ಜಿಲ್ಲೆಯ ಮತದಾರರು ಪ್ರಬುದ್ದರು: ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ

ಕೊರಟಗೆರೆ

     ಹಾಸನವೇ ನನ್ನ ಜನ್ಮ ಮತ್ತು ಕರ್ಮ ಭೂಮಿ ಎನ್ನುತ್ತಿದ್ದ ದೇವೆಗೌಡರಿಗೆ 86 ನೆ ವಯಸ್ಸಿನಲ್ಲಿ ಜನ ಸೇವೆ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭಿವೃದ್ದಿಯನ್ನು ಮಾಡಲು ಸಾಧ್ಯವಿಲ್ಲದ ಕಾರಣ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ತುಮಕೂರಿನ ಅಭಿವೃದ್ದಿಗೆ ಮಾಜಿ ಸಂಸದ ಜಿಎಸ್ ಬಸವರಾಜುರವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುತ್ತಾರೆ ಎಂದು ಮಾಜಿ ಸಚಿವ ರಾಜ್ಯ ಬಿಜೆಪಿ ನಾಯಕ ವಿ.ಸೋಮಣ್ಣ ತಿಳಿಸಿದರು.

        ಅವರು ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ತುಮಕೂರು ಜಿಲ್ಲೆಯ ಮತದಾರರು ಸ್ವಾಭಿಮಾನ ಹಾಗೂ ಪ್ರಬುದ್ದ ಮತದಾರರಾಗಿದ್ದು, ಜಿಲ್ಲೆಗೆ ಯಾವ ಅಭ್ಯರ್ಥಿ ಜಯ ಗಳಿಸಿದರೆ ಒಳಿತಾಗುತ್ತದೆ ಎಂಬ ಅಂಶವನ್ನು ಮನಗಂಡಿದ್ದು, ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನೀರು ಹೋರಾಟಗಾರ ಅಭಿವೃದ್ದಿ ವ್ಯಕ್ತಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಅವರಿಗೆ ಮತ ನೀಡಿದರೆ ತುಮಕೂರು ಲೋಕಸಭಾ ಕ್ಷೇತ್ರ ಸರ್ವಾಂಗೀಣವಾಗಿ ಅಭಿವೃದ್ದಿಯಾಗುತ್ತದೆ ಎಂಬ ಅಂಶವನ್ನು ಇಲ್ಲಿನ ಮತದಾರರು ಮನಗಂಡಿದ್ದಾರೆ.

       ದೇವೆಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲೆ ಇದು ನನ್ನ ಕಡೆಯ ಚುನಾವಣೆ ಎಂದವರು ತುಮಕೂರಿಗೆ ಏಕೆ ಬಂದರೋ ತಿಳಿಯುತ್ತಿಲ್ಲ ಎಂದ ಅವರು, ಮಂಡ್ಯ ಲೋಕಸಭಾ ಕ್ಷೇತ್ರವೂ ರಾಜಕೀಯ ದೊಂಬರಾಟವಾಗಿದ್ದು, ಮುಖ್ಯಮಂತ್ರಿಗಳು ತಮ್ಮ ಮಗನ ಗೆಲುವಿಗೆ ಈ ರೀತಿಯ ಕೆಳಮಟ್ಟದ ರಾಜಕೀಯ ಮಾಡಬಾರದಿತ್ತು, ಒಬ್ಬ ಹೆಣ್ಣು ಮಗಳ ಮೇಲೆ ಈ ರೀತಿಯ ದೌರ್ಜನ್ಯ ಮತ್ತು ನಿಂದನೆ ಇಡೀ ರಾಜ್ಯವೇ ನೋಡುತ್ತಿದ್ದು, ಸಚಿವರಾದ ಪುಟ್ಟರಾಜು ನೇತಾರರ ರೀತಿಯಲ್ಲಿ ಮಾತನಾಡುತ್ತಿದ್ದು ಹಿಂದಿನದು ಮರೆಯಬಾರದು. ಮಂಡ್ಯ ಮತ್ತು ಇತರೆ ಕಡೆ ಗುತ್ತಿಗೆದಾರರ ಮೇಲೆ ನಡೆದ ಐಟಿ ದಾಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ಹೇಳಿಕೆಗಳು ರಾಜ್ಯದ ಜನರಿಗೆ ಅನುಮಾನ ಬರುವ ರೀತಿಯಲ್ಲಿದೆ. ನಮ್ಮ ಮೇಲೂ ಸಹ ಐಟಿ ದಾಳಿಯಾಗಿದ್ದು ಹೀಗೆ ವರ್ತಿಸಿರಲಿಲ್ಲ ಎಂದರು.

        ಕಾಂಗ್ರೆಸ್ ಪಕ್ಷದ ದಲಿತ ನಾಯಕರಾದ ಡಾ.ಜಿ ಪರಮೇಶ್ವರ್‍ರವರು ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದ ಮೇಲೆ ಪಕ್ಷದಲ್ಲಿ ಶಕ್ತಿಹೀನರಾಗುತ್ತಿದ್ದು, ಅವರನ್ನೆ ನಂಬಿಕೊಂಡಿದ್ದ ಹಾಲಿ ಲೋಕಸಭಾ ಸದಸ್ಯ ಮುದ್ದಹನುಮೆಗೌಡರಿಗೆ ತುಮಕೂರು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ಮುಂದೆ ಒಂದು ವೇಳೆ ದೇವೆಗೌಡರು ಗೆದ್ದರೆ ಪರಮೇಶ್ವರ್ ರಾಜಕೀಯ ಬಿಟ್ಟು ತಮ್ಮ ಸಂಸ್ಥೆಗಳನ್ನು ನಡೆಸಿಕೊಂಡು ಇರಬೇಕಾಗುತ್ತದೆ.

        ಮಾಜಿ ಸಚಿವ ಜಯಚಂದ್ರರಿಗೆ ಹಲವಾರು ಮುಖಗಳಿದ್ದು ಕಾಲಕ್ಕೆ ತಕ್ಕಂತೆ ಮುಖವಾಡ ಬದಲಾಯಿಸುತ್ತಾರೆ. ಮುಂದಿನ ದಿನಗಳಲ್ಲಿ ಶಾಸಕ ಸತ್ಯನಾರಾಯಣ್ ಅವರನ್ನು ಸಮ್ಮಿಶ್ರ ಅಭ್ಯರ್ಥಿಯಾಗಿ ಶಿರಾ ವಿಧಾನಸಭೆಗೆ ನಿಲ್ಲಿಸಿ, ಜಯಚಂದ್ರ ಅವರು ಶಿರಾದಲ್ಲಿ ಯಾವುದಾದರೊಂದು ಮಠ ನೋಡಿಕೊಳ್ಳುವುದು ಒಳ್ಳೆಯದು. ರಾಜಕೀಯದಲ್ಲಿ ಯಾರನ್ನೋ ಮೆಚ್ಚಿಸಲು ದೇಶದಲ್ಲಿ ಶಿಸ್ತು ಮತ್ತು ಸೇವೆ ಸಲ್ಲಿಸುತ್ತಿರುವ ಆರ್‍ಎಸ್‍ಎಸ್ ಸಂಸ್ಥೆಯನ್ನು ದೇಶದ್ರೋಹಕ್ಕೆ ಹೋಲಿಸುವುದು ದೇಶದ್ರೋಹ ಮಾಡುತ್ತಿರುವ ಸಂಸ್ಥೆಗಳನ್ನು ಕೊಂಡಾಡುವುದು ಒಳ್ಳೆಯದಲ್ಲ ಎಂದರು.

        ಪತ್ರಿಕಾ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರುಗಳಾದ ಚಂದ್ರನಾಯಕ್, ಹೆಬ್ಬಾಕರವಿ, ಗಂಗಹನುಮಯ್ಯ, ನಂದೀಶ್, ಪ್ರದೀಪ್‍ಕುಮಾರ್, ಪವನ್‍ಕುಮಾರ್, ತಿಮ್ಮಜ್ಜ, ಪ್ರಸನ್ನಕುಮಾರ್, ಸಂಜಯ್, ಸಂತೋಷ್, ಕೋಟೆರಂಗನಾಥ್ ಸೇರಿದಂತೆ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap