ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ವಂಚನೆ: ಸಚಿವ ಮಾಧುಸ್ವಾಮಿ

ತುಮಕೂರು

     ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ವಿತರಣೆ ಮಾಡಬೇಕಾಗಿದ್ದ ಆಹಾರ ಧಾನ್ಯಗಳ ಕಿಟ್‍ಗಳನ್ನು ರಾಜಕಾರಣಿಗಳಿಗೆ, ಖಾಸಗಿಯವರಿಗೆ ನೀಡಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

     ಸೋಮವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಮುಂದುವರೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಮಿಕ ಇಲಾಖೆಯಿಂದ ಪಡೆದ ಆಹಾರ ಧಾನ್ಯಗಳ ಕಿಟ್‍ಗಳ ಮೇಲೆ ರಾಜಕಾರಣಿಗಳು, ಖಾಸಗಿಯವರು ತಮ್ಮ ಹೆಸರನ್ನು ಮುದ್ರಿಸಿ ವಿತರಿಸಿರುವುದು ಕಂಡು ಬಂದಿದೆ. ಇದರಿಂದ ಅಧಿಕಾರಿಗಳು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದೂರುಗಳು ಕೇಳಿ ಬಂದಿವೆ ಎಂದು ತರಾಟೆ ತೆಗೆದುಕೊಂಡರು.

    ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರಿಗೆ ಕಡಕ್ ನಿರ್ದೇಶನ ನೀಡಿದರು.

      ಇಂಜಿನಿಯರುಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು, ಆ ಪ್ರದೇಶದಲ್ಲಿರುವ ಜನಸಂಖ್ಯೆ, ಕೊಳವೆ ಬಾವಿಗಳ ಸಂಖ್ಯೆ, ನೀರಿನ ಮೂಲ, ಸಮಸ್ಯೆಗಳ ಮಾಹಿತಿಯನ್ನು ಕೂಡಲೇ ಒದಗಿಸಬೇಕು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚೆನ್ನವೀರಸ್ವಾಮಿಯವರಿಗೆ ಸೂಚನೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಬಗ್ಗೆ ಸಲ್ಲಿಸಿರುವ ಮಾಹಿತಿ ಸುಳ್ಳಿನಕಂತೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಕೆಡಿಪಿ ಸಭೆಗೆ ಒದಗಿಸುವ ಮಾಹಿತಿ ನಿಖರವಾಗಿರಬೇಕು. ಮಾಹಿತಿಯಲ್ಲಿ ಲೋಪವಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದರು.

      ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಸುಮಾರು 40 ಸಾವಿರ ಮನೆಗಳು ನಿರ್ಮಾಣವಾಗದೆ ಬಾಕಿ ಉಳಿದಿವೆ. ಈ ಪೈಕಿ 24977 ಮನೆಗಳು ತಳಪಾಯ, ಗೋಡೆ, ಛಾವಣಿ ಹಂತದಲ್ಲಿದ್ದರೆ ಉಳಿದ 15955 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಕೈಗೆತ್ತಿಕೊಳ್ಳದೆ ಇರಲು ಕಾರಣವೇನೆಂದು ಕೇಳಿದಾಗ ಸಂಬಂಧಿಸಿದ ಅಧಿಕಾರಿ ಉತ್ತರಿಸಲು ತಡವರಿಸಿದರು.

      ನಂತರ ಕಂದಾಯ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು, ಸರ್ಕಾರ ನೀಡುತ್ತಿರುವ ವಿವಿಧ ಪಿಂಚಣಿ ಸೌಲಭ್ಯಕ್ಕಾಗಿ ಸಲ್ಲಿಸಿರುವವರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರಲು ಕಾರಣವೇನೆಂದು ಮಾಹಿತಿ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ, ಮನಸ್ವಿನಿ, ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಒಟ್ಟು 35356 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂಚೆ ಕಛೇರಿ ಮೂಲಕ ಪಾವತಿಯಾಗುವ ಪಿಂಚಣಿದಾರರಿಗೆ ಮಾತ್ರ ಸಕಾಲದಲ್ಲಿ ಪಿಂಚಣಿ ಪಾವತಿಯಾಗಿಲ್ಲ. ಉಳಿದಂತೆ ನೇರವಾಗಿ ಖಾತೆಗೆ ಜಮೆಯಾಗುವವರಿಗೆ ಪಿಂಚಣಿ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

     ಜಿಲ್ಲೆಯ ಎಲ್ಲಾ ತಹಶೀಲ್ದಾರರು ಪ್ರತಿವಾರ ಕಡ್ಡಾಯವಾಗಿ ಪಿಂಚಣಿ ಅದಾಲತ್‍ಗಳನ್ನು ನಡೆಸಿ ಪಿಂಚಣಿ ಕೋರಿ ಸ್ವೀಕರಿಸಿದ ಅರ್ಜಿಗಳನ್ನು 45 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು. ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ಪಿಂಚಣಿ ಮಾಡಿಸಿಕೊಡುತ್ತೇನೆಂದು ಬಡವರಿಂದ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದು, ಹೋಬಳಿವಾರು ಪಿಂಚಣಿ ಅದಾಲತ್‍ಗಳನ್ನು ನಡೆಸಿ ಮಧ್ಯವರ್ತಿಗಳನ್ನು ಸಂಪರ್ಕಿಸದಿರಲು ಜನರಿಗೆ ಅಧಿಕಾರಿಗಳು ಅರಿವು ಮೂಡಿಸಬೇಕೆಂದರು. ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಪಿಂಚಣಿ ಅದಾಲತ್‍ಗಳು ಕಡಿಮೆ ಸಂಖ್ಯೆಯಲ್ಲಿ ಏರ್ಪಡಿಸಿರುವುದು ನಿರಾಶೆ ತಂದಿದೆ ಎಂದರು.

     ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸದೆ ಪ್ರಯಾಣಿಕರು ರೈಲು ಹತ್ತಿ-ಇಳಿಯಲು ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಬಹುಪಾಲು ಕಚ್ಚಾರಸ್ತೆಗಳಾಗಿ ಮಾರ್ಪಾಡಾಗಿವೆ. ಹಾಳಾದ ರಸ್ತೆಗಳ ದುರಸ್ತೆಗೆ ಕ್ರಮವಹಿಸಬೇಕೆಂದರಲ್ಲದೆ ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಭೂಸ್ವಾಧೀನಕ್ಕೊಳಗಾಗುವ ಪ್ರದೇಶಗಳಲ್ಲಿರುವ ಅಡಿಕೆ-ತೆಂಗಿನ ಗಿಡಗಳ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ನಿರ್ದೇಶಿಸಿದರು.

     ಜಿಲ್ಲೆಯಲ್ಲಿ ಗಾರ್ಮೆಂಟ್ಸ್ ನೌಕರರ ಅನುಕೂಲಕ್ಕಾಗಿ ಅವಶ್ಯಕತೆ ಇರುವ ಕಡೆ ಬಸ್ ವ್ಯವಸ್ಥೆ ಮಾಡಬೇಕೆಂದು ಕೆಎಸ್.ಆರ್.ಟಿ.ಸಿ. ಅಧಿಕಾರಿಗೆ ನಿರ್ದೇಶನ ನೀಡಿದರು.ಸಭೆಯಲ್ಲಿ ಶಾಸಕರಾದ ಜ್ಯೋತಿಗಣೇಶ್, ತುರುವೇಕೆರೆ ಶಾಸಕ ಜಯರಾಂ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸ್ಥಾಯಿಸಮಿತಿ ಅಧ್ಯಕ್ಷೆ ಮಂಜುಳ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿ.ಪಂ. ಉಪಕಾರ್ಯದರ್ಶಿ ರಮೇಶ್, ನಗರ ಪಾಲಿಕೆ ಆಯುಕ್ತ ಭೂಬಾಲನ್, ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap