ಹೊಸಪೇಟೆ :
ರಾಜ್ಯದ 15 ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಬಿಜೆಪಿ ಹಣ, ಅಧಿಕಾರ, ಚಿನ್ನದ ಉಂಗುರ, ಜಾತಿ ಆಧಾರಿತ ಮತ ಕೇಳವುದು. ಸಚಿವ ಸ್ಥಾನ ಸೇರಿದಂತೆ ಎಲ್ಲಾ ರೀತಿಯ ಆಮೀಷ ಒಡ್ಡುತ್ತಿದ್ದರೂ ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಆಯೋಗ ಇದೆಯೋ ಸತ್ತಿದೆಯೋ ಎಂಬ ಭಾವನೆ ಜನರಲ್ಲಿ ಉಂಟಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ಇಲ್ಲಿನ ಪರ್ವಾಜ್ ಪ್ಲಾಜಾದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಹಣ, ಅಧಿಕಾರ, ಉಂಗುರ, ಜಾತಿ ಆಧಾರಿತ ಮತ ಕೇಳುವುದು ಹಾಗು ಸಚಿವ ಸ್ಥಾನದ ಭರವಸೆ ನೀಡುತ್ತಿದ್ದಾರೆ. ಇದೆಲ್ಲ ಪಕ್ಕಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಇದನ್ನೆಲ್ಲ ನೋಡಿಕೊಂಡು ಆಯೋಗ ಸುಮ್ಮನೆ ಕುಳಿತುಕೊಂಡಿರುವುದನ್ನು ನೋಡಿದರೆ ಆಯೋಗ ಇದೆಯೋ ಸತ್ತಿದೆಯೋ ಭಾವನೆ ಮೂಡುತ್ತಿದೆ ಎಂದರು.
ಚುನಾವಣೆ ಆಯೋಗ ಸೇರಿದಂತೆ ಇನ್ನಿತರ ಸಾಂವಿಧಾನಿಕ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಇದರಿಂದ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹಾಗು ಸಚಿವ ಮಾಧುಸ್ವಾಮಿ ಜವಾಬ್ದಾರಿ ಸ್ಥಾನದಲ್ಲಿರುವವರು, ಸಂವಿಧಾನ, ಪ್ರಜಾಪ್ರಭುತ್ವ ಕಾಪಾಡಬೇಕಾದವರು, ಈ ರೀತಿಯಾಗಿ ಹೋದಲ್ಲೆಲ್ಲ ವೀರಶೈವರ ಮತಗಳು ಬಿಜೆಪಿ ಬಿಟ್ಟು ಒಂದು ಕೂಡ ಆಚೆ ಹೋಗಬಾರದು ಎಂದು ಬಹಿರಂಗವಾಗಿ ಹೇಳುತ್ತಿದ್ದರೆ ಚುನಾವಣೆ ಆಯೋಗ ಏನು ಮಾಡುತ್ತಿದೆ. ಇವರ ನಾಟಕ ಜನಗಳಿಗೆ ಗೊತ್ತಾಗಲ್ವಾ ? ಈ ಕುರಿತು ನಾವು ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಕೊಟ್ಟು 5-6 ದಿನಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಹೇಳಿದರು.
ಸಿಂಗ್ ವಿರುದ್ದ ವಾಗ್ದಾಳಿ :
ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಆನಂದಸಿಂಗ್ ಮೂರು ಬಾರಿ ಶಾಸಕರಾಗಿ ಮಾಡಿದ ಸಾಧನೆ ಎಂದರೆ ಅಕ್ರಮ ಗಣಿಗಾರಿಕೆ ಮಾಡಿ ಜೈಲಿಗೆ ಹೋಗಿದ್ದು, ತನ್ನ ಭವ್ಯ ಬಂಗಲೆಗೆ ಧೂಳು ಹೊಗೆ ಬರುತ್ತೆ ಅಂತಾ ಸಕ್ಕರೆ ಕಾರ್ಖಾನೆ ಮುಚ್ಚಿದ್ದು, ನಗರ ಅಭಿವೃದ್ದಿ ಕಡೆಗಣಿಸಿ ನೂರಾರು ಕೋಟಿ ಹಣದಲ್ಲಿ ಅರಮನೆ ಕಟ್ಟಿಸಿಕೊಂಡಿದ್ದು ಬಿಟ್ಟರೆ ಬೇರೆ ಏನು ಕೆಲಸ ಮಾಡಿಲ್ಲ. ಇಂಥವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದರು.
ವಿಜಯನಗರ ಕ್ಷೇತ್ರದ ಚುನಾವಣಾ ಉಸ್ತುವಾರ ಹಾಗು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ನಿನ್ನೆ ನಗರದಲ್ಲಿ ವೀರಶೈವ ಸಮಾಜದ ಸಮಾವೇಶದಲ್ಲಿ ಸಚಿವರಾದ ಮಾಧುಸ್ವಾಮಿ ಮತ್ತು ವಿ.ಸೋಮಣ್ಣನವರು ಲಿಂಗಾಯಿತರು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದರೆ ಯಡಿಯೂರಪ್ಪನವರಿಗೆ ಕಲ್ಲು ಹೊಡೆದಂತೆ ಅಂತಾ ಹೇಳಿಕೆ ನೀಡಿದ್ದಾರೆ. ಯಾವುದೇ ಪಕ್ಷ ಜಾತಿ, ಧರ್ಮ ಆಧಾರಿತವಾಗಿ ಮತ ಕೇಳುವಂತಿಲ್ಲ. ಇದು ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗಿದ್ದು, ಈ ಇಬ್ಬರ ಸಚಿವರ ಮೇಲೆ ದೂರು ನೀಡುತ್ತೇವೆ. ಇದಕ್ಕೆ ಕಾನೂನಿನಲ್ಲಿ 3 ವರ್ಷ ಶಿಕ್ಷೆ ಇದೆ. ಕೂಡಲೇ ಇವರಿಬ್ಬರನ್ನು ಬಂಧಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಸಿಎಂ ಯಡ್ಡಿಗೆ ಬೆಲೆ ಇಲ್ಲ :
ಸಿಎಂ ಯಡಿಯೂರಪ್ಪನವರಿಗೆ ಏನು ಬೆಲೆ ಇದೆ. ಅಕ್ರಮ ಗಣಿಗಾರಿಕೆಯಲ್ಲಿ ಸಾಕಷ್ಟು ಕೇಸುಗಳಿವೆ. ಅಕ್ರಮ ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ದಿನನಿತ್ಯ ಬಿಜೆಪಿ ಪಕ್ಷದಲ್ಲಿ ಅವರಿಗೆ ಅನ್ಯಾಯ, ಅಪಮಾನ ಗಳಾಗುತ್ತಿವೆ. ಇಂಥವರಿಗೆ ಯಾರು ಬೆಲೆ ಕೊಡುತ್ತಾರೆ.? ಇವರಿಗೆ ನಾಚಿಕೆಯಾಗಲ್ಲಾ ? ಎಂದ ಅವರು, ಲಿಂಗಾಯಿತರು ಯಾವಾಗ್ಲೂ ಜಾತಿ ನೋಡಿ ಮತ ಹಾಕುವುದಿಲ್ಲ. ವಿಷಯಾಧಾರಿತ ವಿಚಾರದಲ್ಲಿ ಬೆಂಬಲಿಸುತ್ತಾರೆ. ಹಾಗಾಗಿ ಇವರು ಹೇಳಿದಂತೆ ಏನು ನಡೆಯೋದಿಲ್ಲ ಎಂದರು.
ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಪ್ರಧಾನಿ ಮೋದಿ, ಅಮಿತ್ ಶಾ ಈ ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಒಂದು ಕಡೆ ಹಣದ ಮದ ಇರುವ ವ್ಯಕ್ತಿ, ಇನ್ನೊಂದು ಕಡೆ ಸರಳ, ಸಜ್ಜನ ವ್ಯಕ್ತಿತ್ವವುಳ್ಳ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹಾಗಾಗಿ ವೆಂಕಟರಾವ್ ಘೋರ್ಪಡೆಯವರನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಆರಿಸಿ.