು ಎಂಬುದು ಎಲ್ಲ ಪೋಷಕರ ವಾದ. ಆದರೆ ಈ ನಂಬಿಕೆ ಅತಿಯಾಗಬಾರದಷ್ಟೆ. ಸಹವಾಸ ದೋಷದಿಂದ ಮಕ್ಕಳು ಏನೆಲ್ಲಾ ಅಡ್ಡದಾರಿ ಹಿಡಿಯಬಹುದು ಎಂಬುದನ್ನು ನೋಡಿರುವ ಉದಾಹರಣೆಗಳು ಸಾಕಷ್ಟಿವೆ.

  ದಿನನಿತ್ಯದ ಸವಾಲಿನ ಇಂದಿನ ಬದುಕಿನಲ್ಲಿ ಉದ್ಯೋಗ, ಒತ್ತಡ ಹೀಗೆ ಹಲವು ಕಾರಣಗಳಿಂದಾಗಿ ಮಕ್ಕಳ ಕಡೆ ಎಲ್ಲ ಪೋಷಕರು ಗಮನ ಹರಿಸಲು ಸಾಧ್ಯವಾಗುತ್ತಿಲ್ಲದಿರಬಹುದು. ಆದರೂ ಕೊಂಚ ಸಮಯ ಇತ್ತ ಮನಸ್ಸು ಮಾಡಬೇಕಲ್ಲವೆ? ಮಕ್ಕಳು ಕೇಳಿದಷ್ಟು ಹಣ ಕೊಟ್ಟು ಕಾಲೇಜುಗಳಿಗೆ ಕಳುಹಿಸುವ ಮಂದಿಯೆ ಹೆಚ್ಚುತ್ತಿದ್ದಾರೆ.

    ನಾವು ಕಷ್ಟಪಟ್ಟು ಓದಿದೆವು. ನಮ್ಮ ಕಷ್ಟ ಮಕ್ಕಳಿಗೆ ಬಾರದಿರಲಿ, ಅವರು ಸುಖವಾಗಿ ಬೆಳೆಯಲಿ ಎನ್ನುವವರೆ ಹೆಚ್ಚು. ಹೀಗಾಗಿ ಹಣ ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಜೇಬಿನಲ್ಲಿ ಹಣ ಇದ್ದಾಗ ಯುವಕರ ಮನಸ್ಸು ಮರ್ಕಟವಾಗುತ್ತದೆ. ಗೆಳೆಯರು ಸಿಕ್ಕಿದೊಡನೆ ಹಣ ಖರ್ಚು ಮಾಡುವ ಚಾಳಿಗೆ ಒಳಗಾಗುತ್ತಾರೆ. ಇಂದು ಒಬ್ಬ, ನಾಳೆ ಇನ್ನೊಬ್ಬ ಹೀಗೆ ಸರದಿಯಂತೆ ಖರ್ಚು ಮಾಡುವ ಖಯಾಲಿಗೆ ವಿದ್ಯಾರ್ಥಿಗಳು ಸಿಲುಕಿಕೊಳ್ಳುತ್ತಾರೆ.

    ತುಮಕೂರಿನ ಉದಾಹರಣೆಯನ್ನೆ ತೆಗೆದುಕೊಂಡರೆ ಇದೊಂದು ಶೈಕ್ಷಣಿಕ ನಗರ. ಜಿಲ್ಲೆ ಮಾತ್ರವಲ್ಲದೆ, ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ತುಮಕೂರಿನಲ್ಲಿ ಬಂದು ನೆಲೆಸಿದ್ದಾರೆ. ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಹಲವು ಕೋರ್ಸ್‍ಗಳು ಹೊರರಾಜ್ಯದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಇನ್ನು ಇತರೆ ಕೋರ್ಸ್‍ಗಳಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಪೋಷಕರು ಮಕ್ಕಳನ್ನು ಕಳುಹಿಸುತ್ತಾರೆ.

    ಅವರೆಲ್ಲ ಇಲ್ಲಿ ರೂಂ ಬಾಡಿಗೆ ಹಿಡಿದು ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಪೋಷಕರು ಎಲ್ಲೋ ಇದ್ದರೆ ಇವರು ಇಲ್ಲಿ ಏಕಾಂಗಿ. ಈ ಏಕಾಂಗಿತನವನ್ನೆ ಬಂಡವಾಳ ಮಾಡಿಕೊಳ್ಳುವ ಯುವಕರ ಗುಂಪು ತಮ್ಮಲ್ಲಿರುವ ದುಶ್ಚಟಗಳನ್ನು ಇವರ ಮೇಲೂ ಹೇರುತ್ತದೆ. ಟೀ ಸ್ಟಾಲ್‍ಗಳಿಗೆ ತೆರಳಿ ಟೀ ಸೇವನೆ ಮಾಡುವುದು ಈ ಗುಂಪಿನವರಿಗೆ ಮೊದಲ ಮೆಟ್ಟಿಲು. ನಂತರ ಇತರೆ ಚಟಗಳು ಅಭ್ಯಾಸವಾಗಿ ಹೋಗುತ್ತವೆ.

    ಪರಸ್ಥಳಗಳಿಂದ ಬಂದವರಷ್ಟೆ ಇಂತಹ ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗದು. ಇಲ್ಲೆ ಇರುವ ಕುಟುಂಬಗಳ ಯುವಕರೂ ಈ ಗುಂಪಿನೊಳಗೆ ಸೇರ್ಪಡೆಯಾಗುತ್ತಿದ್ದಾರೆ. ಕೆಲವು ಮನೆಗಳಲ್ಲಿ ಮಕ್ಕಳ ಬಗ್ಗೆ ಗಮನ ಇಲ್ಲದಿರುವುದು, ಮನೆಗಳಲ್ಲಿ ಕೌಟುಂಬಿಕ ಸಾಮರಸ್ಯ ಇಲ್ಲದಿರುವುದು ಇತ್ಯಾದಿಗಳು ಯುವಕರ ಮೇಲೆ ಪರಿಣಾಮ ಬೀರುತ್ತವೆ. ಸಹವಾಸ ದೋಷ ಎನ್ನುವಂತೆ ಉತ್ತಮ ಹುಡುಗರು ಕೆಲವೊಮ್ಮೆ ಹಾದಿ ತಪ್ಪುವ ಸಂದರ್ಭಗಳು ಇವೆ. ಹಾದಿ ತಪ್ಪದಂತೆ ನೋಡಿಕೊಳ್ಳುವ, ಎಚ್ಚರಿಸುವ ಜವಾಬ್ದಾರಿ ಪೋಷಕರದ್ದೂ ಆಗಿರುತ್ತದೆ.

     ವಿದ್ಯಾರ್ಥಿಗಳ ಚಲನವಲನದ ಬಗ್ಗೆ ಪೋಷಕರಿಗಿಂತ ಕಾಲೇಜು ಅಧ್ಯಾಪಕರಿಗೆ ಮತ್ತು ಅಲ್ಲಿನ ಸಿಬ್ಬಂದಿಗೆ ಹೆಚ್ಚು ತಿಳಿದಿರುತ್ತದೆ. ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಮಾಡುವ ಹೊಣೆಗಾರಿಕೆ ಹೊತ್ತ ಕಾಲೇಜುಗಳು ಅವರು ಏನಾದರೂ ಆಗಲಿ ನಮ್ಮ ಬೋಧನೆ ಮುಗಿದರಷ್ಟೇ ಸಾಕು ಎಂಬ ಧೋರಣೆಗೆ ಒಳಗಾಗಿ ವಿದ್ಯಾರ್ಥಿಗಳ ಹಿತ ನಿರ್ಲಕ್ಷಿಸಲಾಗುತ್ತಿದೆ.

    ಅಡ್ಡದಾರಿ ಹಿಡಿಯುವ ವಿದ್ಯಾರ್ಥಿಗಳನ್ನು ಆರಂಭಿಕ ಹಂತದಲ್ಲೆ ಸೂಕ್ಷ್ಮವಾಗಿ ಎಚ್ಚರಿಸಿದರೆ ಭಯ ಮತ್ತು ಮುಜುಗರದಿಂದಾಗಿ ದುಶ್ಚಟಗಳಿಗೆ ಒಳಗಾಗುವುದನ್ನು ಸ್ಥಗಿತಗೊಳಿಸುವ ಸಾಧ್ಯತೆ ಇರುತ್ತದೆ. ನಿಗದಿತವಾಗಿ ಶುಲ್ಕ ಪಾವತಿಸಿಲ್ಲ ಎಂದು ಸದಾ ಹಿಂದೆ ಬೀಳುವ ಕಾಲೇಜುಗಳಿಗೆ ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ನಿಗಾವಹಿಸುವ ಕರ್ತವ್ಯವೂ ಇರಬೇಕಲ್ಲವೆ? ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವರ್ತನೆಗಳು ಸರಿ ಇಲ್ಲದಿದ್ದರೆ, ನಡವಳಿಕೆ ಬದಲಾದರೆ, ತರಗತಿಗಳಿಗೆ ಹಾಜರಾಗದಿದ್ದರೆ ಇತ್ಯಾದಿ ಚಲನವಲನಗಳ ಬಗ್ಗೆ ಕಾಲೇಜುಗಳು ಪೋಷಕರಿಗೆ ಮಾಹಿತಿ ನೀಡಬೇಕಲ್ಲವೆ?

