ಬ್ಯಾಡಗಿ:
ಮೈತ್ರಿಯ ನೆಪದಲ್ಲಿ 2 ಕ್ಷೇತ್ರ ಗೆಲ್ಲಲಾಗದ ಜೆಡಿಎಸ್‍ಗೆ 8 ಸ್ಥಾನ ಬಿಟ್ಟುಕೊಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಬಲ ಕುಗ್ಗಿದೆ ಎಂಬುದನ್ನು ಒಪ್ಪಿಕೊಂಡಿದೆ, ಆ ಕಾರಣಕ್ಕಾಗಿ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರೆಸಿದ್ದು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಉಡುಪಿಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಲು
ತಿಳಿಸಿದ್ದೇ ಇದಕ್ಕೆ ಸಾಕ್ಷಿ, ಹಾವೇರಿ ಸೇರಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವ ಮೂಲಕ ಮೋದಿಯ ವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ನಿಶ್ಚಿತ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸಾಂದರ್ಭಿಕ ಮದುವೆಯಾಗಿದ್ದು, ಅವಸರದಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ, ವಿಧಾನಸಭೆ ಚುನಾವಣೆಯಲ್ಲಿ ಕೇವಲ 39 ಕ್ಷೇತ್ರಗಳಲ್ಲಿ ಗೆದ್ದಂತಹ ಜೆಡಿಎಸ್‍ಗೆ ಅಧಿಕಾರ ಕೊಟ್ಟು ಕಾಂಗ್ರೆಸ್ ಶಕ್ತಿ ಕೈಹಿಸುಕಿಕೊಳ್ಳುತ್ತಿದೆ, ಲೋಕಸಭೆ ಚುನಾವಣೆ ಬಳಿಕ ರಾಜಕೀಯ ಮನ್ವಂತರ ನಡೆಯಲಿದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ, ಬಳಿಕ ಇವೆರಡೂ ಪಕ್ಷಗಳ ನಡುವೆ ವಿಚ್ಛೇಧನ ನಿಶ್ಚಿತ ಎಂದರು.
ಸೋಲಿನ ಭಯದಿಂದ ಮೂವರು ಸುಮಲತ: ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವ ಮೂಲಕ ಮಂಡ್ಯದಲ್ಲಿ ಭದ್ರಕೋಟೆ ಮಾಡಿದ್ದ ನಟ ದಿ.ಅಂಬರೀಷ್ ಪತ್ನಿ ಸುಮಲತ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ರಾಜ್ಯದ ಯಾವೊಬ್ಬ ಮಹಿಳೆಯೂ ಕ್ಷಮಿಸುವುದಿಲ್ಲ, ಕುತಂತ್ರ ರಾಜಕಾರಣಕ್ಕೆ ಇನ್ನೊಂದು ಹೆಸರೇ ಜೆಡಿಎಸ್, ಮಂಡ್ಯದಲ್ಲಿ ಸೋಲಿನ ಭಯದಿಂದ ಸುಮಲತ ಎಂಬ ಹೆಸರಿನ ಮೂವರನ್ನು ಕಣಕ್ಕಿಳಿಸಿದ್ದು, ಇನ್ನೂ ಕ್ಷೇತ್ರ ಕಳೆದುಕೊಂಡಿರುವ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರಾದರೂ ಸುಮ್ಮನಿರಲು ಹೇಗೆ ಸಾಧ್ಯ ಪ್ರಶ್ನಿಸಿದ ಅವರು, ಜೆಡಿಎಸ್‍ಗೆ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.
ಜೆಡಿಎಸ್‍ನ ಪಾರ್ಟ ಟೈಮ್ ವರ್ಕರ್ಸ್:ಇಲ್ಲಿಯವರೆಗೂ ಅಪ್ಪ, ಮಕ್ಕಳ ಪಕ್ಷವಾಗಿದ್ದ ಜೆಡಿಎಸ್ ಇದೀಗ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪಕ್ಷವಾಗಿದೆ, ಚುನಾವಣೆ ಬಂದಾಗ ಕಾರ್ಯಕರ್ತರು ಕೆಲಸ ಮಾಡಬೇಕು ಅಧಿಕಾರ ಸಿಕ್ಕ ಬಳಿಕ ಅವರೆಲ್ಲಾ ಮನೆ ಸೇರಬೇಕು ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಪಾರ್ಟ ಟೈಮ್ ಕೆಲಸಗಾರರಾಗಿದ್ದಾರೆ, ಭಾರತೀಯ ಜನತಾ ಪಕ್ಷಕ್ಕೆ ಕುಟುಂಬ ರಾಜಕಾರಣ ಗೊತ್ತಿಲ್ಲ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ತೇಜಸ್ವಿ ಸೂರ್ಯ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ನಿಷ್ಟೆಯಿಂದ ಕೆಲಸ ಮಾಡುವವರ ಹಿಂದೆ ಪಕ್ಷವಿರುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಚರ್ಚೆಯ ವಿಷಯವೇ ಅಲ್ಲ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅನಂತಕುಮಾರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಿ ಮಹಿಳೆಯೊಬ್ಬಳಿಗೆ ಅನ್ಯಾಯ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಕೆಲಸ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡುತ್ತಿವೆ, ದೇಶದ ರಕ್ಷಣಾ ಸಚಿವೆ ಮಹಿಳೆ, ವಿದೇಶಾಂಗ ಸಚಿವೆ ಮಹಿಳೆ, ಲೋಕಸಭೆ ಅಧ್ಯಕ್ಷೆ ಮಹಿಳೆ, ರಾಜ್ಯದ ವಿಚಾರಕ್ಕೆ ಬಂದರೆ ಮಹಿಳೆ ಎಂಬ ಕಾರಣಕ್ಕೆ ಮಂಡ್ಯದಲ್ಲಿ ಸುಮಲತ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.
ಅನಂತಕುಮಾರ ಪತ್ನಿಯೇ ಸ್ಪಷ್ಟಪಡಿಸಿದ್ದಾರೆ: ಟಿಕೆಟ್ ಕೈ ತಪ್ಪಿರುವ ಕುರಿತು ಸ್ವತಃ ಅನಂತಕುಮಾರ ಪತ್ನಿ ತೇಜಸ್ವಿನಿ ಅವರೇ, ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿಕೆ ನೀಡುವ ಮೂಲಕ ನಿಸ್ವಾರ್ಥತನವನ್ನು ಪ್ರದರ್ಶಿಸಿದ್ದಲ್ಲದೇ ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧವೆಂಬುದನ್ನು ಸಾಬೀತು ಮಾಡಿದ್ದಾರೆ, ಆದರೆ ಎಲ್ಲೆಡೆ ಸೋಲುವ ಲಕ್ಷಣಗಳನ್ನು ಅರಿತಿರುವ ವಿಪಕ್ಷಗಳು ಇದೊಂದು ಚುನಾವಣಾ ಚರ್ಚೆಯ ವಿಷಯವೇ ಅಲ್ಲದಿದ್ದರೂ, ಬಿಜೆಪಿಯ ಆಂತರಿಕ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವಿರೇಂದ್ರ ಶೆಟ್ಟರ, ಮುಖಂಡರಾದ ಸುಮಂಗಳಾ ಪಟ್ಟಣಶೆಟ್ಟಿ, ರಾಮಣ್ಣ ಕೊಡಿಹಳ್ಳಿ, ಅನುಸುಯಾ ಕುಳೇನೂರ, ಸುರೇಶ ಯತ್ನಳ್ಳಿ, ಗುಡ್ಡಪ್ಪ ಕಾಕೋಳ, ಚಂದ್ರಣ್ಣ ಮುಚ್ಚಟ್ಟಿ, ಸುಧಾ ಕಳ್ಳಿಹಾಳ, ದ್ರಾಕ್ಷಾಯಣಮ್ಮ ಪಾಟೀಲ, ಹನುಮಂತಪ್ಪ ಕುರಡಮ್ಮನವರ, ವಿಶ್ವನಾಥ ಕೊಂಚಿಗೇರಿ, ಸಿದ್ದರಾಜು ಕಲಕೋಟಿ, ಎಸ್.ಎನ್.ಯಮನಕ್ಕನವರ, ಪರುಶುರಾಮ ಉಜನಿಕೊಪ್ಪ, ಸುರೇಶ ಉದ್ಯೋಗಣ್ಣನವರ, ಎಸ್.ಬಿ.ಹೊಸಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