ಪ್ರತಿಷ್ಠೆಯ ತುಮಕೂರು ಕಣದಲ್ಲಿ ನೇರ ಹಣಾಹಣಿ..!!!

ತುಮಕೂರು:

ಮೈತ್ರಿ ಗೊಂದಲ:

         ಸಭೆಗಳಲ್ಲಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳುವುದೇ ಬೇರೆ, ಸ್ಥಳೀಯವಾಗಿ ಇರುವ ರಾಜಕೀಯವೇ ಬೇರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಭೆಗಳಲ್ಲಿ ಮೈತ್ರಿಯ ನಗೆ ಬೀರಿದಂತೆ ಸ್ಥಳೀಯವಾಗಿ ಪ್ರಚಾರ ನಡೆಸಲು ಸಾಧ್ಯವಾಗದು. ನಿನ್ನೆ ಮೊನ್ನೆಯವರೆಗೂ ನಡೆದ ಚುನಾವಣೆಗಳಲ್ಲಿ ಹಾವು-ಮುಂಗುಸಿಗಳಂತೆ ಕಚ್ಚಾಡಿ ರಾಜಕೀಯ ರಂಪಾಟ ಮಾಡಿಕೊಂಡಿದ್ದ ಸ್ಥಳೀಯ ಮುಖಂಡರು ಜೊತೆಯಾಗಿ ಪ್ರಚಾರ ಮಾಡಲು ಸಾಧ್ಯವೇ? ಕೆಲವು ಕಡೆ ಕಾಂಗ್ರೆಸ್ ಮತ್ತೆ ಕೆಲವು ಕಡೆ ಜೆಡಿಎಸ್ ಹೀಗೆ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿರುವುದೇ ಇದಕ್ಕೊಂದು ಉದಾಹರಣೆ.

         ಕಳೆದ ಚುನಾವಣೆಯಲ್ಲಿ ಆ ಪಕ್ಷದ ವಿರುದ್ಧ ಮಾತನಾಡಿ ಮತ ಕೇಳಿದ್ದೆವು. ಈಗ ಅದನ್ನು ಮರೆತು ಅವರೊಂದಿಗೆ ಮತ ಪ್ರಚಾರ ನಡೆಸಲು ಸಾಧ್ಯವೆ ಎಂಬ ಮಾತುಗಳು ಮುಖಂಡರುಗಳಿಂದಲೇ ಕೇಳಿಬರುತ್ತಿದೆ. ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಕಾಣಿಸಿಕೊಳ್ಳುವಂತಹ ಮೈತ್ರಿ ಗ್ರಾಮೀಣ ಮಟ್ಟದಲ್ಲಿ ಅಷ್ಟು ಸುಲಭ ಸಾಧ್ಯವಲ್ಲ ಎಂಬ ಮಾತುಗಳಲ್ಲಿ ಸತ್ಯವಿದೆ. ಹೀಗಾದರೆ ಮುಂದೆ ನಮ್ಮ ಭವಿಷ್ಯವೇನು ಎಂದು ಪ್ರಶ್ನಿಸುವ ಸ್ಥಳೀಯ ಮುಖಂಡರ ಆತಂಕಗಳು ಕೆಲವರಿಗಷ್ಟೇ ಅರ್ಥವಾಗಲು ಸಾಧ್ಯ. ಪಕ್ಷ ಹಾಗೂ ಆ ಭಾಗದ ಮುಖಂಡರ ಹೇಳಿಕೆ ಅನುಸರಿಸಿ ಚುನಾವಣಾ ಪ್ರಚಾರ ನಡೆದಿವೆ.

ಪ್ರಚಾರ ಸುಲಭವಲ್ಲ:

         ವಿಧಾನಸಭಾ ಚುನಾವಣೆಗೂ, ಲೋಕಸಭಾ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಒಂದು ವಿಧಾನಸಭಾ ಚುನಾವಣೆಯಲ್ಲಿ 6 ರಿಂದ 7 ಹೋಬಳಿಗಳು ಇರಬಹುದು. ಚುನಾವಣೆಯ ವೇಳೆಗೆ ಅಭ್ಯರ್ಥಿ ಎರಡು ಬಾರಿ ಸುತ್ತಬಹುದು. ಲೋಕಸಭಾ ಚುನಾವಣೆಯಲ್ಲಿ ಇದು ಸಾಧ್ಯವಾಗದ ಮಾತು.