ಇತರರಿಗೂ ಹಾನಿ

     ಒಂದು ಟೀ ಅಂಗಡಿ ಎಂದರೆ ಅಲ್ಲಿ ಕೆಲವರಷ್ಟೇ ಇರುವುದಿಲ್ಲ. ತನ್ನ ಸ್ನೇಹಿತರಂತೆ ಇತರರೂ ಅಲ್ಲಿಗೆ ಹಾಜರಾಗುತ್ತಾರೆ. ಎಲ್ಲರೂ ಸಿಗರೇಟ್ ಪ್ರಿಯರಲ್ಲ. ಕೆಲವರಿಗೆ ಅದು ಆಗುವುದೂ ಇಲ್ಲ. ಆದರೂ ಅನಿವಾರ್ಯ ಎಂಬಂತೆ ಪಕ್ಕದಲ್ಲಿ ಕುಳಿತವರ ಸಿಗರೇಟ್ ಹೊಗೆಯನ್ನು ಸೇವಿಸಬೇಕು. ಪ್ರಶ್ನಿಸಿದರೆ ಅದೂ ಆಪಾಯ. ಇದನ್ನರಿತ ಸುಸಂಸ್ಕøತರು ಬೇಗನೆ ಟೀ ಕುಡಿದು ಅಲ್ಲಿಂದ ಕಳಚಿಕೊಳ್ಳುತ್ತಾರೆ.

     ಮತ್ತೆ ಕೆಲವರು ಹೀಗೆಲ್ಲಾ ಬೇರೆಯವರಿಗೆ ತೊಂದರೆ ಕೊಡಬಾರದು ಎಂದು ಉಪದೇಶ ನೀಡುತ್ತಾರೆ. ಸಕಾರಾತ್ಮಕವಾಗಿ ಸ್ವೀಕರಿಸಿದರೆ ಯಾವುದೇ ತೊಂದರೆ ಇಲ್ಲ. ಆದರೆ ಅಲ್ಲಿ ಮಾತಿಗೆ ಮಾತು ಬೆಳೆದರೆ ಒಂದು ಬಾರ್‍ನಲ್ಲಿ ನಡೆಯುವ ಗಲಾಟೆಗಿಂತ ಹೆಚ್ಚು ರಾದ್ದಾಂತ ಇಲ್ಲಿ ನಡೆಯುತ್ತದೆ. ಅಷ್ಟೇ ಅಲ್ಲ, ಸುತ್ತಮುತ್ತ ಇರುವವರಿಗೆ ಆರೋಗ್ಯ ಹಾನಿಯಾಗುತ್ತದೆ. ಸಿಗರೇಟ್ ಧೂಮ ಸೇದುವವರಿಗಿಂತ ಹೆಚ್ಚಾಗಿ ಹೊಗೆ ಕುಡಿಯುವವರಿಗೆ ಹೆಚ್ಚು ಅಪಾಯಕಾರಿ ಎಂಬುದನ್ನು ಈಗಾಗಲೆ ವರದಿಗಳು ತಿಳಿಸಿವೆ. ಸಿಗರೇಟ್ ಮತ್ತಿತರ ಮಾದಕ ದ್ರವ್ಯ ಸೇವಿಸುವ ಸ್ಥಳಗಳನ್ನು ಒಮ್ಮೆ ಗಮನಿಸಿ.

   ಅಲ್ಲಿ ಕುಳಿತುಕೊಳ್ಳಲಾಗದಷ್ಟು ಅಸಹ್ಯಕರ ಮನೋಭಾವ ಉಂಟಾಗುತ್ತದೆ. ಸಿಗರೇಟಿನ ತುಂಡುಗಳು ಚಲ್ಲಾಪಿಲ್ಲಿಯಾಗಿರುತ್ತವೆ. ಮೇಲೆ ಧೂಮ, ಕೆಳಗೆ ಕಸ, ಟೇಬಲ್ ಮೇಲೆಯೂ ಸಿಗರೇಟ್ ತುಂಡುಗಳು, ಅದರ ಪಕ್ಕದಲ್ಲೇ ಕಾಫಿ ಲೋಟ… ಇವೆಲ್ಲವನ್ನೂ ನೋಡಿದರೆ ಊಟವೂ ಸೇರುವುದಿಲ್ಲ. ಆದರೆ ಅಲ್ಲಿರುವವರು ಮಾತ್ರ ಏನೂ ಆಗದಂತೆ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap