ಹೂವಿನಹಡಗಲಿ:
ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ, ಒಂದು ಅರ್ಥಪೂರ್ಣ ಹಾಗೂ ಭವ್ಯವಾದ ಏಳುಕೋಟಿ ಭಕ್ತರ ಕುಟೀರ ಕಟ್ಟಡ ಸ್ಥಾಪನೆ ಮಾಡುವುದರ ಮೂಲಕ ಹೀಗೂ ಕೂಡಾ ಭಕ್ತಿಯನ್ನು ಸಮರ್ಪಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಕಾಗಿನೆಲೆಯ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 7, 8 ಮತ್ತು 9ರಂದು ಜರುಗುವ ಕುಟೀರ ಉದ್ಘಾಟನೆ, ಹಾಗೂ ಸ್ಥಿರಬಿಂಬ ಸ್ಪಷ್ಟಿಕ ಶಿವಲಿಂಗ ಸ್ಥಾಪನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು. ಮೇ 8 ರಂದು ನಾಡುಕಂಡ ಮುತ್ಸದ್ಧಿ ರಾಜಕಾರಣಿ, ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಟೀರದ ಉದ್ಘಾಟನೆಗೆ ಆಗಮಿಸಲಿದ್ದು, ಭಕ್ತಾಧಿಗಳು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಕೇವಲ ಹೂವಿನಹಡಗಲಿ ತಾಲೂಕು ಒಂದರಲ್ಲಿಯೇ ಭಕ್ತಾಧಿಗಳಿಂದ ಕೋಟ್ಯಾಂತರ ರೂಗಳನ್ನು ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸುವುದರ ಮೂಲಕ ಕಾಗಿನೆಲೆ ಗುರುಪೀಠದ ಶ್ರೀಗಳು ಮಾದರಿಯಾಗಿದ್ದಾರೆ ಎಂದು ಸಚಿವರು ಪ್ರಸಂಶೆ ವ್ಯಕ್ತಪಡಿಸಿದರು.
ಅಂದು ನಡೆಯುವ ಶುಭ ಸಮಾರಂಭಗಳಲ್ಲಿ ನಾಡಿನ ಅನೇಕ ಹರ-ಗುರು ಚರಮೂರ್ತಿಗಳು, ಪಾಲ್ಗೊಳ್ಳುವುದರ ಮೂಲಕ ನೂತನ ವಧು-ವರರನ್ನು ಆಶೀರ್ವದಿಸಿ, ನೂತನವಾಗಿ ನಿರ್ಮಾಣಗೊಂಡ ಶಾಖಾ ಪೀಠವು ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶೀರ್ವದಿಸಲಿದ್ದಾರೆ. ಇಂತಹ ಒಂದು ಅದ್ಭುತ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಾವೆಲ್ಲರೂ ಕೂಡಾ ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರಿದರು.
ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಹಡಗಲಿ ಬ್ಲಾಕ್ ಕಾಂಗೈ ಅಧ್ಯಕ್ಷರಾದ ಎಂ.ಪರಮೇಶ್ವರಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಹಾಲೇಶ, ಎಲ್.ಚಂದ್ರನಾಯ್ಕ, ವಾರದ ಗೌಸ್ಮೊಹಿದ್ದೀನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.