         8 ಕ್ಷೇತ್ರಗಳನ್ನು ಸುತ್ತಿಬರುವುದೆಂದರೆ ಸುಲಭದ ಮಾತಲ್ಲ. ಅಭ್ಯರ್ಥಿಯ ಪರವಾಗಿ ಆಯಾ ತಾಲ್ಲೂಕಿನ, ಸ್ಥಳೀಯ ಮುಖಂಡರು ಜವಾಬ್ದಾರಿ ಹೊರಬೇಕು. ಸುಖಾಸುಮ್ಮನೆ ಯಾರೂ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ನಿತ್ಯದ ಖರ್ಚಿಗೆ ಹಣ ಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣದ ಕೈ ಬದಲಾವಣೆ ಸೋಂಪಾಗಿಯೇ ನಡೆದಿತ್ತು. ಅದೇ ನಿರೀಕ್ಷೆಯಲ್ಲಿ ಈಗಲೂ ಇದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಹಣ ಇಲ್ಲದೆ ಪ್ರಚಾರ ಇತ್ಯಾದಿಗಳು ನಡೆಯುವುದಾದರೂ ಹೇಗೆ ಎಂಬುದು ಅವರ ಚಿಂತೆ.

         ಮೈತ್ರಿಯ ಎರಡೂ ಪಕ್ಷಗಳಲ್ಲಿ ಈ ಕೊರತೆ ಕಂಡುಬರುತ್ತಿದೆ. ಕಾಂಗ್ರೆಸ್ ವಲಯದಲ್ಲಂತೂ ಈ ಅಸಮಾಧಾನ ವ್ಯಾಪಕವಾಗಿದೆ. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಚುರುಕು ಪಡೆದಿಲ್ಲದಿರುವುದಕ್ಕೆ ಇದೇ ಕಾರಣ ಎನ್ನುತ್ತಾರೆ ಕೆಲವರು.

          ಮುಖಂಡರಾದಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರು ಸಹ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಈ ಬಾರಿಯ ಚುನಾವಣೆಯಲ್ಲಿ ಕಂಡುಬರುತ್ತಿದೆ. ಮನೆಯಿಂದ ಹೊರಟ ಒಬ್ಬ ಕಾರ್ಯಕರ್ತನಿಗೆ ಕನಿಷ್ಠ 500 ರೂ.ಗಳಿಂದ 1000 ರೂ.ಗಳವರೆಗೆ ಖರ್ಚಾಗುತ್ತದೆ. ಇಷ್ಟು ವೆಚ್ಚವನ್ನು ಸರಿದೂಗಿಸುವ ಹೊಣೆಗಾರಿಕೆ ಮುಖಂಡರ ಮೇಲೆ ಬಿದ್ದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಈ ಕೊರತೆ ಕಾಣುತ್ತಿದ್ದು, ಇದೇ ಕಾರಣಕ್ಕೆ ಕೆಲವು ಮುಖಂಡರು ತಟಸ್ಥರಾಗಿ ಉಳಿದಿರುವುದು ಕಂಡುಬರುತ್ತಿದೆ.

           ಆದರೆ ಬಿಜೆಪಿ ವಲಯದಲ್ಲಿ ಕಂಡುಬರುತ್ತಿರುವ ಚಿತ್ರಣವೇ ಬೇರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಒಂದು ರೀತಿಯಲ್ಲಿ ವ್ಯವಸ್ಥಿತ ಪ್ರಚಾರ ಬಿಜೆಪಿ ವಲಯದಲ್ಲಿ ಕಂಡುಬರುತ್ತಿದೆ. ಮೈತ್ರಿ ವಲಯದ ಮುಖಂಡರುಗಳು ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ಮತ್ತು ಸಭೆಗಳಲ್ಲಿ ಕಾಣಿಸಿಕೊಂಡರೆ, ಬಿಜೆಪಿ ಮುಖಂಡರುಗಳು ಕ್ಷೇತ್ರವಾರು ಪರ್ಯಟನೆಯಲ್ಲಿ ಮುಳುಗಿರುವುದು ಕಂಡುಬರುತ್ತಿದೆ.

ಜಾತಿವಾರು ಲೆಕ್ಕಾಚಾರ:

         ಬಿಜೆಪಿ ಮತ್ತು ಜೆಡಿಎಸ್‍ಗೆ ತನ್ನದೇ ಆದ ಮೂಲ ಮತಗಳಿವೆ. ಮೋದಿ ಮೇನಿಯಾ ಈ ಬಾರಿ ಹೇಗೆ ಕೆಲಸ ಮಾಡುತ್ತದೆ ಎಂಬುದು ಇನ್ನೂ ನಿಗೂಢ. ಮೋದಿ ಹೆಸರು ಬಿಜೆಪಿ ಮತಗಳಾಗಿ ಪರಿವರ್ತಿತವಾಗುತ್ತವೆಯಾ ಎಂಬುದು ಸಹ ಗಮನಿಸಬೇಕಾದ ಅಂಶ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ವ್ಯಾಪಕವಾಗಿತ್ತು. ಈ ಬಾರಿ ಸಾಮಾಜಿಕ ಜಾಲತಾಣಗಳು ಹೆಚ್ಚು ಸದ್ದು ಮಾಡುತ್ತಿವೆ. ಮೋದಿ ಪರವಾಗಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೂ ಅದಕ್ಕೆ ತದ್ವಿರುದ್ಧ ಪ್ರತಿಕ್ರಿಯೆಗಳು ಅಷ್ಟೇ ವೇಗವಾಗಿ ವ್ಯಕ್ತವಾಗುತ್ತಿವೆ.

        ಜಾತಿವಾರು ಲೆಕ್ಕಾಚಾರದಂತೆ ಇಬ್ಬರು ಅಭ್ಯರ್ಥಿಗಳು ಇತರೆ ವರ್ಗಗಳ ಮತಗಳನ್ನು ಹೆಚ್ಚು ಆಶ್ರಯಿಸಿದ್ದಾರೆ. ಸಿದ್ದರಾಮಯ್ಯ ಅವರ ಮುಖಂಡತ್ವ ಒಪ್ಪಿಕೊಂಡಿರುವ ಮತದಾರ ವರ್ಗ, ಪರಿಶಿಷ್ಟ ಜಾತಿ, ವರ್ಗ, ಇತರೆ ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿ ಯಾರ ಪಾಲಾಗುತ್ತವೆ ಎಂಬುದರ ಮೇಲೆ ಫಲಿತಾಂಶದ ಭವಿಷ್ಯ ಅಡಗಿದೆ. ಇದಕ್ಕಾಗಿಯೇ ಈ ಬಾರಿ ಎರಡೂ ಪಕ್ಷಗಳು ಜಾತಿವಾರು, ಸಮುದಾಯವರು ಸಭೆಗಳನ್ನು ನಡೆಸುವತ್ತ ಹೆಚ್ಚು ಆಸಕ್ತಿ ವಹಿಸಿವೆ.

        ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳಿರುವ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಹೊರತುಪಡಿಸಿ ಎಲ್ಲರಲ್ಲೂ ಸಾಮಾಜಿಕ ಜಾಲತಾಣ ಬಳಕೆಯ ಅರಿವಿಲ್ಲ. ಇಂತಹ ವರ್ಗ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಸಹ ಇಲ್ಲಿ ಗಮನಾರ್ಹ. ಏಕೆಂದರೆ, ಸಾಂಪ್ರದಾಯಿಕ ಮತಗಳು ಕೆಲವೊಂದು ಪಕ್ಷಕ್ಕೆ ನಿರ್ಧರಿತವಾಗಿರುತ್ತವೆ ಎಂಬುದು ಈವರೆಗಿನ ಚುನಾವಣೆಗಳ ಲೆಕ್ಕಾಚಾರ.

ಕಡೆಯ ದಿನಗಳೇ ನಿರ್ಣಾಯಕ:

       ಏನೆಲ್ಲಾ ಚುನಾವಣಾ ಪ್ರಚಾರಗಳು ನಡೆದರೂ ಅಭ್ಯರ್ಥಿಯ ಫಲಿತಾಂಶ ನಿರ್ಧರಿತವಾಗುವುದು ಚುನಾವಣೆಗೆ ಕೊನೆಯ ಎರಡು ದಿನಗಳಲ್ಲಿ. ಇದೇ ನಿರ್ಣಾಯಕ ಘಟ್ಟ. ಅಂದುಕೊಂಡ ಲೆಕ್ಕಾಚಾರಗಳನ್ನೆಲ್ಲಾ ಮತದಾರ ಉಲ್ಟಾಪಲ್ಟಾ ಮಾಡುವುದು ಈ ಎರಡು ದಿನಗಳಲ್ಲೇ ಎಂಬುದು ನಿರ್ವಿವಾದದ ಸಂಗತಿ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap